ನರ್ಸಿಂಗ್ ಹೋಮ್ ವಿರುದ್ಧ ಆರೋಗ್ಯ ಸಚಿವರಿಂದಲೇ ಪೊಲೀಸರಿಗೆ ದೂರು

Update: 2017-07-27 16:47 GMT

ಬೆಂಗಳೂರು, ಜು.27:ಬನ್ನೇರುಘಟ್ಟ ರಸ್ತೆಯಲ್ಲಿರುವ ರೈನ್‌ಬೋ ನರ್ಸಿಂಗ್ ಹೋಮ್ ವಿರುದ್ಧ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ರೈನ್ ಬೋ ನರ್ಸಿಂಗ್ ಹೋಮ್‌ನಲ್ಲಿ ದಾಖಲಾಗಿದ್ದ ತುಮಕೂರಿನ ಲಕ್ಷ್ಮೀ ಎಂಬುವರ ಪುತ್ರಿ ಸುಪ್ರಿಯಾ ಎಂಬ 8 ವರ್ಷದ ಮಗಳಿಗೆ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರವೇ ಖರ್ಚು ಭರಿಸುವುದಾಗಿ ಹೇಳಿದ್ದರೂ ಈವರೆಗೂ ಬಾಲಕಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿಯು ಡಿಸ್ಚಾರ್ಜ್ ಮಾಡಿಲ್ಲ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಚಿವರು ಆಯುಕ್ತರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ವಿವರ: ಜ್ವರ ಬಂದ ಹಿನ್ನೆಲೆಯಲ್ಲಿ ಮಗಳನ್ನು ಆಸ್ಪತ್ರೆಗೆ ಲಕ್ಷ್ಮೀ ಎಂಬುವರು ದಾಖಲಿಸಿದ್ದರು. ದಾಖಲಾಗಿ ಕೆಲ ದಿನದ ಬಳಿಕವು ಮಗಳ ಆರೋಗ್ಯದಲ್ಲಿ ಸುಧಾರಣೆಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗಬೇಕಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿತ್ತು.

ಇದರಂತೆ ತಮ್ಮ ಮಗಳನ್ನು ಡಿಸ್ಚಾರ್ಜ್ ಮಾಡಬೇಕಾದರೆ ಕೂಡಲೇ ಪ್ರಸ್ತುತ 2 ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಪಾವತಿಬೇಕು. ಇಲ್ಲದಿದ್ದರೆ ಮಗಳನ್ನು ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ತಾಕೀತು ಮಾಡಿತ್ತು. ಆದರೆ, ಲಕ್ಷ್ಮೀ ಬಳಿ ಹಣವಿಲ್ಲದ ಕಾರಣ, ನೇರವಾಗಿ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡಿದ್ದಾರೆ.

 ಇದಕ್ಕೆ ಸ್ಪಂದಿಸಿದ ಸಚಿವರು ರೋಗಿಯ ವಿವರ ಪಡೆದುಕೊಂಡು ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಹಣ ಪಾವತಿಸುವುದಾಗಿ ಆಪ್ತ ಕಾರ್ಯದರ್ಶಿ ಮೂಲಕ ಆಸ್ಪತ್ರೆಯ ಮುಖ್ಯಸ್ಥರಿಗೆ ಭರವಸೆ ನೀಡಿ, ಕೂಡಲೇ ನಿಮ್ಹಾನ್ಸ್‌ಗೆ ದಾಖಲಿಸಲು ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.

ಆರಂಭದಲ್ಲಿ ಆಸ್ಪತ್ರೆ ಮುಖ್ಯಸ್ಥರು ಸಚಿವರ ಮಾತಿಗೆ ಸಮ್ಮತಿ ಸೂಚಿಸಿದ್ದರೂ, ತದ ನಂತರ ಸಚಿವರ ಮಾತನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಸಂಬಂಧ ಮತ್ತೆ ಆಸ್ಪತ್ರೆಗೆ ದೂರವಾಣಿ ಮೂಲಕ ಮುಖ್ಯಸ್ಥರನ್ನು ಸಂಪರ್ಕಿಸಲು ಪ್ರಯತ್ನಪಟ್ಟರೂ ಈವರೆಗೂ ಯಾವುದೇ ಕರೆಗೆ ಉತ್ತರಿಸಿಲ್ಲ. ಅಲ್ಲದೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಹ ಮಾಡಿಲ್ಲ. ಒಂದು ವೇಳೆ ಬಾಲಕಿಗೆ ತೊಂದರೆ ಉಂಟಾದರೆ ಆಸ್ಪತ್ರೆಯೇ ನೇರ ಹೊಣೆ ಹೊರಬೇಕಾಗಿದೆ ಎಂದು ಸಚಿವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News