×
Ad

ಶ್ರೀರಾಮಚಂದ್ರಾಪುರ ಮಠ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ

Update: 2017-07-28 22:03 IST

ಬೆಂಗಳೂರು, ಜು.28: ಹೊಸನಗರದ ಶ್ರೀರಾಮಚಂದ್ರಾಪುರ ಮಠವು ನಗರದ ಗಿರಿನಗರದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು(ಸಿ.ಎ ನಿವೇಶನ) ಒತ್ತುವರಿ ಮಾಡಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ಹಿಂದೆ ಸರಿದಿದ್ದಾರೆ.

    ಗಿರಿನಗರದಲ್ಲಿ ಬಿಬಿಎಂಪಿಯು ಉದ್ಯಾನವವನ್ನು ನಿರ್ಮಿಸಲು 2,600 ಚದರ ಅಡಿ ನಿವೇಶನವನ್ನು ಮೀಸಲಿಟ್ಟಿತ್ತು. ಆದರೆ, ಶ್ರೀರಾಮಚಂದ್ರಾಪುರ ಮಠವು ಈ ನಿವೇಶನದ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ. ಹೀಗಾಗಿ, ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಪವನ್‌ಪ್ರಸಾದ್ ಎಂಬುವರು 2016ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

       ಕಳೆದ ಜೂನ್ 8ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಸಮ್ಮುಖದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯು, ರಾಮಚಂದ್ರಾಪುರ ಮಠವು ಗಿರಿನಗರದಲ್ಲಿ ಒತ್ತುವರಿ ಮಾಡಿದೆ ಎನ್ನಲಾದ ಉದ್ಯಾನ ಜಾಗದ ಪರಿಶೀಲನೆ ನಡೆಸಿ, ಅಲ್ಲಿ ಒತ್ತುವರಿಯಾಗಿದೆಯೇ? ಅಥವಾ ಇಲ್ಲವೇ? ಎಂಬುದರ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತ್ತು.

  ಶುಕ್ರವಾರ ಅರ್ಜಿ ಮತ್ತೆ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ನಾಗನಂದ ಅವರು ವಾದಿಸಿ, ಈ ಪ್ರಕರಣವು ರಾಮಚಂದ್ರಾಪುರ ಮಠಕ್ಕೆ ಸಂಬಂಧಿಸಿದೆ. ಈ ಹಿಂದೆಯೂ ಇದೇ ಮಠಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆಯಿಂದ ನೀವು ಹಿಂದೆ ಸರಿದಿದ್ದೀರಿ ಎಂದು ಮುಖ್ಯ ನ್ಯಾಯಮೂರ್ತಿ ಮುಖರ್ಜಿ ಅವರಿಗೆ ತಿಳಿಸಿದರು. ಇದರಿಂದ ಮುಖ್ಯ ನ್ಯಾಯಮೂರ್ತಿ ಮುಖರ್ಜಿ ಅವರು ಈ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News