ಆಧುನಿಕ ತಂತ್ರಜ್ಞಾನದ ಬಳಕೆ

Update: 2017-07-29 11:00 GMT

ನಮ್ಮ ಮಗುವು ಟಿವಿ ನೋಡದಿದ್ದರೆ ಊಟವನ್ನೇ ಮಾಡುವುದಿಲ್ಲ, ಮೊಬೈಲ್ ಕೊಡದಿದ್ದರೆ ಅಥವಾ ವೀಡಿಯೊ ಗೇಮ್ ಆಡದಿದ್ದರೆ ಮಂಕಾಗುತ್ತಾನೆ, ಹಟ ಮಾಡುತ್ತಾನೆ, ಅಳುತ್ತಾನೆ; ಇತ್ಯಾದಿ ದೂರುಗಳನ್ನು ಹೊತ್ತು ಬರುವ ಪೋಷಕರು ಅತೀ ಪುಟ್ಟ ಮಗುವಿನ ಹಟಕ್ಕೇನೇ ಶರಣಾಗಿ ಅವರಿಗೆ ಬೇಕಾದುದನ್ನು ಕೊಟ್ಟುಬಿಡುತ್ತಾರೆ. ಯಾಕೆ ಕೊಡ್ತೀರಾ ಅಂದರೆ ಅವರ ಉತ್ತರ ಒಂದೇ, ‘‘ಕೊಡದೇ ಇದ್ದರೆ ಬಿಡೋದಿಲ್ಲ’’.

ನಿಜ ಹೇಳಬೇಕೆಂದರೆ ಪೋಷಕರ ದೌರ್ಬಲ್ಯವನ್ನು ಕಂಡುಕೊಂಡಿರುವ ಜಾಣ ಮಕ್ಕಳು ತಮಗೆ ಬೇಕಾದುದನ್ನು ಹಟ ಮಾಡಿ ಪಡೆಯುವ ತಂತ್ರವನ್ನು ಕಂಡುಕೊಂಡಿರುತ್ತಾರೆ. ಈ ಪೋಷಕರೂ ಕೂಡ ಮಗುವಿನ ಅಳುವಿಗೆ ಕಿರಿಕಿರಿಗೆ ಅಸಹನೆ ವ್ಯಕ್ತಪಡಿಸುತ್ತಾ ಕೈ ಬಿಟ್ಟುಬಿಡುತ್ತಾರೆ. ಅಷ್ಟೇನೂ ಜವಾಬ್ದಾರಿ ಇಲ್ಲದ ಮಗುವು ಏನಾದರೂ ಮಾಡಿಕೊಳ್ಳಲಿ, ಗಲಾಟೆ ಮಾಡದೇ ಇದ್ದರೆ ಸಾಕು ಎನ್ನುವ ಮಟ್ಟಿಗೆ ಯೋಚಿಸುವ ಪೋಷಕರು ಈಗೇನೋ ಹೀಗೆ ಮಾಡುತ್ತಾರೆ. ಆದರೆ, ಅದೇ ಮಕ್ಕಳು ಅದೇ ಹಟಮಾರಿತನದೊಂದಿಗೆ ಬೆಳೆಯುತ್ತಾರೆ ಮತ್ತು ಅದೇ ಗುಣಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಬೆಳೆದ ಮಕ್ಕಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮಾಡಬೇಕಾದ ಕೆಲಸಗಳು, ನಿರ್ವಹಿಸಬೇಕಾದ ಕರ್ತವ್ಯಗಳಿರುತ್ತವೆ. ಆಗ ಪೋಷಕರಿಗೆ ಮಗುವು ಸಮಸ್ಯೆಯಾಗಿ ಕಾಡುತ್ತದೆ.

ಹಾಗೆಯೇ ಮಕ್ಕಳು ಈಗ ಅಂತರ್ಜಾಲ ಬಳಕೆಗೆ ಅಥವಾ ಟಿವಿ, ಕಂಪ್ಯೂಟರ್, ಫೋನ್ ಬಳಕೆಗಳಿಗೆ ಜೋತು ಬೀಳದಿದ್ದರೆ ಮುಂದೆಯೂ ಅವರು ಅದರ ಗೀಳನ್ನು ಹೊಂದಿರುವುದಿಲ್ಲ ಎನ್ನುವಂತಹ ಭ್ರಮೆ ಏನೂ ಬೇಡ. ಈಗ ನಲವತ್ತು, ಐವತ್ತರ ಆಸುಪಾಸಿನಲ್ಲಿರುವವರೆಲ್ಲಾ ಟಿವಿ, ಕಂಪ್ಯೂಟರ್, ಮೊಬೈಲ್ ಏನೂ ನೋಡದೆಯೇ ಹುಟ್ಟಿದವರು, ಅವುಗಳಿಲ್ಲದೆಯೇ ಗೋಲಿ, ಬುಗುರಿ ಆಡಿಕೊಂಡು ಬೆಳೆದವರು. ಆದರೆ ಬಹಳಷ್ಟು ಜನ ಈ ವಯೋಮಾನದವರೂ ಸದಾ ಮೊಬೈಲ್‌ನಲ್ಲಿ ಗೇಮ್ ಆಡಿಕೊಂಡು, ಕಾಫಿ ಆಯ್ತಿ, ತಿಂಡಿ ಆಯ್ತಿ ಅಂತ ಅನಗತ್ಯವಾಗಿ ಅಪರಿಚಿತರೊಡನೆ ಚಾಟ್ ಮಾಡಿಕೊಂಡು, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಕೆಲವರಿಗಂತೂ ಅವರ ಸುದ್ದಿ, ಓದು, ಅಧ್ಯಯನ ಮತ್ತು ಸಂಶೋಧನೆಗಳ ಮೂಲ ಆಕರಗಳೆಲ್ಲವೂ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳಲ್ಲೇ ಆಗಿರುತ್ತದೆ. ಅವುಗಳ ಸ್ಪಂದನ, ಪ್ರತಿಸ್ಪಂದನ ಅಥವಾ ಪ್ರತಿಕ್ರಿಯೆ, ವಿನಿಮಯಗಳಿಗಾಗಿ ಮಾಧ್ಯಮ ಮಾಡಿಕೊಳ್ಳುವುದಕ್ಕಿಂತ ದುಂಡಾವರ್ತಿಯ ಬಳಕೆಯೇ ಅತೀ ಹೆಚ್ಚು ವಯಸ್ಕರಿಂದ ಆಗುತ್ತಿದೆ. ಇದರಿಂದ ತಿಳಿಯುವುದೇನೆಂದರೆ, ಸಣ್ಣ ವಯಸ್ಸಿನ ರೂಢಿಯೇ ದೊಡ್ಡವರಾದ ಮೇಲೂ ಇದ್ದುಬಿಡುತ್ತದೆ. ಅದೇ ಗೀಳಾಗಿ ಹೋಗುತ್ತದೆ ಎಂಬ ಮಾತು ಸುಳ್ಳು ಎಂದು. ಗೀಳು ಎನ್ನುವುದು ಯಾವಾಗಲಾದರೂ, ಯಾವುದರಿಂದಾದರೂ ಆಗಬಹುದು.

ಈಗ ನಮ್ಮೆದುರಿನ ಸದ್ಯದ ಪ್ರಶ್ನೆ ಎಂದರೆ ಮಕ್ಕಳಿಗೆ ಈ ಆಧುನಿಕ ತಂತ್ರಜ್ಞಾನದ ಪರಿಕರಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುವುದು ಹೇಗೆ ಎಂದು ಕಲಿಸಿಕೊಡುವುದು ಅಥವಾ ತರಬೇತಿ ನೀಡುವುದು.

ಗಮನಿಸಬೇಕಾದ ಅಂಶಗಳು.

     1.ಪುಸ್ತಕ ಓದುವುದಕ್ಕಿಂತ ಮತ್ತು ಬರೆಯುವುದಕ್ಕಿಂತ ಅಂತರ್ಜಾಲ ಬಳಕೆ ಹೆಚ್ಚು ಹಿತ ಮತ್ತು ಕಡಿಮೆ ಶ್ರಮ.

     2.ತಮ್ಮದೇ ಆದ ಪರಿಕರವನ್ನು ಹೊಂದಿಲ್ಲದೇ ಇರುವುದರಿಂದ ಮತ್ತು ಅದನ್ನು ದೊಡ್ಡವರು ಹೆಚ್ಚು ಬಳಸುತ್ತಿರುವಾಗ ಅದಕ್ಕೆ ಸಾಕ್ಷಿಯಾಗುವುದರಿಂದ ಅದು ವಿಶೇಷ ಆಕರ್ಷಣೆ.

     3.ಓದುವುದಕ್ಕೆ ಮತ್ತು ಬರೆಯುವುದಕ್ಕೆ ಹಲವಾರು ಸಾಮರ್ಥ್ಯಗಳಿರಬೇಕು. ಅಂದರೆ ಓದಲು ಬರೆಯಲು ಬರಬೇಕು. ವ್ಯಾಕರಣ, ಕಾಗುಣಿತ ಎಲ್ಲಾ ತಿಳಿದಿರಬೇಕು. ಆದರೆ ಅಂತರ್ಜಾಲದಲ್ಲಿ ಅಥವಾ ಫೋನ್‌ಗಳಲ್ಲಿ ಬರಿದೇ ಹಾಡು, ನೃತ್ಯ, ಮತ್ತೇನೋ ನೋಡುವುದು ಸುಖಕರ.

     4.ಬಹಳಷ್ಟು ಜನ ಹಿರಿಯರು ಕೂಡ ಓದದೇ ಇರುವುದಕ್ಕೆ ಕಾರಣ ಅವರಿಗೆ ಜ್ಞಾನದ ಬಗ್ಗೆ ಅಥವಾ ವಿಚಾರಗಳ ಬಗ್ಗೆ ಅಸಡ್ಡೆಯೋ ಅಥವಾ ನಿರಾಸಕ್ತಿಯೋ ಎಂದೇನಿಲ್ಲ. ಆದರೆ ಅವರಿಗೆ ಸರಿಯಾಗಿ ಓದಲುಬಾರದು. ಶಬ್ದಭಂಡಾರದ ಕೊರತೆಯಿಂದ ಅಕ್ಷರಗಳನ್ನು ಕೂಡಿಸಿಕೊಂಡರೂ ಪದಗಳು ಅರ್ಥವಾಗವು. ಇದರಿಂದ ವಿಷಯಗಳನ್ನು ತಿಳಿಯಲಾರರು. ಹಾಗಾಗಿ ಪುಸ್ತಕ ಓದುವುದು ಅಥವಾ ಬರೆಯುವುದು ಒಂದು ರೀತಿಯ ಶ್ರಮದಾಯಕ. ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಇದನ್ನು ಪದೇ ಪದೇ ನಿರೂಪಿಸುತ್ತಿರುತ್ತಾರೆ.

     5.ಮಕ್ಕಳಿಗೆ ಶಾಲೆಯಲ್ಲಿ ಮೊಬೈಲ್ ಮತ್ತು ಅಂತರ್ಜಾಲಗಳ ಬಳಕೆ ಇಲ್ಲದಿರುವ ಕಾರಣ ಅಲ್ಲಿಂದ ಹೊರಗೆ ಬಂದ ಕೂಡಲೇ ಹಿರಿಯರು ಪಡುತ್ತಿ ರುವ ಆ ಪರಿಕರಗಳ ಬಳಕೆಯ ಸುಖ ವನ್ನು ತಾವು ಪಡೆಯಬೇಕೆನ್ನುವಂತಹ ಆಸೆ ಮತ್ತು ಕುತೂಹಲ ಅವರಲ್ಲಿ ಒತ್ತಡವನ್ನು ಉಂಟುಮಾ ಡುತ್ತಿರುತ್ತದೆ. ಆಸೆ ಮತ್ತು ಕುತೂಹಲಗಳು ವ್ಯಕ್ತಿಯ ಮನಸ್ಸಿನಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿಯೇ ಸಹಜವಾಗಿ ಭೌತಿಕವಾಗಿ ಕೈಗೆಟಕುವ ಆ ಪರಿಕರಗಳನ್ನು ಬಳಸುವ ಉತ್ಸಾಹ ಮತ್ತು ಪ್ರೇರೇಪಣೆ ಅವರಲ್ಲಿ ಸದಾ ಇದ್ದೇ ಇರುತ್ತದೆ.

ಮಕ್ಕಳಿಗೆ ಅಂತರ್ಜಾಲ ಬೇಕೇ?

     1.ಮಕ್ಕಳಲ್ಲಿ ಕುತೂಹಲ ಮತ್ತು ಆಸೆ ಇರುವುದು ಸಹಜವಾಗಿರುವುದು ಎಷ್ಟು ಸತ್ಯವೋ ಅವರಿಗೆ ವಿಷಯವನ್ನು ಪರಿಚಯ ಮಾಡಿಸುವುದೂ ನಾವೇ ಎಂಬುದೂ ಸತ್ಯ.

     2.ಮಕ್ಕಳ ಕೈಗೆ ಪರಿಕರಗಳು ಬಂದ ಮೇಲೆ ಅವರು ಅವುಗಳನ್ನು ಉಪಯೋಗಿಸುವಾಗ ಅದು ಹಿರಿ ಯರ ಸುಪರ್ದಿನಲ್ಲಿರಬೇಕು. ಅಂದರೆ ಅವರು ಏನು ಮಾಡುತ್ತಾರೋ ಅದನ್ನು ಎಚ್ಚರಿಕೆಯಿಂದ ಗಮನಿಸುವುದು ಅಥವಾ ಪತ್ತೆದಾರಿಕೆ ಮಾಡುವುದು ಎಂದಲ್ಲ. ಅವರ ಜೊತೆ ತಾವೂ ಭಾಗಿಯಾಗಿ ಬಳಸುವುದು.

    

     3.ಮಕ್ಕಳ ಶೈಕ್ಷಣಿಕ ಅಗತ್ಯ, ಯಾವುದೇ ಸಮಸ್ಯೆಗೆ ಮಾರ್ಗಸೂಚಿ, ಕೆಲಸಕ್ಕೆ ಮಾರ್ಗದರ್ಶನ, ಯಾವುದೋ ಒಂದರ ಅರ್ಥ, ವಿವರಣೆಗಳ ಹುಡುಕಾಟ ಇತ್ಯಾದಿಗಳಿಗೆ ಬಳಕೆ ಮಾಡುವುದು. 4.ಶಬ್ದನಿಘಂಟು ತೆಗೆಯುವ ಬದಲಾಗಿ ಯಾವುದೋ ಪದದ ಅರ್ಥವನ್ನು ತಟ್ಟನೆ ಗೂಗಲ್‌ನಲ್ಲಿ ಹುಡು ಕುವುದು. ಕಲಿಯುತ್ತಿರುವ ಪಾಠದ ವಿವರ ಅಥವಾ ಕೃತಿಯ ಕರ್ತೃವಿನ ಬಗ್ಗೆ ತಿಳಿಯುವುದು. ಯಾವುದೋ ಕರಕುಶಲವಸ್ತುವನ್ನು ಮಾಡುವುದು ಹೇಗೆ ಇತ್ಯಾದಿಗಳನ್ನು ಯೂಟ್ಯೂಬ್‌ಗಳಲ್ಲಿ ನೋಡುವುದು.

     5.ಸಣ್ಣ ಸಣ್ಣ ಕತೆಗಳನ್ನು, ಕುತೂಹಲಕಾರಿ ವಿಚಾರಗಳನ್ನು ಅದರಲ್ಲಿ ಹುಡುಕಿ ತೆಗೆಯುವುದು.

     6.ಕಂಪ್ಯೂಟರ್ ಮತ್ತು ಮೊಬೈಲ್‌ಗಳ ನಿರಂತರ ಬಳಕೆಯಿಂದ ಒಂದೇ ಸಮನೆ ಕುಳಿತುಕೊ ಳ್ಳುವಂತಹ ಅನಿವಾರ್ಯತೆಗಳು ಉಂಟಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಯೂಟ್ಯೂಬ್‌ನಲ್ಲಿ ಕಲಿಸುವಂತಹ ನೃತ್ಯಾಭ್ಯಾಸ ಮತ್ತು ವ್ಯಾಯಾಮ ಗಳಂತಹ ವಿಷಯಗಳನ್ನು ಕೂಡ ಪರಿಚಯಿಸಬೇಕು.

     7.ಅಂತರ್ಜಾಲಗಳಲ್ಲಿ ದೊರಕುವ ವಿಷಯಗಳ ಗುಣಮಟ್ಟವನ್ನು ಅಳೆಯಲು ಮಕ್ಕಳೊಬ್ಬರಿಗೇ ಸಾಧ್ಯವಾಗದ ಕಾರಣ ದೊಡ್ಡವರ ನಿಗಾ ಅಗತ್ಯವಾಗುವುದು.

     8.ಅಂತರ್ಜಾಲದಲ್ಲಿ ಅಶ್ಲೀಲ ಮತ್ತು ಅಸಭ್ಯವಾದ ಅಥವಾ ಮಕ್ಕಳಿಗೆ ಬೇಕಾಗಿಲ್ಲದ ಅನೇಕ ತಾಣಗಳಿರುತ್ತವೆ. ಸುಮಾರು 50 ಲಕ್ಷ ಕಾಮೋದ್ರೇಕಕ್ಕೆ ಸಂಬಂಧಪಟ್ಟಿರುವ ಜಾಲತಾಣಗಳಿದ್ದು, ಒಂದು ತಿಂಗಳಲ್ಲಿ ಸುಮಾರು 80 ಕೋಟಿಗೂ ಮಿಗಿಲಾಗಿ ಜನರು ನೋಡುತ್ತಿರುತ್ತಾರೆ. ಟಾಪ್ನ್ಯೂ ಸಮೀಕ್ಷೆಯ ಪ್ರಕಾರ ಒಂದು ಸೆಕೆಂಡಿಗೆ 30,000 ಜನ ಇಂತಹ ಕಾಮೋತ್ತೇಜಕ ಜಾಲ ತಾಣಗಳನ್ನು ಶೋಧಿಸುತ್ತಾರೆ. ಸಾಮಾನ್ಯವಾಗಿ ಇಂತಹದ್ದನ್ನೂ ಮೊದಲ ಬಾರಿಗೆ ನೋಡುವಂತಹ ಮಕ್ಕಳ ವಯಸ್ಸು ಹನ್ನೊಂದು. ಆದ್ದರಿಂದಲೇ ಮಕ್ಕಳು ತಮ್ಮ ಪಾಡಿಗೆ ತಾವು ಸುಮ್ಮನೆ ಹುಡುಕಿಕೊಂಡಿರಲು ಅಥವಾ ಕುತೂಹಲಕ್ಕೆ ನೋಡಿಕೊಳ್ಳಲು ಬಿಡದೇ ನಿರ್ದಿಷ್ಟ ಉದ್ದೇಶಕ್ಕೆ, ಅಗತ್ಯವಿರುವ ಅಂಶಕ್ಕೆ ಮಾತ್ರವೇ ಅಂತರ್ಜಾಲದಲ್ಲಿ ಶೋಧ ಮಾಡುವಂತಹ ರೂಢಿಯನ್ನು ಮಾಡಬೇಕಾಗಿರುವುದು ಹಿರಿಯರೇ.

ಸಾಮಾಜಿಕ ಜಾಲತಾಣಗಳು ಮಕ್ಕಳಿಗೆ ಬೇಕೇ?

     1.ಸಾಮಾಜಿಕ ಜಾಲ ತಾಣಗಳಲ್ಲಿ ಮಕ್ಕಳು ಭಾಗವಹಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಆಗ್ಗಿಂದಾಗ್ಗೆ ನಡೆಯುವುದುಂಟು. ಹೈಸ್ಕೂಲ್ ಪ್ರವೇಶಿಸುವ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಭಾಗವಹಿಸಬಹುದು. ಆದರೆ ಮನೆಯವರು ಸ್ನೇಹಿತರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಒಂದು ಸಾತ್ವಿಕ ಎಚ್ಚರಿಕೆ.

      2.ಮಕ್ಕಳು ಸಾಮಾಜಿಕ ಜಾಲ ತಾಣಗಳಲ್ಲಿ ಎಂತಹ ಗುಂಪುಗಳಲ್ಲಿ ಭಾಗಿಯಾಗಬೇಕು ಎಂಬುದರ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡಬೇಕು.

     3.ಮಕ್ಕಳು ಜಾಲತಾಣಗಳಲ್ಲಿ ತಮ್ಮ ಸೃಜನಾತ್ಮಕ ಕಲೆಗಾರಿಕೆಯ ಬಗ್ಗೆ ಅಥವಾ ಅಭಿರುಚಿಯ ವಿಷಯಗಳ ಬಗ್ಗೆ ಪ್ರಕಟಿಸಿದಾಗ ಇತರರಿಂದ ಬರುವ ಪ್ರಶಂಸೆಗಳು ಅವರಿಗೆ ಉತ್ತೇಜನವನ್ನು ನೀಡುವುದಲ್ಲದೇ, ವಿಮರ್ಶೆಯು ತಪ್ಪು ಒಪ್ಪುಗಳನ್ನು ನೋಡಿಕೊಳ್ಳಲು ನೆರವಾಗುತ್ತದೆ. ಹಾಗೆಯೇ ಎಲ್ಲಾ ವರ್ಗದ ಜನರೂ ಸಾಮಾಜಿಕ ಜಾಲತಾಣಗಳಲ್ಲಿ ಇರುವುದರಿಂದ ಎಲ್ಲಾ ಪ್ರಶಂಸೆಗಳನ್ನು ಸ್ವೀಕರಿಸಿ ಉಬ್ಬುವುದಾಗಲಿ, ಕಟು ವಿಮರ್ಶೆಗೆ ಕುಗ್ಗುವುದಾಗಲಿ ಆಗದಿರುವಂತೆ ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ಅಭ್ಯಾಸವನ್ನೂ ಮಾಡಬೇಕು. ಏಕೆಂದರೆ ಮಕ್ಕಳು ಏನಾದರೂ ಮಾಡಿದರೆಂದರೆ ವಿಮರ್ಶೆ ಮಾಡುವುದಕ್ಕಿಂತ ಹೆಚ್ಚಿನ ಪ್ರೋತ್ಸಾಹದಾಯಕವಾದಂತಹ ಪ್ರಶಂಸೆಗಳೇ ಬರುವುದು. ಅಂತಹ ಪ್ರಶಂಸೆಗಳು ಜವಾಬ್ದಾರಿಯನ್ನು ಹೆಚ್ಚಿಸುವಂತಾಗಬೇಕೇ ಹೊರತು, ಮೇಲರಿಮೆಯನ್ನು ಹೊಂದುವಂತಾಗಬಾರದು ಎಂಬಂತಹ ಎಚ್ಚರ ಇರುವಂತೆ ನೋಡಿಕೊಳ್ಳುವುದು ಪೋಷಕರ ಹೊಣೆ.

      4.ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ತಮ್ಮ ಅಧ್ಯಯನಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನೂ ಕೂಡ ಹಂಚಿಕೊಳ್ಳಬಹುದು. ಏನೇ ಆದರೂ ಕಾಫಿ ಆಯ್ತೆ? ತಿಂಡಿ ಆಯ್ತೆ? ಎಲ್ಲಿಗೆ ಹೋಗಿದ್ದೇ? ಏನು ಮಾಡ್ತಿದ್ದೀಯಾ? ಇತ್ಯಾದಿಗಳಿಂದ ಪ್ರಾರಂಭವಾಗುವ ಕಾಡು ಹರಟೆಗಳ ಗೀಳು ಹತ್ತದಂತೆ ನೋಡಿಕೊಳ್ಳುವುದು ಮುಖ್ಯ. ಪ್ರಾಥಮಿಕವಾಗಿ ಹಿರಿಯರು ತಮಗೆ ಆ ಗೀಳು ಇರದಂತೆ ನೋಡಿಕೊಂಡರೇನೇ ಮಕ್ಕಳಿಗೂ ಅಂತಹ ಗೀಳು ಹತ್ತದಿರುವಂತೆ ನೋಡಿಕೊಳ್ಳಲು ಸಾಧ್ಯ ಮತ್ತು ಸೂಚಿಸಲೂ ಅಧಿಕಾರ.

     5.ಅಂತರ್ಜಾಲವನ್ನು ಬಳಸುವ ಮಕ್ಕಳು ತಾವು ಬಳಸಿದ ವಿಷಯದ ಕುರಿತು ಅಥವಾ ಸಂಗ್ರಹಿಸಿದ ಮಾಹಿತಿಯನ್ನು ಹಿರಿಯರೊಂದಿಗೆ ಹಂಚಿಕೊಳ್ಳುವುದು ಮತ್ತು ಇತರ ಸ್ನೇಹಿತರೊಂದಿಗೆ ಹೇಳುವುದು ಇತ್ಯಾದಿ ಕೆಲಸಗಳು ನಡೆಯಬೇಕು. ಏಕೆಂದರೆ, ವಿಪರೀತವಾಗಿ ಅಂತರ್ಜಾಲದ ಬಂಧನಕ್ಕೆ ಸಿಕ್ಕುವ ಮಕ್ಕಳು ಅಂತರ್ಮುಖಿಗಳಾಗುವ ಸಾಧ್ಯತೆಗಳು ಇರುವುದು. ಹಾಗಾಗಿ, ಪೋಷಕರು ಪೊಲೀಸ್ ವಿಚಾರಣೆ ಮಾಡುವಂತಿರದೇ ಸಹಜ ಕುತೂಹಲದಿಂದ ಎಂಬಂತೆ ಮಕ್ಕಳು ಅಂತರ್ಜಾಲದಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿರುವಾಗ ವಿಚಾರಿಸಿಕೊಳ್ಳುತ್ತಿರುವುದು ಉತ್ತಮ ಮತ್ತು ಅಗತ್ಯ.

      6.ಒಂದು ಗಂಭೀರವಾದ ವಿಷಯವೆಂದರೆ ಅಪಾತ್ರರೊಂದಿಗೆ ಸ್ನೇಹ ಮಾಡಿ ಮನೆಯ ಅಥವಾ ಮತ್ತಿನ್ನಾವುದೋ ವಿಷಯಗಳನ್ನು ಅನಗತ್ಯವಾಗಿ ಹಂಚಿಕೊಳ್ಳುವುದರಿಂದ ಹೀನ ಮನಸ್ಥಿತಿಯವರು ಮಗುವಿನ ಸಂಪರ್ಕವನ್ನು ಹೇಗಾದರೂ ಬಳಸಿಕೊಳ್ಳಲು ಸಾಧ್ಯವಿರುವುದರಿಂದ ಪ್ರತಿಯೊಬ್ಬನ ಪ್ರೊಪೈಲ್‌ನ್ನು ಸರಿಯಾಗಿ ಗಮನಿಸಬೇಕು. ಅಪೂರ್ಣವಾದ ಮಾಹಿತಿಗಳಿದ್ದರೆ, ಅನಗತ್ಯವಾದ ವಿಷಯಗಳಿದ್ದರೆ ಅಥವಾ ಅವರ ಸ್ನೇಹಿತರ ಬಳಗ ತಮಗೆ ಹೊಂದುವಂತಲ್ಲದಿದ್ದರೆ ಮಕ್ಕಳಾಗಲಿ ನಾವಾಗಲಿ ಮಾಡಬಾರದು.

ಇನ್ನು ಮಕ್ಕಳು ನೇರವಾಗಿ ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಓದು, ಅಧ್ಯಯನ, ಹವ್ಯಾಸ ಮತ್ತು ಕಲಾ ಸಂಘಟನೆಗಳನ್ನು ಮಾಡುವಂತಹ ವಿಷಯಗಳ ಬಗ್ಗೆ ಮುಂದೆ ನೋಡೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News