ಸುಷ್ಮಾ ಸ್ವರಾಜ್ ಗೆ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಸಲ್ಲಿಸಿದ ಪಾಕ್ ಮಹಿಳೆ

Update: 2017-07-28 06:54 GMT

ಹೊಸದಿಲ್ಲಿ, ಜು.28: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮಲ್ಲಿ ನೆರವು ಕೇಳಿದವರಿಗೆ ತಕ್ಷಣ ಸ್ಪಂದಿಸಿ ಅವರ ಸಂಕಷ್ಟಗಳನ್ನು ದೂರ ಮಾಡಿ ಸಾವಿರಾರು ಮಂದಿಯ ಪ್ರೀತಿಗೆ ಪಾತ್ರರಾಗಿರುವುದು ಹೊಸತೇನಲ್ಲ. ಅವರ ಅಭಿಮಾನಿಗಳ ಪಟ್ಟಿಯಲ್ಲಿ ಇದೀಗ ಪಾಕಿಸ್ತಾನಿ ಮಹಿಳೆಯೊಬ್ಬಳೂ ಸೇರಿಕೊಂಡಿದ್ದು, ಸುಷ್ಮಾ ತನಗೆ ಮಾಡಿದ ಸಹಾಯವನ್ನು ಕೊಂಡಾಡಿರುವ ಆಕೆ ಹೇಳಿದ್ದು ಮಾತ್ರ ಆಕೆಯ ದೇಶದ ಪ್ರಧಾನಿ ನವಾಝ್ ಶರೀಫ್ ಅವರಿಗೆ ಇಷ್ಟವಾಗಲಿಕ್ಕಿಲ್ಲ.

‘‘ನಮ್ಮಿಂದ ಬಹಳಷ್ಟು ಪ್ರೀತಿ ಮತ್ತು ಗೌರವ ನಿಮಗೆ. ನೀವು ನಮ್ಮ ಪ್ರಧಾನಿಯಾಗಬೇಕಿತ್ತು. ಈ ದೇಶ ಬದಲಾಗುತ್ತಿತ್ತು’’ ಎಂದು ಹಿಜಾಬ್ ಅಸೀಫ್ ಎಂಬ ಮಹಿಳೆ ಟ್ವೀಟ್ ಮಾಡಿದ್ದಾಳೆ. ಪಾಕಿಸ್ತಾನಿ ಪ್ರಜೆಯೊಬ್ಬರಿಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿರುವುದರಿಂದ ಅವರಿಗೆ ಸಹಾಯ ಮಾಡುವಂತೆ ಹಿಜಾಬ್ ಅವರು ಸುಷ್ಮಾ ಅವರನ್ನು ವಿನಂತಿಸಿದ್ದರು.

ಇದಕ್ಕೆ ಕೂಡಲೇ ಸ್ಪಂದಿಸಿದ್ದ ಸುಷ್ಮಾ ಇಸ್ಲಾಮಾಬಾದ್ ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರಲ್ಲದೆ ಸಂಬಂಧಿಸಿದ ವ್ಯಕ್ತಿಗೆ ವೀಸಾ ದೊರೆಯುವಂತೆ ನೋಡಿಕೊಂಡಿದ್ದರು.

ಇದಕ್ಕೂ ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಸಾಮ ಅಲಿ ಎಂಬ ವ್ಯಕ್ತಿಯ ಲಿವರ್ ಟ್ಯೂಮರ್ ಚಿಕಿತ್ಸೆಗಾಗಿ ದಿಲ್ಲಿಗೆ ಆಗಮಿಸಲು ಅವರು ಸಹಕರಿಸಿದ್ದರು. ಪಾಕಿಸ್ತಾನದ ವಿದೇಶಾಂಗ ಸಲಹೆಗಾರ ಸರ್ತಾಝ್ ಅಝೀರ್ ತನ್ನ ವೀಸಾಗಾಗಿ ಭಾರತೀಯ ಹೈಕಮಿಷನ್ನಿಗೆ ಬರೆಯಲು ನಿರಾಕರಿಸಿದ್ದರು ಎಂದೂ ಅಲಿ ವಿವರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸುಷ್ಮಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕೂಡ ಭಾರತದ ಭಾಗವೇ ಆಗಿರುವುದರಿಂದ ಅವರು ಪಾಕಿಸ್ತಾನದಿಂದ ಯಾವುದೇ ಪತ್ರ ಪಡೆಯುವ ಅಗತ್ಯವಿಲ್ಲ ಎಂದಿದ್ದರು.

ಹಿಜಾಬ್ ಅಸೀಫ್ ಅವರ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮುನ್ನ ಇಂತಹ ಗಂಭೀರ ಪ್ರಕರಣದ ವಿಚಾರದಲ್ಲೂ ಸರ್ತಾಝ್ ಅವರು ಪತ್ರ ನೀಡಲು ನಿರಾಕರಿಸಿದ್ದರೇ ಎಂದು ಸುಷ್ಮಾ ಪ್ರಶ್ನಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ಪಾಕಿಸ್ತಾನಿ ಮಹಿಳೆಯನ್ನು ವಿವಾಹವಾಗಿದ್ದ ಭಾರತೀಯನೊಬ್ಬ ಆಕೆಗಾಗಿ ವೀಸಾ ಕೇಳಿದಾಗ ಸುಷ್ಮಾ ಮಾಡಿದ್ದ ಟ್ವೀಟ್ ಹೀಗಿತ್ತು ‘‘ಭಾರತದ ಪುತ್ರಿಯರು ಮತ್ತು ಸೊಸೆಯಂದಿರು ಪಾಕಿಸ್ತಾನ ಅಥವಾ ಬೇರೆ ಯಾವುದೇ ದೇಶದವರಾಗಿದ್ದರೂ ಭಾರತಕ್ಕೆ ಸದಾ ಅವರಿಗೆ ಸ್ವಾಗತವಿದೆ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News