​ಲಿಂಗಾಯತ ಸ್ವತಂತ್ರ ಧರ್ಮ: ತೋಂಟದಾರ್ಯ ಶ್ರೀ

Update: 2017-07-26 16:24 GMT

ಗದಗ, ಜು.26: ಲಿಂಗಭೇದವಿಲ್ಲದ ಸಮಾನ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಲಿಂಗಾಯತ ಧರ್ಮದ ತತ್ವ, ಸಿದ್ಧಾಂತಗಳು ವೀರಶೈವಕ್ಕಿಂತ ಭಿನ್ನವಾದುದು ಎಂದು ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಜರಗಿದ 2,338ನೆಯ ಶಿವಾನುಭವ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವೀರಶೈವ ಧರ್ಮದಲ್ಲಿ ಸಂಸ್ಕೃತಕ್ಕೆ ಪ್ರಾಧಾನ್ಯತೆ ಇದೆ. ಅಲ್ಲದೇ ಬಹುದೇವೋಪಾಸನೆ, ಜಾತಿ, ವರ್ಗ ವರ್ಣ, ಲಿಂಗದಲ್ಲಿ ಭೇದ ಕಾಣಬಹುದಾಗಿದೆ. ಹೋಮ ಹವನಗಳಿವೆ. ದೇವರ ಹೆಸರಿನಲ್ಲಿ ಶೋಷಣೆ ಇದೆ. ಆದರೆ, ಇದಾವುದೂ ಲಿಂಗಾಯತ ಧರ್ಮದಲ್ಲಿಲ್ಲ. ಈ ರೀತಿಯ ಆಚಾರಗಳನ್ನು ಶರಣರು ಖಂಡಿಸುತ್ತಾರೆ. ವೀರಶೈವ ಮತ್ತು ಲಿಂಗಾಯತ ಒಂದೇ ಆಗಿರಲು ಸಾಧ್ಯವಿಲ್ಲ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆಯ ಅಗತ್ಯವಿದೆ ಎಂದು ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಡಾ. ಎಚ್.ತಿಪ್ಪೇರುದ್ರಸ್ವಾಮಿ ರಚಿಸಿದ ‘ಕರ್ತಾರನ ಕಮ್ಮಟ’ದ ಕುರಿತು ಪ್ರವಚನವನ್ನು ನೀಡಿದ ಗಿರಿಜಕ್ಕ ಧರ್ಮರೆಡ್ಡಿ, ಉತ್ತಮ ವಿಚಾರಗಳನ್ನು, ಸಂತ ಮಹಾಂತರ ಜೀವನವನ್ನು ಶ್ರವಣ ಮಾಡುವ ಮೂಲಕ ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ. ಸತ್‌ಚಿಂತನೆ, ಸದ್ವಿಚಾರಗಳು ಮನುಷ್ಯನ ಮೇಲೆ ಪ್ರಭಾವ ಬೀರಿ, ಸಾಮಾನ್ಯನು ಅಸಾಮಾನ್ಯನಾಗಲು ಸಾಧ್ಯವಾಗಿಸುತ್ತವೆ. ಬಯಲನ್ನು ರೂಪವಾಗಿಸಿ, ರೂಪವನ್ನೇ ಬಯಲಾಗಿಸಿದ ಬಸವಣ್ಣನವರು ಜಗದ ವಿಸ್ಮಯ ಎಂದು ತಿಳಿಸಿದರು.

 ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಮತ್ತು ನಾರಾಯಣ ಹಿರೇಕೊಳಚಿ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರಗಿತು. ಪಲ್ಲವಿ ಗಡಾದ ಧರ್ಮಗ್ರಂಥ ಪಠಿಸಿದರು. ಸಂಜನಾ ನಾಗರಳ್ಳಿ ಅವರು ವಚನ ಚಿಂತನೆಯನ್ನು ನೆರವೇರಿಸಿದರು. ಪರಶುರಾಮ ನಾಯ್ಕರ, ನಗರಸಭಾ ಸದಸ್ಯರಾದ ಜ್ಯೋತಿ ಇರಾಳ ವೇದಿಕೆಯಲ್ಲಿದ್ದರು.

ವಿರೂಪಾಕ್ಷಪ್ಪಬಳ್ಳೊಳ್ಳಿ, ದಾನಯ್ಯ ಗಣಾಚಾರಿ, ಅಕ್ಕಮಹಾದೇವಿ ಚೆಟ್ಟಿ, ಚೇತನ ಅಂಗಡಿ, ರಮೇಶ ಕಲ್ಲನಗೌಡ್ರ, ಸಿದ್ದಲಿಂಗೇಶ ಲಕ್ಕುಂಡಿ, ಶಿವನಗೌಡ ಗೌಡರ, ಕುಮಾರಸ್ವಾಮಿ ಹಿರೇಮಠ, ಬಸವರಾಜ ಹೆರಕಲ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಮಂಜುಳಾ ಹಾಸಲಕರ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News