ಬಿಸಿಸಿಐಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್

Update: 2017-07-28 18:31 GMT

ಹೊಸದಿಲ್ಲಿ, ಜು.28: ಹನ್ನೊಂದನೆ ಆವೃತ್ತಿಯ ಐಪಿಎಲ್‌ನಲ್ಲಿನ ಮಾಧ್ಯಮ ಹಕ್ಕುಗಳನ್ನು ಇ-ಹರಾಜು ನಡೆಸಬೇಕೆಂದು ಆಗ್ರಹಿಸಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಶುಕ್ರವಾರ ಬಿಸಿಸಿಐಗೆ ನೋಟಿಸ್ ಜಾರಿಗೊಳಿಸಿದೆ.ಸುಮಾರು 30,000 ಕೋಟಿ ರೂ.ಮೊತ್ತದ 11ನೆ ಆವೃತ್ತಿಯ ಐಪಿಎಲ್‌ನ ಮಾಧ್ಯಮಹಕ್ಕುಗಳ ಹರಾಜು ಪಾರದರ್ಶಕವಾಗಿಲ್ಲ. ಹರಾಜು ಪಾರದರ್ಶಕವಾಗಿ ನಡೆಯಬೇಕಾದ ಅಗತ್ಯವಿದೆ. ಇಂಧನ ಹರಾಜಿನಂತೆಯೇ ಇದನ್ನು ಕೂಡ ಇ-ಹರಾಜು ನಡೆಸಲು ಆದೇಶಿಸಬೇಕೆಂದು ಕೋರಿ ಸಂಸದ ಸುಬ್ರಮಣಿಯನ್ ಸ್ವಾಮಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸುಬ್ರಹ್ಮಣ್ಯನ್ ಸ್ವಾಮಿಯ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಸಿಸಿಐ ವಕೀಲರು, ಆಗಸ್ಟ್ 17 ರಂದು ಐಪಿಎಲ್‌ನ ಮುಂದಿನ ಐದು ಆವೃತ್ತಿಗೆ ಪ್ರಸಾರ ಹಕ್ಕುಗಳಿಗೆ ಸಂಬಂಧಿಸಿದ ಹರಾಜು ಪ್ರಕ್ರಿಯೆ ನಡೆಯಲಿದೆ. ಇ-ಹರಾಜು ನಡೆಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟಿನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿ ಸಮಿತಿ(ಸಿಒಎ) ಆ.17ರ ಹರಾಜಿಗೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಹರಾಜಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಲಯ ಬಿಸಿಸಿಐಗೆ ಈ ಕುರಿತು ಉತ್ತರ ನೀಡುವಂತೆ ನೋಟಿಸ್ ನೀಡಿ ಮುಂದಿನ ವಿಚಾರಣೆಯನ್ನು ಆ.22ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News