ದಿನಸಿ ಮತ್ತಿತರ ಅಂಗಡಿಗಳಲ್ಲಿ ವಲಸಿಗರಿಗೆ ಉದ್ಯೋಗಾವಕಾಶಕ್ಕೆ ಕುತ್ತು

Update: 2017-07-26 07:25 GMT

ರಿಯಾದ್,ಜು.26 :  ದಿನಸಿ ಮತ್ತಿತರ ಅಂಗಡಿಗಳಲ್ಲಿ  ವಲಸಿಗರಿಗೆ ಉದ್ಯೋಗಾವಕಾಶಗಳನ್ನು ನಿರ್ಬಂಧಿಸಿ ಹೆಚ್ಚು ಮಂದಿ ಸೌದಿಗಳಿಗೆ ಉದ್ಯೋಗ ದೊರೆಯುವಂತೆ ಮಾಡಲು ಅಲ್ಲಿನ ಸರಕಾರ ನಿರ್ಧರಿಸಿದೆ.

ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಸಿದ್ಧಪಡಿಸಿರುವ ಕರಡು ನಿರ್ಣಯದಂತೆ ಇಂತಹ ಅಂಗಡಿಗಳಲ್ಲಿನ ಶೇ. 100ರಷ್ಟು ಉದ್ಯೋಗಗಳನ್ನು ಸೌದಿಗಳಿಗೇ ಮೀಸಲಿರಿಸಲಾಗುವುದು. ಇದರಿಂದ ಆರಂಭದ ವರ್ಷದಲ್ಲಿಯೇ ಸೌದಿಗಳಿಗೆ 20,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವವು.

ಅಂತೆಯೇ ಆಹಾರ ಮತ್ತು ತಂಪು ಪಾನೀಯಗಳ ವ್ಯಾನುಗಳಲ್ಲಿನ ಉದ್ಯೋಗಗಳನ್ನೂ ಸೌದಿಗಳಿಗೇ ಮೀಸಲಿರಿಸಲು ಸಚಿವಾಲಯ ನಿರ್ಧರಿಸಿದ್ದು ಇದರಿಂದ ಸೌದಿಗಳಿಗೆ  6000 ಉದ್ಯೋಗಾವಕಾಶಗಳು ದೊರೆಯಲಿವೆ.

ಸೌದಿ ಗಜೆಟ್ ವರದಿಯೊಂದರ ಪ್ರಕಾರ ಅಲ್ಲಿನ ಶೌರಾ ಕೌನ್ಸಿಲ್ ಇತ್ತೀಚೆಗೆ ಕಾರ್ಮಿಕ, ಸಾಮಾಜಿಕ ಅಭಿವೃದ್ಧಿ ಹಾಗೂ ಮುನಿಸಿಪಲ್ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯಗಳಿಗೆ ಸಣ್ಣ ಅಂಗಡಿಗಳನ್ನು ಮುಚ್ಚಿ ದೊಡ್ಡ ಸಂಖ್ಯೆಯಲ್ಲಿ ಸೌದಿ ಯುವಕ, ಯುವತಿಯರಿಗೆ  ಉದ್ಯೋಗ ನೀಡಲು ಸಮರ್ಥವಾಗಿರುವ ಸ್ಟೋರುಗಳಿಗೆ ಮಾತ್ರ  ರಿಟೇಲ್ ಲೈಸನ್ಸ್  ನೀಡಬೇಕೆಂದು ಹೇಳಿದೆ. ಇಂತಹ ಒಂದು ಕ್ರಮದಿಂದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಕೌನ್ಸಿಲ್ ಅಭಿಪ್ರಾಯ ಪಟ್ಟಿದೆ.

ಟೆಲಿಕಾಂ ರಂಗದ ಸೌದೀಕರಣದಿಂದಾಗಿ 8000 ಸೌದಿ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗ ದೊರೆತಿದೆಯೆಂದು ಹೇಳಲಾಗಿದೆ. ಬಾಡಿಗೆಗೆ ಕಾರು ಒದಗಿಸುವ ಕಚೇರಿಗಳಲ್ಲಿಯೂ 5,000 ಸೌದಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಯಿದೆ.

ಆರೋಗ್ಯ ಕ್ಷೇತ್ರದಲ್ಲಿ ಸಚಿವಾಲಯ ಇತ್ತೀಚೆಗೆ 7,500 ವೈದ್ಯರು, ದಾದಿಯರು ಹಾಗೂ ತಂತ್ರಜ್ಞರನ್ನು ಗುತ್ತಿಗೆಯಾಧಾರದಲ್ಲಿ ನೇಮಿಸಿದೆ. ಮೂಲಗಳ ಪ್ರಕಾರ 2020ರ ಅಂತ್ಯದ ವೇಳೆಗೆ 93,000 ಸೌದಿ ಪ್ರಜೆಗಳಿಗೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ದೊರೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News