ಯುರೋಪ್ ಹಾಕಿ ಪ್ರವಾಸ: ಹೊಸಬರಿಗೆ ಮಣೆ, ಸರ್ದಾರ್ ಸಿಂಗ್‌ಗೆ ಸ್ಥಾನವಿಲ್ಲ

Update: 2017-07-28 18:40 GMT

ಹೊಸದಿಲ್ಲಿ, ಜು.28: ಬೆಲ್ಜಿಯಂ ಹಾಗೂ ಹಾಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಭಾರತದ ಪುರುಷರ ಹಾಕಿ ತಂಡವನ್ನು ಶುಕ್ರವಾರ ಇಲ್ಲಿ ಪ್ರಕಟಿಸಲಾಗಿದೆ. ಮನ್‌ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ತಂಡದಲ್ಲಿ ಆರು ಹೊಸ ಆಟಗಾರರಿಗೆ ಮಣೆ ಹಾಕಲಾಗಿದ್ದು, ಮಾಜಿ ನಾಯಕ ಸರ್ದಾರ್ ಸಿಂಗ್ ಸಹಿತ ಮೂವರು ಹಿರಿಯ ಆಟಗಾರರಿಗೆ ಸ್ಥಾನ ನಿರಾಕರಿಸಲಾಗಿದೆ.

ಭಾರತ ಆಗಸ್ಟ್ 9 ರಂದು ಬೂಮ್‌ನಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸುವ ಮೂಲಕ ಯುರೋಪ್ ಪ್ರವಾಸವನ್ನು ಆರಂಭಿಸಲಿದೆ. ಚಿಂಗ್ಲೆನ್‌ಸನಾ ಸಿಂಗ್‌ರನ್ನು ಉಪನಾಯಕನಾಗಿ ನೇಮಕಗೊಳಿಸಲಾಗಿದ್ದು, ವಿಶ್ವ ಲೀಗ್ ಸೆಮಿಫೈನಲ್ ತಂಡದಲ್ಲಿದ್ದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

 ಆರು ಹೊಸ ಆಟಗಾರರಾದ ಗೋಲ್‌ಕೀಪರ್ ಸೂರಜ್ ಕರ್ಕೇರ, ಜೂನಿಯರ್ ವಿಶ್ವಕಪ್ ಹೀರೋಗಳಾದ ವರುಣ್ ಕುಮಾರ್, ಡಿಪ್ಸನ್ ಟರ್ಕಿ, ನೀಲಕಂಠ ಶರ್ಮ, ಗುರ್ಜಂತ್ ಸಿಂಗ್ ಹಾಗೂ ಅರ್ಮಾನ್ ಖುರೇಶಿ ಅವಕಾಶ ಪಡೆದಿದ್ದಾರೆ.

2017ರ ಎಚ್‌ಐಎಲ್ ಚಾಂಪಿಯನ್ ಕಳಿಂಗ ಲ್ಯಾನ್ಸರ್ಸ್‌ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪ್ರತಿಭಾವಂತ ಡಿಫೆಂಡರ್ ಹಾಗೂ ಡ್ರಾಗ್‌ಫ್ಲಿಕರ್ ಅಮಿತ್ ರೋಹಿದಾಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಭಾರತ ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ತರಬೇತಿ ನಡೆಸುತ್ತಿದ್ದು, ಆಗಸ್ಟ್ 5 ರಂದು ಯುರೋಪ್‌ಗೆ ಪ್ರವಾಸ ಕೈಗೊಳ್ಳಲಿದೆ. ‘‘ಟೀಮ್ ಮ್ಯಾನೇಜ್‌ಮೆಂಟ್ ಸರಿಯಾದ ತಂಡಕ್ಕಾಗಿ ಎದುರು ನೋಡುತ್ತಿದ್ದು, ಯುವ ಆಟಗಾರರಿಗೆ ಇನ್ನಷ್ಟು ಅವಕಾಶ ನೀಡಲಾಗುವುದು. ಯುವ ಆಟಗಾರರು ಬೆಲ್ಜಿಯಂ ಹಾಗೂ ಹಾಲೆಂಡ್‌ನಂತಹ ಬಲಿಷ್ಠ ತಂಡವನ್ನು ಈಗಲೇ ಎದುರಿಸುವುದು ಅತ್ಯಂತ ಮುಖ್ಯವಾಗಿದೆ’’ ಎಂದು ಮುಖ್ಯ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ ಹೇಳಿದ್ದಾರೆ.

 ಆಗಸ್ಟ್ 9 ರಂದು ಬೆಲ್ಜಿಯಂ ವಿರುದ್ಧ ಮೊದಲ ಪಂದ್ಯವನ್ನಾಡಲಿರುವ ಭಾರತ ಆಗಸ್ಟ್ 10ಕ್ಕೆ ಎರಡನೆ ಪಂದ್ಯ ಆಡಲಿದೆ. ಆ. 13 ಹಾಗೂ 14 ಹಾಗೂ 16 ರಂದು ಹಾಲೆಂಡ್ ವಿರುದ್ಧ ಆಡಲಿದೆ. ಭಾರತದ ಪ್ರಮುಖ ಮಿಡ್‌ಫೀಲ್ಡರ್ ಸರ್ದಾರ್ ಸಿಂಗ್, ಫಾರ್ವರ್ಡ್ ಎಸ್.ವಿ. ಸುನೀಲ್ ಹಾಗೂ ಆಕಾಶ್‌ದೀಪ್ ಸಿಂಗ್‌ರನ್ನು ಕೈ ಬಿಡಲಾಗಿದೆ. ಈ ಮೂವರು ಲಂಡನ್‌ನಲ್ಲಿ ನಡೆದಿದ್ದ ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ನಲ್ಲಿ ಆಡಿದ್ದರು.
ಆಕಾಶ್‌ದೀಪ್ ಹಾಗೂ ಸುನೀಲ್ ಅನುಪಸ್ಥಿತಿಯಲ್ಲಿ ಅರ್ಮಾನ್ ಖುರೇಶಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶ ಲಭಿಸಿದೆ.

ಹಾಕಿ ತಂಡ:

►ಗೋಲ್‌ಕೀಪರ್‌ಗಳು: ಆಕಾಶ್ ಅನಿಲ್ ಚಿಕ್ಟೆ, ಸೂರಜ್ ಕರ್ಕೇರ.
►ಡಿಫೆಂಡರ್‌ಗಳು: ಡಿಪ್ಸನ್ ಟಿರ್ಕಿ, ಕೊಥಜಿತ್ ಸಿಂಗ್, ಗುರ್ವಿಂದರ್ ಸಿಂಗ್, ಅಮಿತ್ ರೋಹಿದಾಸ್, ವರುಣ್ ಕುಮಾರ್.
ಮಿಡ್ ಫೀಲ್ಡರ್‌ಗಳು: ಎಸ್.ಕೆ. ಉತ್ತಪ್ಪ, ಹರ್ಜೀತ್ ಸಿಂಗ್, ಮನ್‌ಪ್ರೀತ್ ಸಿಂಗ್(ನಾಯಕ), ಚಿಂಗ್ಲೆನ್‌ಸನಾ ಸಿಂಗ್(ಉಪ ನಾಯಕ), ಸುಮಿತ್ ನೀಲಕಂಠ ಶರ್ಮ.
►ಫಾರ್ವರ್ಡ್‌ಗಳು: ಮನ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್, ಅರ್ಮಾನ್ ಖುರೇಶಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News