ಸಂತೋಷದಲ್ಲಿದ್ದರೆ ಯಾರೂ ಹಣ ಕೊಡುವುದಿಲ್ಲ ಎಂದು ನಗುವುದನ್ನೇ ನಿಲ್ಲಿಸಿಬಿಟ್ಟೆ : ಬಿಜೋಯ್ ದಾಸ್

Update: 2017-07-28 08:57 GMT

ಇಡೀ ದಿನ ಭಿಕ್ಷಾಟನೆ ನಡೆಸಿದ ನಂತರ ನನಗೆ ಒಬ್ಬ ವ್ಯಕ್ತಿ ಭಿಕ್ಷೆ ನೀಡಿದ. ನನ್ನ ಹೊಟ್ಟೆ ತುಂಬುವ ಸಲುವಾಗಿ ನಾನು ನನ್ನ ಜೀವನದಲ್ಲಿ ಭಿಕ್ಷೆ ಬೇಡಿದ್ದು ಇದೇ ಮೊದಲು. ನಾನು ಎರಡು ದಿನಗಳಿಂದ ಹಸಿದಿದ್ದೆ. ಹಣ ದೊರಕಿದಾಕ್ಷಣ, ರಸ್ತೆ ಪಕ್ಕದಲ್ಲಿ ಕುಳಿತು ಅಳಲಾರಂಭಿಸಿದೆ. ನನಗೆ 11 ವರ್ಷವಾಗಿತ್ತು. ಒಂದೇ ದಿನದಲ್ಲಿ ನಾನು ಮಗುವಿನಿಂದ ಭಿಕ್ಷುಕನಾಗಿ ಬಿಟ್ಟಿದ್ದೆ.  ಎಲ್ಲಿಯಾದರೂ ಓಡಿ ಹೋಗಿ ನಾನು ಭಿಕ್ಷೆ ಬೇಡಿದ್ದನ್ನು ಮರೆಯಬೇಕೆಂದೆನಿಸಿತು. ಆದರೆ ನಂತರ ಮರುದಿನ ಕೂಡ ನಾನು ಭಿಕ್ಷೆ ಬೇಡಿದೆ ಹಾಗೂ ಹೀಗೆಯೇ ತಿಂಗಳುಗಳ ಕಾಲ ಮುಂದುವರಿಯಿತು.

ನಾನು ಮಗುವಾಗಿರಲಿಲ್ಲ ಹಾಗೂ ನನಗೆ ಹಿತಕರ ಅನುಭವವೂ ಆಗಿರಲಿಲ್ಲ. ಜನರು ನನ್ನನ್ನು ಭಿಕ್ಷುಕನೆಂದು ಕರೆಯಲಾರಂಭಿಸಿದರು. ಯಾರಾದರೂ  ನಾನ್ಯಾರೆಂದು ಕೇಳಿದರೆ  ನಾನೊಬ್ಬ ಭಿಕ್ಷುಕ ಎಂದು ಸುಲಭವಾಗಿ ಹೇಳುತ್ತಿದ್ದೆ. ನಗುವವರಿಗೆ ಯಾರೂ ಭಿಕ್ಷೆ ನೀಡದೇ ಇದ್ದುದರಿಂದ ನಾನು ನಗುವುದನ್ನು ನಿಲ್ಲಿಸಿದೆ. ಭಿಕ್ಷೆ ಬೇಡಲು ಸಪ್ಪಗೆ ಮುಖ ಮಾಡಬೇಕಿತ್ತು. ನಾನು ತಲೆ ಮೇಲೆತ್ತಿ ನೋಡುವುದನ್ನು ನಿಲ್ಲಿಸಿದೆ ಹಾಗೂ ನನ್ನ ಕಾಲುಗಳನ್ನೇ ನೋಡುತ್ತಿದ್ದೆ.  ಪ್ರತಿ ದಿನ ನನಗೆ ಕೆಟ್ಟ ಅನುಭವವಾಗುತ್ತಿತ್ತು. ನನಗೆ ಬೇರೆ ಕೆಲಸ ಗೊತ್ತಿರಲಿಲ್ಲ ಹಾಗೂ ಹೋಗಲೂ ಯಾವುದೇ ಸ್ಥಳವಿರಲಿಲ್ಲ.

ನಾನು ಭಿಕ್ಷೆ ಬೇಡುತ್ತಿದ್ದ ಸ್ಥಳದಲ್ಲಿ ಕಾಶಿಂ ಮಿಯಾ ಎಂಬ ಹಲ್ಲಿಲ್ಲದ ಮುದಕನೊಬ್ಬನಿದ್ದ. ಆತನ ವಯಸ್ಸು 90. ಆತ ಶೂ ರಿಪೇರಿ ಮಾಡುತ್ತಾ ಯಾವತ್ತೂ ನಗುತ್ತಿರುವುದನ್ನು ನೋಡುತ್ತಿದ್ದೆ. ಒಂದು ದಿನ ಬೆಳಿಗ್ಗೆ ನಾನು ಆತನ ಬಳಿ ಹೋಗಿ ಆತ ಕೆಲಸ ಆರಂಭಿಸುವ ಮೊದಲು ಎಲ್ಲಾ ವಸ್ತುಗಳನ್ನು ಹೇಗೆ ನೀಟಾಗಿ ಜೋಡಿಸುತ್ತಾನೆಂದು ನೋಡಿದೆ. ಈ ವಯಸ್ಸಿನಲ್ಲಿ ಆತ ಎಲ್ಲರಿಗೂ ಅಜ್ಜನಂತಿರುವಾಗ,  ಇನ್ನೊಬ್ಬರ ಶೂಗಳನ್ನು  ಪಾಲಿಶ್ ಮಾಡುವಾಗ ಹೇಗನಿಸುತ್ತದೆ ಎಂದು ಕೇಳಿದೆ.  ಹಲ್ಲಿಲ್ಲದ ಕಾಶಿಂ ಮಿಯಾ ಜೋರಾಗಿ ನಕ್ಕು ಬಿಟ್ಟ ಆದರೆ ನನಗೆ ಉತರ ನೀಡಲಿಲ್ಲ. ಆತನಿಂದ ಕೆಲಸ ಕಲಿಯಬೇಕೆಂದಷ್ಟೇ ಆತ  ನನಗೆ ಹೇಳಿದ.

ನನಗೆ ಆಶ್ಚರ್ಯವಾಯಿತು, ಆದರೆ ಚಮ್ಮಾರನಾಗಲು ನಾನು ಒಪ್ಪಲಿಲ್ಲ. ಸಿಟ್ಟಿನಿಂದ ಅಲ್ಲಿಂದ ಹೊರಟು ಬಿಟ್ಟೆ.  ಆದರೆ ಅದೇ ದಿನ ನಾನಲ್ಲಿಗೆ ಹೋಗಿ ಆತನನ್ನು ಹಿಂಬಾಲಿಸಿ ಆತನ ಮನೆಗೆ ಹೋದೆ. ಆ ಮುದುಕನಿಂದ ನಾನು ಎಲ್ಲವನ್ನೂ ಕಲಿತೆ.  ಆತ ನನಗೆ ಕೆಲಸಕ್ಕೆ ಬೇಕಾದ ವಸ್ತುಗಳನ್ನೆಲ್ಲಾ ನೀಡಿದ. ನನ್ನ ಮೊದಲ ದಿನದ ಕೆಲಸದ ವೇಳೆ ಆತ ತೀರಾ ಅಸ್ವಸ್ಥನಾಗಿದ್ದ. ಆದರೆ ಈ ಹೊಸ ಕೆಲಸದ ಬಗ್ಗೆ ನನಗೆ ಬಹಳ ಹೆದರಿಕೆಯಿತ್ತು. 

``ಬಿಜೊಯ್, ನೀನು ಪ್ರಾಮಾಣಿಕವಾಗಿ ಉತ್ತವಾಗಿ ಕೆಲಸ ಮಾಡಿದರೆ ನಿನಗೆ ಯಾವತ್ತೂ ಕಹಿ ಅನುಭವಾಗುವುದಿಲ್ಲ.  ನಿನಗೆ ಕಹಿ ಅನುಭವವಾಗುತ್ತಿದ್ದರೆ ನೀನು ಏನೋ ತಪ್ಪು ಮಾಡುತ್ತಿದ್ದಿರಬೇಕು,''ಎಂದು ಕಾಶಿಂ ಮಿಯಾ ನನ್ನನ್ನು ಬರಸೆಳೆದು ಹೇಳಿದ. ನನ್ನ ಜೀವನದ ಕಳೆದ 44 ವರ್ಷಗಳಲ್ಲಿ ನಾನು ಬಡತನ ಹಾಗೂ ಹಸಿವಿನಿಂದ ಬಳಲಿದ್ದೇನೆ ಆದರೆ ಯಾವತ್ತೂ ನನಗೆ ಮತ್ತೆ ಕೆಟ್ಟ ಅನುಭವವಾಗಲಿಲ್ಲ.

- ಬಿಜೋಯ್ ದಾಸ್ (55)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News