ನ್ಯಾಯಾಲಯ ಆದೇಶ ಪಾಲಿಸದ ಹಿಂದಿನ ತಹಶೀಲ್ದಾರ್ ವಿರುದ್ಧ ಹೈಕೋರ್ಟ್ ಗರಂ

Update: 2017-07-27 15:00 GMT

ಬೆಂಗಳೂರು, ಜು.27: ನ್ಯಾಯಾಲಯದ ಆದೇಶ ಪಾಲಿಸದೆ ನಿರ್ಲಕ್ಷ ಧೋರಣೆ ಅನುಸರಿಸಿರುವ ಕುಣಿಗಲ್ ತಾಲೂಕಿನ ಹಿಂದಿನ ತಹಶೀಲ್ದಾರ್ ರಮೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಲು ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಹುಲಿಯೂರು ದುರ್ಗದ ರಾಜ್ಯಹೆದ್ದಾರಿಯ ರಸ್ತೆ ಅಗಲೀಕರಣದ ವೇಳೆ ಗ್ರಾಮಸ್ಥರಿಗೆ ಸೇರಿದ ಕೆಲ ಕಟ್ಟಡಗಳನ್ನು ನೆಲಸಮಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶ ಪಾಲಿಸದ ಸಂಬಂಧ ದಾಖಲಾಗಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಹಾಗೂ ಎಸ್.ಸುಜಾತ ಅವರಿದ್ದ ಏಕಸದಸ್ಯ ಪೀಠ,ಈ ವೌಖಿಕ ಎಚ್ಚರಿಕೆ ನೀಡಿತು.

ವಿಚಾರಣೆ ವೇಳೆ ನ್ಯಾಯಾಲಯದ ಆದೇಶ ಪಾಲಿಸದೇ ಅರ್ಜಿದಾರರ ಕಟ್ಟಡಗಳನ್ನು ನೆಲಸಮಗೊಳಿಸಿದ ತಹಶೀಲ್ದಾರ್ ಕ್ರಮಕ್ಕೆ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಅಧಿಕಾರಿಗಳ ಈ ಧೋರಣೆಯನ್ನು ಸಹಿಸುವುದಿಲ್ಲ ಹಿಂದಿನ ತಹಶೀಲ್ದಾರ್ ರಮೇಶ್ ಅಮಾನತಿಗೆ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಸಿತು. ಜೊತೆಗೆ ಮುಂದಿನ ವಿಚಾರಣೆ ವೇಳೆ ಕಟ್ಟಡ ನೆಲಸಮಗೊಳಿಸಿದ್ದ ಪ್ರಕರಣ ಸಂಬಂಧಿಸಿದಂತೆ ಅಧಿಕಾರಿ ಅಫಿಡವಿಟ್ ಸಲ್ಲಿಸಿ ಖುದ್ದು ಹಾಜರಿರಬೇಕು. ಜೊತೆಗೆ ಪ್ರತಿವಾದಿಗಳಾದ ತುಮಕೂರು ಜಿಲ್ಲಾಧಿಕಾರಿ ಮೋಹನ್ ರಾಜ್, ಯೋಜನಾ ನಿರ್ದೇಶನ ತ್ಯಾಗರಾಜು ಕೂಡ ಖುದ್ದು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಬೇಕು ಎಂದು ನೋಟಿಸ್ ಜಾರಿಗೊಳಿಸಿ ಜುಲೈ 31ಕ್ಕೆ ವಿಚಾರಣೆ ಮುಂದೂಡಿತು.

ರಸ್ತೆ ಅಗಲೀಕರಣದ ವೇಳೆ ಗ್ರಾಮಸ್ಥರಿಗೆ ಸೇರಿದ ಕೆಲ ಕಟ್ಟಡಗಳನ್ನು ನೆಲಸಮಗೊಳಿಸದಂತೆ ಹೈಕೋರ್ಟ್ ನೀಡಿದ್ದ ಆದೇಶ ಪಾಲಿಸದೇ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಹೀಗಾಗಿ ಸಂತ್ರಸ್ಥರಾದ ಎಚ್.ಎಸ್ ಚಂದ್ರಶೇಖರ್, ಕೆ.ಎಸ್ ರಾಘವೇಂದ್ರ, ಎಸ್.ಬಿ ಲತಾ ಸೇರಿದಂತೆ 12 ಮಂದಿ ಗ್ರಾಮಸ್ಥರು, ಅಂದಿನ ತಹಶೀಲ್ದಾರ್ ರಮೇಶ್ (ಈಗ ವರ್ಗಾವಣೆಯಾಗಿದ್ದಾರೆ) ಯೋಜನಾ ನಿರ್ದೇಶಕ ತ್ಯಾಗರಾಜು, ಜಿಲ್ಲಾಧಿಕಾರಿ ಮೋಹನ್ ರಾಜ್, ಉಪವಿಭಾಗಾಧಿಕಾರಿ, ಹುಲಿಯೂರು ದುರ್ಗ ಪಿಡಿಓ, ಎಕ್ಸಿಕ್ಯುಟೀವ್ ಎಂಜಿನಿಯರ್ ವಿರುದ್ದ ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News