ಉಳುವವರ ಪರ ವಕಾಲತ್ತು

Update: 2017-07-29 11:09 GMT

ಅನುರಣನ, ಪ್ರತಿಫಲನ, ಜ್ಞಾನ-ವಿಜ್ಞಾನ-ಮಣ್ಣಿನ-ಮಾತು ಮುಂತಾದ ವೈಜ್ಞಾನಿಕ ಅಂಕಣ ಬರಹಗಳಿಂದ ವಿಜ್ಞಾನಾಸಕ್ತರಿಗೆ, ಓದುಗರಿಗೆ ಚಿರಪರಿಚಿತರಾಗಿರುವ ಕೃಷಿ ವಿಜ್ಞಾನಿ ಡಾ.ಟಿ.ಎಸ್.ಚನ್ನೇಶ್‌ರ ಅಂಕಣ ಬರಹಗಳ ಸಂಗ್ರಹರೂಪ ‘ಉಳುವವರ ಪರ ವಕಾಲತ್ತು’. ಕೃಷಿ ವಿಜ್ಞಾನಿಯಾಗಿ ಅವರ ಜ್ಞಾನವ್ಯಾಪ್ತಿಯ ಹರವು ತುಂಬಾ ವಿಸ್ತಾರವಾದುದು. ಜ್ಞಾನ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಸಿದ್ಧ ಮಾದರಿಗಳನ್ನು ಧಿಕ್ಕರಿಸಿ ಹೊಸ ಮಾದರಿಗಳನ್ನು ಮತ್ತು ವ್ಯಾಖ್ಯಾನಗಳನ್ನು ಕಟ್ಟಿಕೊಡಬಲ್ಲ ಡಾ. ಟಿ.ಎಸ್.ಚನ್ನೇಶ್‌ರವರು ಕೃಷಿ ಜಗತ್ತಿನ ಹಾಗೂ ರೈತರ ಪರಿಸ್ಥಿತಿಯ ಬಗೆಗೆ ಬರೆಯುವ ವಿರಳ ಲೇಖಕರಲ್ಲಿ ಒಬ್ಬರು.

‘‘ಉಳುವವರ ಪರವಾಗಿ ಯಾರಿದ್ದಾರೆ?’’ ಎಂಬ ಮಾತಿಗೆ ‘‘ಯಾರಿಲ್ಲ ಹೇಳಿ!’’ ಎಂಬ ಉತ್ತರ ಸಹಜ. ಕೃಷಿಕರ ವೃತ್ತಿ ಆಕರ್ಷಕವಾಗಿಲ್ಲವೆಂಬ ಆತಂಕದೊಂದಿಗೆ ಪ್ರಾರಂಭವಾಗುತ್ತದೆ ಪುಸ್ತಕ. ಬೆಳೆದೇ ಉಣ್ಣುವವರ ಸಂಕಟಗಳನ್ನು ವಿವರಿಸುತ್ತಾ, ಕೃಷಿಯಲ್ಲಿ ತೊಡಗಿರುವ ನಮ್ಮ ರೈತರಿಗೆ ‘‘ಸ್ವರ್ಗವನ್ನು ಎಂದೂ ಬೆನ್ನು ಹತ್ತದವರು’’ ಎಂಬ ಮರುಕವನ್ನು ಡಾ. ಚನ್ನೇಶ್ ತೋರುತ್ತಾರೆ. ಬಹಳ ಮುಖ್ಯವಾಗಿ ಬೌದ್ಧಿಕ ಹಿನ್ನೆಲೆಯಿಂದ ರೈತರನ್ನು ಹಿಂದಿಟ್ಟು ನಮ್ಮ ನಾಗರಿಕ ಪ್ರಪಂಚವು ಅವರನ್ನು ಹೀಗೆ ನೋಡುತ್ತಿದೆಯೇ ಎಂಬ ಅನುಮಾನವನ್ನು ಸಹ ವ್ಯಕ್ತಪಡಿಸುತ್ತಾರೆ.
ಯಾವಾಗ ಬೌದ್ಧಿಕ ಕಸರತ್ತಿನ ಉತ್ಪನ್ನಗಳು ಆಳುವ ತಂತ್ರಗಳಾದವೋ ಆಗಿನಿಂದಲೇ ಅವುಗಳ ಮೇಲೆ ಹಕ್ಕು ಸಾಧಿಸುವ ಸಮುದಾಯಗಳು ಸೃಷ್ಟಿಯಾದವು.

ಶ್ರಮವೇ ಮೂಲ ಬಂಡವಾಳವಾದ ಕೃಷಿಯಲ್ಲಿ ಶ್ರಮಕ್ಕೆ ಪ್ರತಿಫಲ ದೊರಕದ ಕಷ್ಟಗಳನ್ನು ವಿವರಿಸುತ್ತಾ,ಅವರ ಸಂಕಟವು ನಿರಂತರವಾಗಿರುವಂತೆ ನೋಡಿಕೊಂಡಿರುವ ನಮ್ಮ ವ್ಯವಸ್ಥೆಗೆ ಡಾ. ಚನ್ನೇಶ್ ಕನ್ನಡಿ ಹಿಡಿಯುತ್ತಾರೆ.
ಕೃಷಿ ಶಿಕ್ಷಣದ ಮೂಲಕ ಕೃಷಿ ವಿಜ್ಞಾನಿಯಾಗಿರುವ ಡಾ. ಚನ್ನೇಶ್‌ರವರು ಕೃಷಿ ಶಿಕ್ಷಣದ ಅಂತರಂಗವನ್ನು ಬಲ್ಲವರಾಗಿದ್ದು, ‘‘ಬಂಡವಾಳಶಾಹಿ ಆಶಯಗಳನ್ನೇ ಬೆಂಬಲಿಸುವಂತಹ ಕೃಷಿ ವಿಜ್ಞಾನದ ಶಿಕ್ಷಣವೂ ಸಹ ಕೃಷಿಕರಾಗುವಂತೆ ಪ್ರೇರೇಪಿಸದಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆತ ಬೇರೊಂದು ವೃತ್ತಿಯನ್ನು ಹುಡುಕಿಯಾನು. ಒಮ್ಮೆ ಕೃಷಿಕನಾದರೆ ತೀರಿತು, ಕೃಷಿಕನಂತೂ ತನ್ನೆಲ್ಲಾ ಸಂಕಟಗಳಿಂದ ಹೊರಬರುವುದು ಕಷ್ಟವಾಗಿದೆ’’ ಎಂಬ ಕಳವಳ ವ್ಯಕ್ತಪಡಿಸುತ್ತಾರೆ.

ಆಧುನಿಕ ಕೃಷಿ ಅಧ್ಯಯನದಲ್ಲಿ, ಮೂಲ ವೈಜ್ಞಾನಿಕ ಚಿಂತನೆಗಳು ಮಾಯವಾಗುತ್ತಾ ಕೇವಲ ಅನ್ವಯ ವಿಜ್ಞಾನದ ಹಾದಿಯಲ್ಲಿ ಕೃಷಿಯಲ್ಲಿ ಬಳಸುವ ಪರಿಕರಗಳ ಬೆಂಬಲಿತ ಮತ್ತು ಆಯಾ ಕಂಪೆನಿಯ ಲಾಭದ ಹಿನ್ನೆಲೆಯಲ್ಲೇ ಸಾಗುವ ಶಿಕ್ಷಣ, ಸ್ವತಂತ್ರವಾದ ಸಮುದಾಯಪರ ರೈತಸ್ನೇಹೀ ಸಂಶೋಧನೆಗಳ ಚಿಂತನೆಗೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಇಂದು ಜಗತ್ತಿನ ಕೃಷಿ ತಂತ್ರಜ್ಞಾನದಲ್ಲಿ ಅತ್ಯಂತ ಪ್ರಭಾವಶಾಲಿ ಉದ್ಯಮವೆಂದರೆ ಕೀಟ ನಾಶಕಗಳ ರಸಾಯನಿಕಗಳನ್ನು ತಯಾರಿಸುವುದು. ಇವು ಇಡೀ ಕೃಷಿಯನ್ನು ಆಳುತ್ತಿವೆ. ಇವಕ್ಕೆಲ್ಲಾ ಪರಿಹಾರವೆಂಬಂತೆ ಡಾ. ಚನ್ನೇಶ್ ರವರು ಜನಪದ ಕೃಷಿ ಪದ್ಧ್ದತಿಯಲ್ಲಿರುವ, ‘ಚರಗ’ ಮತ್ತು ‘ದೀಪೋಳಿಗೆ’ ಆಚರಣೆಗಳಲ್ಲಿರುವ ಸಮಗ್ರ ಕೀಟ ನಿರ್ವಹಣೆಯ ವಿಧಾನಗಳನ್ನು ವಿವರಿಸುತ್ತಾರೆ.
ಪರ್ಯಾಯ ಕೃಷಿ, ಪೂರಕ ಕೃಷಿ ಪದ್ಧತಿಗಳನ್ನು ಚರ್ಚಿಸುತ್ತಾ, ಸಾವಯವ ಕೃಷಿಯ ಮರುಹುಟ್ಟು ಸಾಂಪ್ರದಾಯಿಕ ಕೃಷಿಯ ಗೋಜಲುಗಳ,ರಸಾಯನಿಕ ಡಿಪರಿಕರಗಳಿಂದ ಮುಕ್ತವಾದ ಪರ್ಯಾಯ ಪದ್ಧ್ದತಿಯಾಗಿ, ಬದಲಾವಣೆಯ ಬೆಳಕಾಗಿ ಆರೋಗ್ಯಕರ ಆಹಾರ ಪಡೆಯುವ ಮಾರ್ಗವಾಗಿ ಹೊಮ್ಮದೇ, ಸಾವಯವ ಪರಿಕರಗಳ ಬಳಸುವ ಕೃಷಿಯಾಗಿ ಮತ್ತು ಅವುಗಳ ಉತ್ಪನ್ನಗಳ ಮಾರಾಟದ ವಹಿವಾಟಾಗಿರುವುದನ್ನು ನಮ್ಮ ಗಮನಕ್ಕೆ ತರುತ್ತಾರೆ. ‘‘ಬದುಕು ಸಾವಯವವಾಗದ ಹೊರತು ಕೃಷಿಯನ್ನು ಸಾವಯವ ಮಾಡಲಾಗದು’’ ಎನ್ನುತ್ತಾರೆ.

ಮಣ್ಣಿನ ವಿಜ್ಞಾನಿಯಾಗಿ, ಡಾ.ಚನ್ನೇಶ್‌ರವರು ಉಳುವವರ ಪರ ವಕಾಲತ್ತಿಗೆ ಮಣ್ಣು, ನೀರು ಮತ್ತು ಸಮಾಜಗಳನ್ನು ಸಾಕ್ಷಿಗಳನ್ನಾಗಿಸುತ್ತಾರೆ. ನಗರಗಳಿಗೆ ಸರಬರಾಜಾದ ಆಹಾರ ನಗರಗಳಲ್ಲೇ ಕೊಳೆಯುತ್ತಾ ಇದೆ. ಅದು ಗೊಬ್ಬರವಾಗಿ ವಾಪಸ್ ಹಳ್ಳಿಗಳ ಜಮೀನಿಗೆ ತಲುಪುತ್ತಿಲ್ಲ. ಹಳ್ಳಿಯ ತೋಟಗಳ ಹೂ-ಹಣ್ಣುಗಳು ಮಾರುಕಟ್ಟೆಯಲ್ಲಿ ಕಳೆಕಟ್ಟಿ, ಮಾರಾಟಗೊಂಡು, ಆ ಊರಲ್ಲೇ ಉಳಿದು, ಕೊಳೆತು ನಾರುತ್ತವೆ. ಜೊತೆಗೆ ಉಳಿದ ಆಹಾರ ಪದಾರ್ಥವೂ ನಗರಗಳ ಸೇರಿ ಅಲ್ಲೇ ಚರಂಡಿ ನೀರಿಗೆ ಸೇರುತ್ತಾ ಅಲ್ಲಲ್ಲೇ ಕೊಳೆಯುತ್ತಾ ತ್ಯಾಜ್ಯಗಳಾಗುತ್ತವೆ. ತಾಜಾ ಆಗಿ ಬಂದು ತ್ಯಾಜ್ಯಗಳಾಗುವ ನಮ್ಮ ಹಳ್ಳಿಗಳ ಜಮೀನಿನ ಸಾರ ಗ್ರಾಮೀಣ ಪರಿಸರಕ್ಕೆ ಬಹು ದೊಡ್ಡನಷ್ಟ, ನಗರಗಳಿಗೆ ದೊಡ್ಡ ತಲೆನೋವು ಎನ್ನುವುದನ್ನು ಅಂಕಿಅಂಶಗಳ ಮೂಲಕ ಮಾರ್ಮಿಕವಾಗಿ ವಿವರಿಸುತ್ತಾ, ಕೃಷಿ ದಾರ್ಶನಿಕ ಫುಕುವೊಕಾ ಹೇಳಿದ, ಒಂದು ದೇಶದ ಜನ ಮಣ್ಣನ್ನು ರಕ್ಷಿಸದಿದ್ದರೆ, ಬಡತನವನ್ನು, ಬರಗಾಲವನ್ನೂ ನಿರಂತರವಾಗಿ ಎದುರಿಸಬೇಕಾಗುತ್ತದೆ ಎಂದಿದ್ದ ಮಾತನ್ನು ಉದಾಹರಿಸುತ್ತಾರೆ.
ಸಣ್ಣ ರೈತರ ಹಾಗೂ ಕೃಷಿಯ ಸುಸ್ಥಿರತೆಗೆ ಪೂರಕವಾದ ನಮ್ಮ ಹಿತ್ತಿಲ ಕೈತೋಟದಂತೆ, ನಮ್ಮ ತಾರಸಿಯ ಮೇಲೆ ನೋಡಿಕೊಳ್ಳಬಹುದಾದ, ಆಗಸಕ್ಕೆ ತೆರೆದುಕೊಳ್ಳುವ ‘‘ವರ್ಟಿಕಲ್ ಪಾರ್ಮ್’’ಗಳ ಸಾಧ್ಯತೆಯನ್ನು ಆಶಾಭಾವನೆಯಿಂದ ಕಟ್ಟಿಕೊಡುತ್ತಾರೆ. ತಾರಸಿಯ ಒಂದು ಎಕರೆ ವಿಸ್ತಾರದಲ್ಲಿ ಸುಮಾರು 16 ಎಕರೆಯ ಮಾಮೂಲಿ ಕೃಷಿಯಷ್ಟೇ ಉತ್ಪಾದನೆ ಮಾಡಬಹುದೆಂಬ ಸಣ್ಣ ರೈತರಿಂದಲೂ ಕೂಡ ಸುಸ್ಥಿರತೆಯು ಸಾಧ್ಯವಾಗಬಲ್ಲದು ಎಂಬ ಸಂಶೋಧನೆಗಳ ವಿವರಗಳನ್ನು ನೀಡುತ್ತಾರೆ.

ಇಷ್ಟೆಲ್ಲಾ ಆತಂಕದ ನಡುವೆಯೂ, ಡಾ.ಚನ್ನೇಶ್ ರವರು, ‘‘ಓದಿದವರೂ ಇಚ್ಛೆಪಟ್ಟು ಕೃಷಿ ಮಾಡುವ ಸಂದರ್ಭವನ್ನು ಕಾಣುವ, ಕಾಣುತ್ತಿರುವ ದಿನಗಳು ಬರುತ್ತಿವೆ. ಕೃಷಿಯು ಆಯ್ಕೆಯ ವೃತ್ತಿಯಾದಾಗ ಅದರ ಸಂಚಲನವೇ ಬೇರೆಯಾಗಿರುತ್ತದೆ’’ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ.
ರೈತರ ಜೀವನಾಧಾರವಾಗಿರುವ ಕೃಷಿ ಅವರ ಕೈತಪ್ಪಿ ಕಾರ್ಪೊರೇಟ್‌ಗಳ ಹಿಡಿತಕ್ಕೆ ಹೋಗುವ ಆತಂಕದ ನೆರಳಿನಲ್ಲಿರುವವರಿಗೆ ಉಳುವವರ ಬದುಕಿನ ಪರ ವಕಾಲತ್ತು ಇಂದು ಹಿಂದೆಂದಿಗಿಂತಲೂ ಅತ್ಯವಶ್ಯಕವಾಗಿದೆ. ಅವರಿಗೆ ಈ ಕೃತಿ ದಾರಿ ದೀಪವಾಗಬಲ್ಲುದು.

ಕೃಷಿ ಶಿಕ್ಷಣದ ಮೂಲಕ ಕೃಷಿ ವಿಜ್ಞಾನಿಯಾಗಿರುವ ಡಾ. ಚನ್ನೇಶ್‌ರವರು ಕೃಷಿ ಶಿಕ್ಷಣದ ಅಂತರಂಗವನ್ನು ಬಲ್ಲವರಾಗಿದ್ದು, ‘‘ಬಂಡವಾಳಶಾಹಿ ಆಶಯಗಳನ್ನೇ ಬೆಂಬಲಿಸುವಂತಹ ಕೃಷಿ ವಿಜ್ಞಾನದ ಶಿಕ್ಷಣವೂ ಸಹ ಕೃಷಿಕರಾಗುವಂತೆ ಪ್ರೇರೇಪಿಸದಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆತ ಬೇರೊಂದು ವೃತ್ತಿಯನ್ನು ಹುಡುಕಿಯಾನು. ಒಮ್ಮೆ ಕೃಷಿಕನಾದರೆ ತೀರಿತು, ಕೃಷಿಕನಂತೂ ತನ್ನೆಲ್ಲಾ ಸಂಕಟಗಳಿಂದ ಹೊರಬರುವುದು ಕಷ್ಟವಾಗಿದೆ’’ ಎಂಬ ಕಳವಳ ವ್ಯಕ್ತಪಡಿಸುತ್ತಾರೆ.

 ನಾನು ಓದಿದ ಪುಸ್ತಕ
 

Writer - ವೆಂಕಟೇಶ್

contributor

Editor - ವೆಂಕಟೇಶ್

contributor

Similar News