2017ರ ಟೂರ್ನಿಗಳಿಂದ ಹೊರಗುಳಿದ ಜೊಕೊವಿಕ್

Update: 2017-07-26 18:32 GMT

ಬೆಲ್‌ಗ್ರೇಡ್, ಜು.26: ಮೊಣಕೈನೋವಿನಿಂದ ಬಳಲುತ್ತಿರುವ 12 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಈ ಋತುವಿನಲ್ಲಿ ಉಳಿದ ಯಾವುದೇ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬುಧವಾರ ಘೋಷಿಸಿದ್ದಾರೆ.

ಈ ತಿಂಗಳು ನಡೆದಿದ್ದ ವಿಂಬಲ್ಡನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಥಾಮಸ್ ಬೆರ್ಡಿಕ್ ವಿರುದ್ಧ ಆಡುವಾಗ ಸರ್ಬಿಯ ಆಟಗಾರ ಜೊಕೊವಿಕ್‌ಗೆ ಮೊಣಕೈ ನೋವು ಕಾಣಿಸಿಕೊಂಡ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದರು. ಇದೀಗ ಅವರು ಮುಂದಿನ ತಿಂಗಳು ಆರಂಭವಾಗಲಿರುವ ಯುಎಸ್ ಓಪನ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

‘‘ತಾನು ಒಂದೂವರೆ ವರ್ಷದಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದು 2017ರಲ್ಲಿ ಇನ್ನು ಯಾವುದೇ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವುದಿಲ್ಲ’’ಎಂದು ವಿಶ್ವದ ಮಾಜಿ ನಂ.1 ಆಟಗಾರ ಜೊಕೊವಿಕ್ ಫೇಸ್‌ಬುಕ್ ವೀಡಿಯೊದಲ್ಲಿ ತಿಳಿಸಿದ್ದಾರೆ.

‘‘ಈ ಕ್ಷಣದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದಕ್ಕೆ ಬೇಸರವಾಗುತ್ತಿದೆ. ನನಗೆ ಆಗಿರುವ ನೋವನ್ನು ನೆನಪಿಸಿಕೊಂಡರೆ ವಿಂಬಲ್ಡನ್ ಟೂರ್ನಿ ನನಗೆ ಅತ್ಯಂತ ಕಠಿಣವಾಗಿತ್ತು’’ ಎಂದು ಜೊಕೊವಿಕ್ ಹೇಳಿದರು.

2015ರ ಜನವರಿಯಿಂದ 2016ರ ಜೂನ್ ತನಕ ಜೊಕೊವಿಕ್ ಆಡಿರುವ 24 ಟೂರ್ನಿಗಳಲ್ಲಿ 22 ಬಾರಿ ಫೈನಲ್ ತಲುಪಿದ್ದು ಈ ಪೈಕಿ 17ರಲ್ಲಿ ಜಯ ಸಾಧಿಸಿದ್ದರು. ಈ ವೇಳೆ ವಿಶ್ವ ಟೆನಿಸ್‌ನಲ್ಲಿ ಜೊಕೊವಿಕ್‌ರ ಪ್ರಾಬಲ್ಯ ಮುರಿಯಲು ಯಾರಿಗೂ ಸಾಧ್ಯವಾಗಿರಲಿಲ್ಲ. ಆದರೆ, 2016ರಲ್ಲಿ ಫ್ರೆಂಚ್ ಓಪನ್ ಜಯಿಸಿದ ಬಳಿಕ ಮತ್ತೊಂದು ಪ್ರಮುಖ ಪ್ರಶಸ್ತಿ ಜಯಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆಸ್ಟ್ರೇಲಿಯನ್ ಓಪನ್‌ನಲ್ಲಿ 2ನೆ ಸುತ್ತಿನಲ್ಲಿ ಹೊರ ನಡೆದಿದ್ದ ಜೊಕೊವಿಕ್ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News