ಕೇರಳ ಜೆಡಿಯುವಿನಿಂದ ಸೋಶಲಿಸ್ಟ್ ಜನತಾದಳಕ್ಕೆ ಮರುಜೀವ ನೀಡಲು ಚಿಂತನೆ

Update: 2017-07-28 09:00 GMT

ಕ್ಯಾಲಿಕಟ್,ಜು.28: ಬಿಹಾರದಲ್ಲಿ ಮಹಾಘಟ್‍ಬಂಧನ್(ಮಹಾಮೈತ್ರಿ) ಪತನಗೊಳಿಸಿ ಜೆಡಿಯು ನಾಯಕ ನಿತೀಶ್ ಕುಮಾರ್ ಬಿಜೆಪಿಯೆಡೆಗೆ ವಾಲಿದ್ದರಿಂದ ಜೆಡಿಯು ಕೇಂದ್ರ ನಾಯಕರೊಂದಿಗೆ ಕೇರಳ ಘಟಕ ಸಂಬಂಧವನ್ನು ಕಡಿದುಕೊಂಡಿದೆ. ಇನ್ನುಮುಂದೆ ಎಸ್‍ಜೆಡಿಗೆ(ಸೋಶಲಿಸ್ಟ್ ಜನತಾದಳ) ಮರು ಜೀವ ನೀಡುವ ಚಿಂತನೆಯನ್ನು ರಾಜ್ಯ ನಾಯಕರು ನಡೆಸುತ್ತಿದ್ದಾರೆ. ಬಿಹಾರದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಎಸ್‍ಜೆಡಿಯನ್ನು ಪುನಃ ಜೀವಂತಗೊಳಿಸುವುದಾಗಿ ರಾಜ್ಯನಾಯಕರು ಹೇಳುತ್ತಿದ್ದಾರೆ.

2009ರ ಲೋಕಸಭಾ ಚುನಾವಣೆಯಲ್ಲಿ ಕಲ್ಲಿಕೋಟೆ ಸಿಟ್ಟಿಂಗ್ ಸೀಟನ್ನು ಎಲ್‍ಡಿಎಫ್ ನಿರಾಕರಿಸಿದ್ದರಿಂದ ಜನತಾದಳ ರಾಜ್ಯ ಅಧ್ಯಕ್ಷ ಎಂ.ಪಿ. ವೀರೇಂದ್ರಕುಮಾರ್‍ರ ನೇತೃತ್ವದಲ್ಲಿ ಒಂದು ವಿಭಾಗ ಪಕ್ಷ ತೊರೆದು ಎಸ್‍ಜೆಡಿ ರೂಪೀಕರಿಸಿತ್ತು. ನಂತರ ಯುಡಿಎಫ್‍ನ ಘಟಕಪಕ್ಷವಾಯಿತು. ಕಳೆದ ಯುಡಿಎಫ್ ಆಡಳಿತ ಕಾಲದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‍ರೊಂದಿಗೆ ಚರ್ಚಿಸಿ ಜೆಡಿಯುವಿನಲ್ಲಿ ಎಸ್‍ಜೆಡಿ ವಿಲೀನವಾಗಿತ್ತು. ಆದರೆ ಈಗ ಬಿಜೆಪಿಯೊಂದಿಗೆ ನಿತೀಶ್‍ಕುಮಾರ್ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಯುವಿನೊಂದಿಗೆ ಸಂಬಂಧ ಕಡಿದುಕೊಳ್ಳಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಈ ತಿಂಗಳು ನಡೆದ ರಾಷ್ಟ್ರಪತಿ  ಚುನಾವಣೆಯಲ್ಲಿ ಕೂಡಾ ನಿತೀಶ್ ಕುಮಾರ್‍ರ ನಿಲುವನ್ನು ಕೇರಳದ ನಾಯಕರು ವಿರೋಧಿಸಿದ್ದರು. ಈಗ ಪುನಃ ಎಸ್‍ಜೆಡಿಯನ್ನು ಜೀವಂತಗೊಳಿಸಿ ಎಲ್‍ಎಡಿಎಫ್‍ನೊಂದಿಗೆ  ಮೈತ್ರಿಮಾಡಿಕೊಳ್ಳಲು ಜೆಡಿಯುವಿನೊಂದಿಗೆ ಸಂಬಂಧ ಕಡಿದುಕೊಂಡ ರಾಜ್ಯ ಜೆಡಿಯು ನಾಯಕರು ತೀರ್ಮಾನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News