ಜೈಲು ಬಾಡಿಗೆಗಿದೆ.. ಷರತ್ತುಗಳು ಅನ್ವಯ!

Update: 2017-07-28 03:50 GMT

ಹೈದರಾಬಾದ್, ಜು.28: ಜೈಲು ಬಾಡಿಗೆಗಿದೆ ಎಂಬ ಸುದ್ದಿಯನ್ನು ಎಲ್ಲಾದರೂ ಕೇಳಿದ್ದೀರಾ? ಈ ವಿಶೇಷ ಸುದ್ದಿ ಬಂದಿರುವುದು ಭಾರತದ ಅತ್ಯಂತ ಎಳೆಯ ರಾಜ್ಯ ಎನಿಸಿಕೊಂಡ ತೆಲಂಗಾಣದಿಂದ. ರಾಜ್ಯದಲ್ಲಿ ಖಾಲಿ ಇರುವ ಜೈಲು ಸೆಲ್‌ಗಳನ್ನು ಪ್ರತೀ ಕೈದಿಗೆ ಮಾಸಿಕ 10 ಸಾವಿರ ರೂಪಾಯಿ ಬಾಡಿಗೆ ಆಧಾರದಲ್ಲಿ, ಅಧಿಕ ಕೈದಿಗಳನ್ನು ಹೊಂದಿರುವ ಇತರ ರಾಜ್ಯಗಳಿಗೆ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

ಆದರೆ ಇದಕ್ಕೆ ಕೆಲವೊಂದು ಷರತ್ತುಗಳೂ ಇವೆ. ಈ ಜೈಲು ಹಂಚಿಕೆ ಸೇವೆ ಲಭ್ಯವಿರುವುದು ಘೋರ ಅಪರಾಧ ಅಥವಾ ಗಂಭೀರ ಅಪರಾಧ ಹೊರತುಪಡಿಸಿ ಇತರ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರಿಗೆ ಮಾತ್ರ. ವಿಚಾರಣಾಧೀನ ಕೈದಿಗಳು ಅಥವಾ ಕುಖ್ಯಾತ ಕ್ರಿಮಿನಲ್‌ಗಳಿಗೆ ಇಲ್ಲಿ ಅವಕಾಶ ಇಲ್ಲ.

"ನಾರ್ವೆಯಲ್ಲಿ ಅಪರಾಧ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜೈಲನ್ನು ಸ್ಥಳಾವಕಾಶದ ಕೊರತೆ ಇರುವ ಅಕ್ಕಪಕ್ಕದ ದೇಶಗಳಿಗೆ ಬಾಡಿಗೆಗೆ ನೀಡುವ ಪದ್ಧತಿ ಆರಂಭವಾಗಿದೆ. ಇದನ್ನು ನಾವೂ ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇವೆ" ಎಂದು ಕಾರಾಗೃಹಗಳ ಮಹಾನಿರ್ದೇಶಕ ವಿ.ಕೆ.ಸಿಂಗ್ ಪ್ರಕಟಿಸಿದ್ದಾರೆ.

ತೆಲಂಗಾಣದ 50 ಜೈಲುಗಳಲ್ಲಿ 6,848 ಕೈದಿಗಳಿಗೆ ಸ್ಥಳಾವಕಾಶವಿದೆ. ಆದರೆ ಪ್ರಸ್ತುತ 6,063 ಕೈದಿಗಳು ಮಾತ್ರ ಇದ್ದು, 800ಕ್ಕೂ ಹೆಚ್ಚು ಕೈದಿಗಳನ್ನು ಸುಲಭವಾಗಿ ಸೇರಿಸಿಕೊಳ್ಳಬಹುದಾಗಿದೆ ಎನ್ನುವುದು ಅವರ ವಿವರಣೆ. ಇದಕ್ಕೆ ಯಾವ ತರಾತುರಿಯೂ ಇಲ್ಲ. ಮೊದಲು ನಮ್ಮ ಕೈದಿಗಳ ಸಂಖ್ಯೆಯನ್ನು ಸ್ಥಿರಗೊಳಿಸಿ, ಬಳಿಕ ಅಗತ್ಯವಿರುವ ರಾಜ್ಯಗಳಿಗೆ ಈ ಸೇವೆ ಒದಗಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ನ್ಯಾಯಾಂಗ ಪ್ರಕ್ರಿಯೆ ನಿಧಾನವಾಗಿರುವ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಕೈದಿಗಳು ತುಂಬಿ ತುಳುಕುತ್ತಿದ್ದಾರೆ. ಹೊಸ ಜೈಲುಗಳನ್ನು ನಿರ್ಮಾಣ ಮಾಡುವುದು ಆರ್ಥಿಕವಾಗಿ ದೊಡ್ಡ ಹೊರೆ ಎಂಬ ಕಾರಣಕ್ಕೆ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕೈದಿಗಳನ್ನು ಜೈಲುಗಳಲ್ಲಿ ಇರಿಸಿಕೊಳ್ಳಲಾಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಹಾಗೂ ಉತ್ತರ ಪ್ರದೇಶ ಸಂಭಾವ್ಯ ಗ್ರಾಹಕ ರಾಜ್ಯಗಳಾಗಿವೆ. ಕೈದಿಗಳ ವಸತಿ, ಊಟ, ಭದ್ರತೆ, ಸಂದರ್ಶಕರ ಭೇಟಿ, ಕೌಶಲ ತರಬೇತಿ ಸೇರಿದಂತೆ ಪ್ರತೀ ಕೈದಿಗೆ ಮಾಸಿಕ 10 ಸಾವಿರ ರೂಪಾಯಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News