ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಂದ ಮುಖ್ಯಮಂತ್ರಿಗಳಿಗೆ ಪತ್ರ

Update: 2017-07-27 13:48 GMT

ಬೆಂಗಳೂರು, ಜು.27: ನಮ್ಮ ಮೆಟ್ರೋದಲ್ಲಿ ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮೆಟ್ರೋ ಸಂಸ್ಥೆ ಪ್ರಾರಂಭವಾದಾಗಿನಿಂದಲೂ ಆಡಳಿತ ಹಾಗೂ ನಾಮ ಫಲಕದಲ್ಲಿ ಭಾಷಾ ನೀತಿಯನ್ನು ಉಲ್ಲಂಘಿಸುತ್ತಾ ಬರಲಾಗುತ್ತಿದೆ. ಮೆಟ್ರೋ ಅಧಿಕಾರಿಗಳು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಮೆಟ್ರೋ ಸಂಸ್ಥೆಯ ಜಾಲತಾಣಗಳು ಸಂಪೂರ್ಣವಾಗಿ ಆಂಗ್ಲಭಾಷೆಯಲ್ಲಿದ್ದು, ಕನ್ನಡ ವಿರೋಧಿ ನೀತಿಗೆ ಸ್ಪಷ್ಟವಾದ ನಿದರ್ಶನವಾಗಿದೆ ಎಂದು ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಬಿಎಂಆರ್‌ಸಿಎಲ್ ಸಂಸ್ಥೆಯಲ್ಲಿ ಸ್ವಚ್ಛತೆ, ಭದ್ರತಾ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಹಾಗೂ ಮೆಟ್ರೋ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳು ಜನ ಮುಖ್ಯ ಎಂಜಿನಿಯರ್‌ಗಳು ಕನ್ನಡೇತರರಾಗಿದ್ದಾರೆ. ಆ ಮೂಲಕ ನಾಡಿನಲ್ಲಿರುವ ಪ್ರತಿಭಾನ್ವಿತ ಎಂಜಿನಿಯರ್‌ಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮೆಟ್ರೋದಲ್ಲಿ ಕನ್ನಡ ವಿರೋಧಿ ವಾತಾವರಣ ನಿರ್ಮಾಣವಾಗಿರುವುದಕ್ಕೆ ಅಲ್ಲಿರುವ ಕೆಲವು ಅಧಿಕಾರಿಗಳು ಪ್ರಮುಖ ಕಾರಣರಾಗಿದ್ದಾರೆ. ಅಂತಹ ಅಧಿಕಾರಿಗಳನ್ನು ಸರಕಾರ ಗುರುತಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು, ಕನ್ನಡ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರದ ಮುಖೇನ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News