ದ್ಯುತಿ ಚಂದ್‌ಗೆ ಐಎಎಎಫ್ ಆಹ್ವಾನ

Update: 2017-07-28 18:35 GMT

ಹೊಸದಿಲ್ಲಿ, ಜು.28: ಭಾರತದ ಓಟಗಾರ್ತಿ ದ್ಯುತಿ ಚಂದ್ ಲಂಡನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ (ಐಎ ಎಎಫ್) ಆಗಸ್ಟ್ 4 ರಿಂದ 13ರ ತನಕ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವಂತೆ ದ್ಯುತಿಗೆ ಆಹ್ವಾನ ನೀಡಿದೆ. ಒಡಿಶಾದ ಓಟಗಾರ್ತಿ ದ್ಯುತಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು 100 ಮೀ.ಓಟವನ್ನು 11.26 ಸೆಕೆಂಡ್‌ನಲ್ಲಿ ತಲುಪಬೇಕಾಗಿತ್ತು. ಆದರೆ, ಅವರು 11.30 ಸೆಕೆಂಡ್‌ನಲ್ಲಿ ಈ ಸಾಧನೆ ಮಾಡಿ ಸ್ವಲ್ಪದರಲ್ಲೇ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಭಾಗವಹಿಸುವುದರಿಂದ ವಂಚಿತರಾಗಿದ್ದರು.

 ಜುಲೈ 9ರ ವರೆಗೆ ದ್ಯುತಿ ಸ್ಪರ್ಧಿಸಿದ್ದ 100 ಮೀ.ನ ಐದು ಫೈನಲ್‌ನಲ್ಲಿ ಮೇ 15 ರಂದು ಹೊಸದಿಲ್ಲಿಯಲ್ಲಿ ನಡೆದಿದ್ದ ಇಂಡಿಯನ್ ಗ್ರಾನ್‌ಪ್ರಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವ ಅವಧಿ ಈಗಾಗಲೇ ಕೊನೆಗೊಂಡಿದೆ. ಲಂಡನ್‌ನಲ್ಲಿ 100 ಮೀ. ಓಟದಲ್ಲಿ ಭಾಗವಹಿಸಲು ಒಟ್ಟು 56 ಅಥ್ಲೀಟ್‌ಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅಗ್ರ-100ರೊಳಗಿನ ರ್ಯಾಂಕ್‌ನಲ್ಲಿರುವ ದ್ಯುತಿಗೆ ಐಎಎಎಫ್ ಆಹ್ವಾನ ನೀಡಿದೆ.

 ‘‘ಜಾಗತಿಕ ರ್ಯಾಂಕಿಂಗ್‌ನ್ನು ಆಧರಿಸಿ ದ್ಯುತಿ ಲಂಡನ್ ಚಾಂಪಿಯನ್‌ಶಿಪ್‌ಗೆ ಪರಿಗಣಿಸಲ್ಪಟ್ಟಿದ್ದಾರೆ. ಐಎಎಎಫ್‌ನ ನಿಯಮದ ಪ್ರಕಾರ ಅಥ್ಲೀಟ್ ಆಹ್ವಾನ ಸ್ವೀಕರಿಸಿದ 12 ಗಂಟೆಯೊಳಗೆ ತನ್ನ ನಿರ್ಧಾರವನ್ನು ತಿಳಿಸಬೇಕು. ಆಹ್ವಾನವನ್ನು ತಿರಸ್ಕರಿಸಿದರೆ ಬೇರೆ ಅರ್ಹ ಅಥ್ಲೀಟ್‌ಗೆ ಅವಕಾಶ ನೀಡಲಾಗುತ್ತದೆ’’ ಎಂದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.

‘‘ಅಧಿಕೃತವಾಗಿ ನಾವು ಯಾವುದೇ ಆಹ್ವಾನ ಪತ್ರ ಪಡೆದಿಲ್ಲ. ದ್ಯುತಿ ಬಳಿ ಬ್ರಿಟಿಷ್ ವೀಸಾ ಇದೆ. ಆಹ್ವಾನ ಕೈ ಸೇರಿದರೆ ನಾವು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’’ ಎಂದು ದ್ಯುತಿ ಚಂದ್ ಕೋಚ್ ಎನ್. ರಮೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News