ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯರ ರ್ಯಾಲಿ

Update: 2017-07-27 13:45 GMT

ಬೆಂಗಳೂರು, ಜು. 27: ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಬಸ್‌ಪಾಸ್ ಸೌಲಭ್ಯ, ಹಾಸ್ಟೆಲ್ ವ್ಯವಸ್ಥೆ, ಕರಾಟೆ ತರಬೇತಿ ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಕಾರ್ಯಕರ್ತೆಯರು ನಗರದ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ ರ್ಯಾಲಿ ನಡೆಸಿದರು.

ಗುರುವಾರ ಎಐಎಂಎಸ್‌ಎಸ್‌ನ ರಾಜ್ಯ ಸಮಿತಿ ಮುಖಂಡರಾದ ಈಶ್ವರಚಂದ್ರ ವಿದ್ಯಾಸಾಗರ ಅವರ ನೆನಪಿನಲ್ಲಿ ಏರ್ಪಡಿಸಿದ್ದ ರ್ಯಾಲಿನಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಎಸ್.ಶೋಭಾ, ವಿದ್ಯಾಸಾಗರರು ಹೆಣ್ಣುಮಕ್ಕಳ ಶಿಕ್ಷಣ, ಬಾಲ್ಯವಿವಾಹ ನಿಷೇಧ, ವಿಧವಾ ವಿವಾಹ ಸೇರಿದಂತೆ ಮಹಿಳಾಪರ ವಿಚಾರಗಳಿಗಾಗಿ ಹೋರಾಡಿದ್ದರು ಎಂದು ಸ್ಮರಿಸಿದರು. ಸಮಾಜದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ, ಗಣಿತ, ವಿಜ್ಞಾನ, ತರ್ಕಶಾಸ್ತ್ರಗಳು ಅವಶ್ಯ. ಮಹಿಳೆಯರಲ್ಲಿ ಬೇರೂರಿದ್ದ ಮೌಢ್ಯ, ಕಂದಾಚಾರಗಳ ವಿರುದ್ಧ ಅವರು ರೂಪಿಸಿದ ಹೋರಾಟ ಇಂದಿಗೂ ಸ್ಫೂರ್ತಿ. ನಮ್ಮ ಸಮಾಜದಲ್ಲಿನ ಮಹಿಳೆಯರ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ ಎಂದರು.

ವಯಸ್ಸಿನ ಅಂತರವಿಲ್ಲದೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳು ವರದಿಯಾಗುತ್ತಿವೆ. ‘ಭೇಟಿ ಬಚಾವೋ-ಭೇಟಿ ಪಡಾವೋ’ ಎಂಬ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ಹಣವನ್ನು ಸರಕಾರಗಳು ಕಡಿತಗೊಳಿಸುತ್ತಿವೆ ಎಂದು ಅವರು ದೂರಿದರು.

ಕೇವಲ ಶೇ.1ರಷ್ಟು ಹೆಣ್ಣು ಮಕ್ಕಳು ಮಾತ್ರ ಉನ್ನತ ವ್ಯಾಸಂಗಕ್ಕೆ ಹೋಗಲು ಸಾಧ್ಯವಾಗಿದೆ. ‘ಸ್ವಚ್ಛ ಭಾರತ’ದ ಘೋಷಣೆ ಎತ್ತುತ್ತಿರುವ ಸರಕಾರ ಸರಕಾರಿ ಶಾಲೆಗಳಲ್ಲಿ ಕನಿಷ್ಠ ಶೌಚಾಲಯಗಳ ಸೌಲಭ್ಯ ಕಲ್ಪಿಸಿಲ್ಲ. ಶೌಚಾಲಯಗಳಿದ್ದರೆ ನೀರಿನ ಕೊರತೆ, ಇವುಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದರು. ಮುಖಂಡರಾದ ಎ.ಶಾಂತಾ, ಚೇತನಾ, ಸಿಂಧೂರಾ, ಗೀತಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News