ಗುಜರಾತ್ ನಲ್ಲಿ ಒಂದೇ ಕುಟುಂಬದ 18 ಸದಸ್ಯರು ನೆರೆಗೆ ಬಲಿ

Update: 2017-07-27 10:16 GMT

ಪಾಲನ್ ಪುರ್,ಜು.27: ಗುಜರಾತ್ ರಾಜ್ಯದ ಬಾನಸ್ಕಂತ ಎಂಬಲ್ಲಿಬನ ಖರಿಯಾ ಗ್ರಾಮದಲ್ಲಿ ಒಂದೇ ಕುಟುಂಬಕ್ಕೆ ಸೇರಿದ 18 ಮಂದಿಯ ಶವಗಳು ನದಿ ತೀರವೊಂದರಲ್ಲಿ ಪತ್ತೆಯಾಗಿದ್ದು ರಾಜ್ಯದಲ್ಲಿ  ನೆರೆಯಿಂದ ಸಾವಿಗೀಡಾದವರ ಸಂಖ್ಯೆಯನ್ನು 119ಕ್ಕೆ ಏರಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸಾವಿಗೀಡಾದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

 ಶವಗಳು ಒಂದಾದ ಮೇಲೊಂದರಂತೆ ನದಿ ತೀರದಲ್ಲಿ ಕೆಸರಿನ ರಾಶಿಯಲ್ಲಿ ಪತ್ತೆಯಾದಾಗ ಗ್ರಾಮಸ್ಥರು ದಂಗಾಗಿದ್ದರು. ಸಾವಿಗೀಡಾದವರೆಲ್ಲರೂ ಇತರ ಹಿಂದುಳಿದ ವರ್ಗವಾದ ಠಾಕೊರ್ ಸಮುದಾಯಕ್ಕೆ ಸೇರಿದವರಾಗಿದ್ದರು. ಮೃತರಲ್ಲಿ ಎಂಟು ಮಂದಿ ಮಹಿಳೆಯರು ಹಾಗೂ ಒಬ್ಬಳು ಎಂಟು ವರ್ಷದ ಬಾಲಕಿ ಸೇರಿದ್ದಾರೆ.

ಬಾನಸ್ ನದಿ ನೀರಿನ ಮಟ್ಟದಲ್ಲಿ ಏರಿಕೆಯಾದಾಗ ನೆರೆ ಎಚ್ಚರಿಕೆಯನ್ನು ಪಡೆದಿದ್ದ 30 ಗ್ರಾಮಗಳಲ್ಲಿ ಖರಿಯಾ ಗ್ರಾಮ ಕೂಡ ಸೇರಿತ್ತು. ಹದಿನೆಂಟು ಮಂದಿಯೂ ಮಂಗಳವಾರ ರಾತ್ರಿಯೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿರಬೇಕು ಎಂದು  ಅಧಿಕಾರಿಗಳು ಹೇಳುತ್ತಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಬಿ ಎಸ್ ಎಫ್ ತಂಡಗಳು ಸಹಕರಿಸುತ್ತಿವೆ.

 ಧರೋಯಿ ಜಲಾಶಯದಿಂದ 1.24 ಲಕ್ಷ ಕ್ಯೂಸೆಕ್ಸ್ ನೀರು ಹೊರ ಹರಿಯಲು ಬಿಟ್ಟ ಕಾರಣ  ಭಾವನಗರ್-ಅಹ್ಮದಾಬಾದ್ ಹೆದ್ದಾರಿ ಕೂಡ ನೀರಿನಿಂದಾವೃತವಾಗಿತ್ತು. ಇಪ್ಪತ್ತು ಗ್ರಾಮಗಳ ಕನಿಷ್ಠ 3,858 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದಾಂತಿವಾಡ  ತಾಲೂಕಿನ ದಾಭಿಪುರ ಕೂಡ ನೆರೆ ಹಾವಳಿಯಿಂದ ಕಂಗೆಟ್ಟಿದ್ದು ಮನೆ ಬಿಟ್ಟು ತೆರಳಿದ್ದ ಹಲವು ಕುಟುಂಬಗಳು ಬುಧವಾರ ಮರಳಿ ಬಂದಾಗ ಅವರ ಎಲ್ಲಾ ವಸ್ತುಗಳೂ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿದು ಕಂಗಾಲಾಗಿವೆ. ಮನೆಗಳೂ ಸಾಕಷ್ಟು ಹಾನಿಗೊಳಗಾಗಿವೆ.

ಬುಧವಾರ ನೆರೆಪೀಡಿತ ಪ್ರದೇಶಗಳಲ್ಲಿನ ಕನಿಷ್ಠ 650 ಮಂದಿಯನ್ನು ರಕ್ಷಿಸಲಾಗಿದ್ದರೆ ಅವರಲ್ಲಿ 272 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News