ಆತ್ಮಹತ್ಯೆ ಮಾಡಿಕೊಂಡ ರೈತರ ಮನೆ ಮತ್ತು ಮಹಿಳೆ

Update: 2017-07-29 12:49 GMT
ಮಂಜುಳಾ, ಕೊಟ್ಟ ಗ್ರಾಮ

ತುಮಕೂರು ಜಿಲ್ಲೆ ಶಿರಾ ತಾಲೂಕು ಬಂದಕುಂಟೆಯ ಮೀನಾಕ್ಷಮ್ಮ ನಿಗೆ ದಿಕ್ಕೇ ತೋಚದಾಗಿತ್ತು. ಮಡಿಲಲ್ಲಿ ಐದು ವರ್ಷದ ಪುಟ್ಟ ಕೂಸು. ಅರ್ಧಂಬಧರ್ ಕಟ್ಟಿರುವ ಮನೆ. ಐದು ಎಕರೆ ಅರೆ ನೀರಾವರಿ ಜಮೀ ನಿನ ಮಾಲಕನಾದ ಗಂಡ ರಾಮಕೃಷ್ಣ ಕೆಲವೇ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಬೀಡಿ ಸುತ್ತುವ ಕೆಲಸ ಮಾಡಿಕೊಂಡು ಚೂರು-ಪಾರು ಸಂಪಾದಿಸುತ್ತಿದ್ದ ಆಕೆಗೆ ಗಂಡ ಸತ್ತಾಗಲೇ ಆತ ಸಾಲಗಾರನೆಂದು ತಿಳಿದಿದ್ದು. ಆತನ ಸಾಲದ ವಿಚಾರವಾಗಲಿ, ಜಮೀನಿನಲ್ಲಿನ ಬೆಳೆನಷ್ಟ ವಾಗಲೀ ಆಕೆಯ ಗಮನಕ್ಕೇ ಬಂದಿರಲಿಲ್ಲ. ಸಾಧ್ಯವಾದಾಗಲೆಲ್ಲಾ ಈಕೆಯೂ ಹೊಲಕ್ಕೆ ಹೋಗುತ್ತಿದ್ದಳು, ಕೆಲಸ ಮಾಡುತ್ತಿದ್ದಳು. ಗ್ರಾಮದಲ್ಲಿ ಎಲ್ಲರಂತೆ ಯೇ ಗಂಡನೂ ಕೃಷಿ ಮಾಡುತ್ತಿದ್ದ, ಮಳೆಗಾಲ ಚೆನ್ನಾಗಿ ಆದರೆ ಉತ್ತಮ ಬೆಳೆ, ಇಲ್ಲವಾದರೆ ನಷ್ಟ. ಇದು ನಡೆದೇ ಇತ್ತು. ಆದರೆ ಸಾಲದ ಬಗ್ಗೆ ಗಂಡ-ಹೆಂಡತಿ ನಡುವೆ ಮಾತುಕತೆಯೇ ನಡೆದಿ ರಲಿಲ್ಲ. ‘‘ಅದೇನ್ ತಲೆ ಹೋಗೋ ಅಂತ ಸಾಲ ಅಲ್ಲ, ನಾನ್ ಬೀಡಿ ಸುತ್ತಿ ತೀರುಸ್ತಾ ಇದ್ದೆ, ನಂಗೊಂದ್ ಮಾತ್ ಹೇಳಿಲ್ಲ, ಅನ್ಯಾಯವಾಗಿ ಜೀವ ಕಳಕಂಡ್ರು’’ ಎನ್ನುವ ಮೀನಾಕ್ಷಮ್ಮನ ಮಾತುಗಳಲ್ಲಿ ನಮ್ಮ ಕೃಷಿರಂಗದ ಕಟು ವಾಸ್ತವವೂ ಇತ್ತು, ಅದಕ್ಕೆ ಪರಿಹಾರವೂ ಇತ್ತು. ಆದರೆ ಕೇಳಿಸಿ ಕೊಳ್ಳುವವರೇ ಇರಲಿಲ್ಲ.

   ಮೀನಾಕ್ಷಮ್ಮ ಬಂದಕುಂಟೆ ಗ್ರಾಮ ಶಿರಾ ತಾಲೂಕು

ಬಂದಕುಂಟೆಗೆ ತುಸುವೇ ದೂರದಲ್ಲಿದ್ದ ಕೊಟ್ಟ ಗ್ರಾಮದ ಮಂಜುಳ ಮ್ಮನ ಪರಿಸ್ಥಿತಿ ಇದಕ್ಕಿಂತಲೂ ಕೆಟ್ಟದ್ದು. ಆಕೆಗಿನ್ನೂ 25 ವರ್ಷ ತುಂಬಿರ ಲಿಲ್ಲ. ಪಿಳಿ-ಪಿಳಿ ಕಣ್ಣು ಬಿಡುತ್ತಾ ಅಮ್ಮನ ಹಿಂದೆ ಬಚ್ಚಿಟ್ಟುಕೊಳ್ಳುವ ಮೂರು ವರ್ಷದ ಮಗ. ಇಬ್ಬರನ್ನೂ ಬಿಟ್ಟು ಗಂಡ ಅರುಣ್ ಜೀವ ಕಳೆದುಕೊಂಡಿದ್ದ.ಈತನ ಸಾವಿನ ಕಾರಣಗಳಂತೂ ತೀರಾ ಸಂಕೀರ್ಣ. ಮೂರು ಎಕರೆ ಜಮೀನು. ಸುಮಾರು ಒಂದೂವರೆ ಎಕರೆ ಅಡಿಕೆ. ನೀರಿನ ಅಭಾವವಾ ದಾಗ ಅದನ್ನು ಉಳಿಸಿಕೊಳ್ಳಲು ಒಂದರಮೇಲೊಂದು ಕೊಳವೆಬಾವಿ ಹಾಕಿಸಿದರು. ಯಾವುದರಲ್ಲಿಯೂ ನೀರಿಲ್ಲ. ಕೊನೆಗೆ ನಾಲ್ಕು ಮೈಲಿ ದೂರದಲ್ಲಿದ್ದ ತಮ್ಮದೇ ಹೊಲದಲ್ಲಿ ಕೊಳವೆಬಾವಿ ಹಾಕಿಸಿದಾಗ ನೀರು ಸಿಕ್ಕಿತು. ಅಲ್ಲಿಂದ ಅಡಿಕೆ ತೋಟಕ್ಕೆ ನೀರು ತರಲು ಪೈಪ್ ಲೈನ್ ಮಾಡಿ ಸತೊಡಗಿದರು. ಇದು ಸಾಲದೆಂಬಂತೆ ಪಟ್ಟಣದಲ್ಲಿ ನೆಲೆಸಿದ್ದ ಅಣ್ಣನ ಬದುಕಿನ ಜೊತೆ ಅರುಣ್ ಸ್ಪರ್ಧೆಗಿಳಿದಿದ್ದ. ಅದೊಂದು ಮುಸುಕಿನ ಗುದ್ದಾಟ. ಮೇಲ್ನೋಟಕ್ಕೆ ಕಾಣುತ್ತಿರಲಿಲ್ಲ, ಅದರ ಬಗ್ಗೆ ಮಾತುಕತೆಗಳೂ ನಡೆಯುತ್ತಿರಲಿಲ್ಲ, ಆದರೂ ಸ್ಪರ್ಧೆ ಇತ್ತು. ಸ್ಪರ್ಧೆ ತಪ್ಪಲ್ಲ, ಆದರೆ ಅದಕ್ಕೆ ಬೇಕಾದ ಪೂರ್ವಸಿದ್ಧತೆ, ಸಂಪನ್ಮೂಲ ಅರುಣ್ ಬಳಿ ಇರಲಿಲ್ಲ. ಸಾಲ ಏರತೊಡಗಿತು. ಪರಿಸ್ಥಿತಿ ಎದುರಿಸಲಾಗದೆ ಸಾವಿಗೆ ಶರಣಾದ.

ಗಂಡನಿಗೆ ಎಷ್ಟು ಜಮೀನಿದೆ ಎಂಬ ಮಾಹಿತಿಯೂ ತಿಳಿಯದ ಮುಗ್ಧೆ ಮಂಜುಳಾ. ಇನ್ನು ಆತನ ಸಾಲದ ಬಗ್ಗೆಯಂತೂ ಗೊತ್ತೇ ಇರಲಿಲ್ಲ. ಗಂಡನ ಮನಸ್ಸಿನಲ್ಲಿ ನಡೆಯುತ್ತಿದ್ದ ಮೇಲಿನ ಯಾವ ತುಮುಲಗಳೂ ಹೆಂಡತಿಗೆ ದಾಟಿರಲಿಲ್ಲ. ಅವೆಲ್ಲವೂ ಗೊತ್ತಾಗಿದ್ದು ಆತ ಸತ್ತ ಮೇಲೆ.

ಕುಣಿಗಲ್ ತಾಲೂಕು ಹೊನ್ನೇಗೌಡನದೊಡ್ಡಿಯ ಶಿಲ್ಪಾಗೆ ಇನ್ನೂ 21 ವರ್ಷ. ಆಗತಾನೇ ಮದುವೆಯಾಗಿತ್ತು. ಎರಡು ಎಕರೆ ಜಮೀನಿನ ಒಡೆಯ ನಾದ ಗಂಡ ರಾಜು ಹಠಾತ್ ಆತ್ಮಹತ್ಯೆಗೆ ಶರಣಾದ. ಆಗತಾನೆ ತನ್ನ ಬದು ಕಿಗೆ ಕಾಲಿಟ್ಟಿದ್ದ ಸಂಗಾತಿಗೂ ಆತ ತನ್ನ ಸಾಲದ ವಿಷಯ ಹಂಚಿಕೊಂಡಿ ರಲಿಲ್ಲ. ಕಳೆದ ವರ್ಷ ತುಮಕೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಹೋದಾಗ ಆದ ಅನುಭವಗಳಿವು. ಮೇಲಿನವು ಕೆಲವು ಉದಾಹ ರಣೆ ಮಾತ್ರ. ಸಾವಿಗೀಡಾದ ಬಹುತೇಕ ಕುಟುಂಬಗಳಲ್ಲಿ ಇದೇ ಪರಿಸ್ಥಿತಿ. ಹಾಗೆಂದು ಆ ಹೆಣ್ಣುಮಕ್ಕಳು ಅನಕ್ಷರಸ್ಥರೇನಲ್ಲ. ಹೆಚ್ಚಿನವರು ಹೈಸ್ಕೂಲು ವರೆಗೆ ಕಲಿತವರು. ಹೇಳಿದ್ದರೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅವರ ಲ್ಲಿದೆ. ಹಂಚಿಕೊಂಡರೆ ಸ್ಪಂದಿಸುವ, ಕಷ್ಟಗಳಿಗೆ ಹೆಗಲು ಕೊಡುವ ಚೈತನ್ಯ ವಿದೆ. ಆದರೆ ಪುರುಷ ಪ್ರಧಾನವಾಗಿರುವ ನಮ್ಮ ಸಮಾಜದಲ್ಲಿ ಕೃಷಿರಂಗದ ಲ್ಲಿಯೂ ಪುರುಷರ ಹೆಸರೇ ಮಂಚೂಣಿಯಲ್ಲಿರುತ್ತದೆ.

ಕೃಷಿಕರು ಎಂದರೆ ಭಾರತದಲ್ಲಿ ಪುರುಷ ಕೃಷಿಕರೆಂದೇ ಅರ್ಥ ಮಾಡಿಕೊ ಳ್ಳಲಾಗುತ್ತದೆ. ‘‘ಮನೆ ಕೆಲ್ಸ ಮಾಡೋ ಅವಳಿಗೇನು ಗೊತ್ತಾಗ್ತೈತೆ’’ ಎಂಬ ಧೋರಣೆಯೇ ಪುರುಷ ಕೃಷಿಕರಲ್ಲಿದೆ. ವ್ಯಂಗ್ಯ ಎಂದರೆ ನಾವು ಉಳುವ, ಬಿತ್ತುವ ಮಣ್ಣನ್ನು ‘‘ಭೂಮ್ತಾಯಿ’’ ಎಂದು ಹೆಣ್ಣಿಗೆ ಸಮೀಕರಿಸುತ್ತೇವೆ. ನಮ್ಮೆಲ್ಲಾ ಕೃಷಿ ಸಂಬಂಧಿ ಆಚರಣೆ ಗಳಿಗೂ ಮಹಿಳೆಯರಿಗೂ ಥಳುಕು ಹಾಕಲಾಗುತ್ತದೆ. ಆದರೆ ವಾಸ್ತವದಲ್ಲಿ ಆಕೆಯ ಸ್ಥಾನ ಕೃಷಿ ಕೂಲಿಕಾರಳು ಮಾತ್ರ. ಅಂಕಿ-ಅಂಶಗಳೂ ಇದನ್ನೇ ಹೇಳು ತ್ತವೆ. ದೇಶದ ಶೇ.14.9 ರಷ್ಟು ಮಹಿಳೆಯರು ಮಾತ್ರ ತಮ್ಮ ಹೆಸರಲ್ಲಿ ಕೃಷಿ ಜಮೀನು ಹೊಂದಿದ್ದಾರೆ. ಮಾನವನ ವಿಕಾಸದ ಚರಿತ್ರೆ ಯನ್ನು ಗಮನಿಸಿದರೆ ಕೃಷಿಯನ್ನು ಆರಂಭಿ ಸಿದ್ದೇ ಮಹಿಳೆಯರು ಎನ್ನುತ್ತಾರೆ ಇತಿಹಾಸಕಾರರು. ಗುಹೆಗಳಲ್ಲಿ ವಾಸವಾ ಗಿದ್ದ ಪುರಾತನ ಮಾನವರಲ್ಲಿ ಪುರುಷರು ಬೇಟೆಗೆ ಹೋದರೆ ಮಹಿಳೆ ಯರು ತಮ್ಮ ಸುತ್ತ-ಮುತ್ತಲಿನ ಕಾಡು ಕಳೆಗಳ ಬೀಜಗಳನ್ನೋ ಎಲೆಗಳನ್ನೋ ತಿನ್ನಲು ಆರಂಭಿಸಿ ಅವುಗಳನ್ನು ಬೆಳೆಯಲೂ ಶುರು ಮಾಡಿದರು. ಈ ರೀತಿ ವ್ಯವಸಾಯ ಸಂಸ್ಕೃತಿ ಆರಂಭವಾಯಿತು.

ಜಗತ್ತಿನಲ್ಲಿ ಅತಿದೊಡ್ಡ ಕಸುಬಾಗಿ ರೂಪುಗೊಂಡಿರುವ ಕೃಷಿಯನ್ನು ಪರಿಚಯಿಸಿದ ಮಹಿಳೆಗೇ ಇಂದು ಅದರ ಮೇಲೆ ಹಕ್ಕಿಲ್ಲ. ಬಿತ್ತನೆ, ಬೆಳೆ ಸಂಯೋಜನೆ, ಮಾರಾಟದಂತಹ ಮಹತ್ತರ ಘಟ್ಟಗಳಲ್ಲಿ ಆಕೆಗೆ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಅಧಿಕಾರವಿಲ್ಲ. ಹಾಗೆಂದು ಕೃಷಿ ಕೆಲಸಗಳಿಂದೇನೂ ಆಕೆಗೆ ಮುಕ್ತಿ ಇಲ್ಲ. ಕೃಷಿಯಲ್ಲಿ ಶೇ.70ರಷ್ಟು ಕೆಲಸ ಮಾಡುವುದು ಮಹಿಳೆಯರೇ. ಆ ಕೆಲಸಕ್ಕೂ ಸಮಾನ ಕೂಲಿ ಇಲ್ಲ. ಜಮೀನು ಮಾಲಕತ್ವ ಆಕೆಯ ಹೆಸರಿನಲ್ಲಿ ಇಲ್ಲವಾದ ಕಾರಣ ಆಕೆಗೆ ಬ್ಯಾಂಕ್‌ಗಳಿಂದ ಅಥವಾ ಸಹಕಾರ ಸಂಘಗಳಿಂದ ಕೃಷಿ ಸಾಲ ಪಡೆಯುವ ಅಧಿಕಾರವೂ ಇಲ್ಲವಾಗಿದೆ. ಇದೆಲ್ಲವೂ ಮನೆ ಗಂಡಸಿನ ಕೆಲಸ. ಹಾಗಾ ಗಿಯೇ ಆತ ಮಾಡಿದ ಸಾಲದ ಅರಿವೂ ಆಕೆಯ ಗಮನಕ್ಕೆ ಬರುತ್ತಿಲ್ಲ. ಆತ ಹೊಲ ಮನೆ ಅಡವಿಟ್ಟರೂ ಆಕೆಗೆ ತಿಳಿಯುತ್ತಿಲ್ಲ.

ಇನ್ನೊಂದು ಕಡೆ ನೋಡಿ, ಕೃಷಿ ಆಧಾರಿತ ತರಬೇತಿ ಕಾರ್ಯಾಗಾರ, ಪ್ರವಾಸಗಳಿಗೆ ಹೋಗುವುದು ಬಹುತೇಕ ಪುರುಷರೇ. ಸರಕಾರ ಕೃಷಿ ಪ್ರವಾಸಕ್ಕೆಂದು ಚೀನಾ ಹಾಗೂ ಇಸ್ರೇಲ್‌ಗಳಿಗೆ ರೈತರನ್ನು ಕಳುಹಿಸಿದಾಗ ಪುರುಷ ಕೃಷಿಕರೇ ಹೋಗಿ ಬಂದರು. ಅಂದರೆ ಕೃಷಿ ಕುಟುಂಬದ ಹೆಣ್ಣು ಮಕ್ಕಳು ಜ್ಞಾನ ಮತ್ತು ಮಾಹಿತಿಯಿಂದಲೂ ವಂಚಿತರಾಗುತ್ತಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ದೇಶದ ಮೂರು ಲಕ್ಷ ಎಪ್ಪತ್ತೈದು ಸಾವಿರ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಶೇ.99ರಷ್ಟು ಪುರುಷರು ವಿವಾಹಿತರು. ಬೆರಳೆಣಿಕೆಯಷ್ಟು ಮಾತ್ರ ಅವಿವಾಹಿತರು. ಅಂದರೆ ಸುಮಾರು ಮೂರೂವರೆ ಲಕ್ಷ ಹೆಣ್ಣುಮಕ್ಕಳು ವಿಧವೆಯರಾಗಿದ್ದಾರೆ. ಅವರೆಲ್ಲರೂ ಕೃಷಿಕರು. ಅಭಿವೃದ್ಧಿ ಬರಹಗಾರ ಪಿ.ಸಾಯಿನಾಥ್ ರೈತ ಆತ್ಮಹತ್ಯೆಯ ನಂತರ ಆ ಕುಟುಂಬಗಳು ಹೇಗಿವೆ, ಮಹಿಳೆಯರು ಹೇಗೆ ನಿಭಾಯಿಸುತ್ತಿದ್ದಾರೆ ಎಂಬ ಬಗ್ಗೆ ಕೆಲವರ ಅಧ್ಯಯನವನ್ನೂ ಮಾಡಿದ್ದಾರೆ. ಅಚ್ಚರಿ ಎಂದರೆ ಆ ಹೆಣ್ಣು ಮಕ್ಕಳು ಅದೇ ಜಮೀನಿನಲ್ಲಿ ದುಡಿಯುತ್ತಾ ಕುಟುಂಬವನ್ನು ಮುನ್ನಡೆ ಸುತ್ತಿದ್ದಾರೆ. ಗಂಡ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಕೈಬಿಟ್ಟ ಹೊಲದ ಲ್ಲಿಯೇ ಮತ್ತೆ ಹಸಿರು ಚಿಗುರಿಸುವ ಪ್ರಯತ್ನದಲ್ಲಿದ್ದಾರೆ. ಪುರುಷರು ತಮ್ಮ ಮೇಲರಿಮೆಯನ್ನು ಬದಿಗಿಟ್ಟು ಸಂಗಾತಿಯೊಂದಿಗೆ ಕೃಷಿ, ಸಾಲ ಹಾಗೂ ಮನೆಯ ಎಲ್ಲಾ ಆಗುಹೋಗುಗಳನ್ನೂ ಚರ್ಚಿಸಿದರೆ ಖಂಡಿತಾ ಪರಿಹಾರ ಸಾಧ್ಯ ಎಂಬುದು ಇದರಿಂದ ಮನವರಿಕೆಯಾಗುತ್ತದೆ.

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯ ಹಾಗೂ ದೈಹಿಕ ಹಿಂಸೆಗಳಿಗೆ ಆಕೆಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲದಿರುವುದೂ ಒಂದು ಪ್ರಮುಖ ಕಾರಣ ಎನ್ನುತ್ತವೆ ಸಂಶೋಧನೆಗಳು. 2005ರಲ್ಲಿ ಬಂದ ಒಂದು ವರದಿ ಪ್ರಕಾರ ತನ್ನದೇ ಹೆಸರಲ್ಲಿ ಆಸ್ತಿ, ಅಂದರೆ ಜಮೀನು ಅಥವಾ ಮನೆ ಹೊಂದಿರುವ ಮಹಿಳೆಯರ ಮೇಲೆ ಕೇವಲ ಶೇ.7ರಷ್ಟು ಮಾತ್ರ ದೌರ್ಜನ್ಯಗಳಾಗಿವೆ. ಹಾಗಾಗಿ ಕಾನೂನಾತ್ಮಕವಾಗಿಯೂ ಸರಕಾರ ಗಳು ಮಹಿಳೆ ಹೆಸರಲ್ಲಿ ಆಸ್ತಿ ಇರುವಂತೆ ಕಾಯ್ದೆ ರೂಪಿಸಬೇಕು. ಸರಕಾರವು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಗಂಡ-ಹೆಂಡತಿ ಇಬ್ಬರ ಅನುಮತಿಯನ್ನೂ ಪಡೆಯಬೇಕು. ಇಂತಹ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಉದಾಹರಣೆಗೆ;

 ►ಒಡಿಶಾ ಸರಕಾರ ‘ವಸುಂಧರಾ’ ಯೋಜನೆ ಮೂಲಕ ಪ್ರತಿಯೊಬ್ಬ ಮಹಿಳೆಗೆ 5ರಿಂದ 10 ಡೆಸಿಮಲ್ ಭೂಮಿಯನ್ನು ವಿತರಿಸುವ ಕಾರ್ಯ ಕ್ರಮ ಹಾಕಿಕೊಂಡಿದೆ.

►ಕೇರಳ ಸರಕಾರದ ‘ಕುಟುಂಬಶ್ರೀ’ ಯೋಜನೆ ಮಹಿಳೆಯರ ಗುಂಪು ಚಟುವಟಿಕೆಗಳಿಗೆ ಹಾಗೂ ಸಹಕಾರಿ ಕೃಷಿಗೆ ಉತ್ತೇಜನ ನೀಡುತ್ತ್ತಿದೆ.

►ಪಶ್ಚಿಮ ಬಂಗಾಳದಲ್ಲಿ ಮಹಿಳಾ ಕೃಷಿಕರಿಗೆ ಜಮೀನು ವರ್ಗಾವಣೆ ಯಾಗುವ ಕಾಯ್ದೆ ರೂಪುಗೊಳ್ಳುತ್ತಿದೆ.

►ಆಂಧ್ರಪ್ರದೇಶದಲ್ಲಿ ಸ್ವಸಹಾಯ ಸಂಘಗಳಿಗೆ ಲೀಸ್ ಮೂಲಕ ಭೂಮಿ ನೀಡುವ ಕಾಯ್ದೆ ಜಾರಿಯಾಗುತ್ತಿದೆ.

►ಕೇರಳ ಭೂರಹಿತರೇ ಇಲ್ಲದ (0 landless ) ರಾಜ್ಯವಾಗು ವತ್ತ ಹೆಜ್ಜೆ ಇಟ್ಟಿದೆ, ಇದೀಗ ಬಿಹಾರ ಸಹ ಅದನ್ನೇ ಮಾಡ ಹೊರಟಿದೆ.

ಇಂತಹುದೇ ಪ್ರಯತ್ನಗಳನ್ನು ಎಲ್ಲ ಸರಕಾರಗಳೂ ಮಾಡಬೇಕು. ಜೊತೆಗೆ ತರಬೇತಿ, ತಂತ್ರಜ್ಞಾನ ವರ್ಗಾವಣೆಗಳನ್ನು ಮಹಿಳೆಯರಿಗೇ ಮಾಡಬೇಕು. ಕೃಷಿಕ ಮಹಿಳೆಯರಿಗೆಂದೇ ಸರ್ಟಿಫಿಕೇಷನ್ ಕೋರ್ಸ್ ಗಳನ್ನು ಆಯೋಜಿಸಬೇಕು. ಮಹಿಳೆಯರಿಗೆ ಭೂಮಿ ನೀಡುವಲ್ಲಿ ಒಂದು ರೀತಿಯ ಸಾಮಾಜಿಕ ಇಗೋ ಕೆಲಸ ಮಾಡುತ್ತದೆ, ಇದರಿಂದ ಹೊರಬ ರುವಂತೆ ಎಲ್ಲ ಹಂತಗಳಲ್ಲಿ ಪ್ರಯತ್ನಿಸಬೇಕು. ಮಹಿಳೆಯರ ಹೆಸರಲ್ಲಿ ಭೂಮಿಇದ್ದರೂ ದಾಖಲಾತಿಗಳಲ್ಲಿ ಹಲವು ಲೋಪಗಳಿವೆ, ಅದನ್ನು ಸರಿಪಡಿಸ ಬೇಕು. ಮಹಿಳೆಯರು ಹೊಸದಾಗಿ ಭೂಮಿ ಪಡೆಯುವುದಕ್ಕೆ ಬದಲು ಇರುವ ಭೂಮಿಯನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ, ಅದರ ಬಗ್ಗೆ ಗಮನಹರಿಸಬೇಕು.

ಜಯಮ್ಮ ಲಂಕ್ಕೇನಹಳ್ಳಿ ಕಳ್ಳಂಬೆಳ್ಳ

ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರದ್ದೇ ಆದ ಪ್ರತ್ರ್ಯೇಕ ಸಮಿತಿ ರಚನೆಯಾಗಬೇಕು, ಇದರಿಂದ ತುಂಬಾ ಬದಲಾ ವಣೆಗಳನ್ನು ನಿರೀಕ್ಷಿಸಬಹುದು. ‘‘ಸರಕಾರವು ಕಂಪೆನಿಗಳಿಗೆ 99 ವರ್ಷ, 66 ವರ್ಷ ಅಥವಾ 33 ವರ್ಷ ಗಳಿಗೆ ಭೂಮಿಯನ್ನು ಲೀಸ್‌ಗೆ ಕೊಡುತ್ತಿದೆ, ಈ ಅವಕಾಶ ಮಹಿಳೆ ಮತ್ತು ಮಹಿಳಾ ಗುಂಪುಗಳಿಗೂ ಲಭಿಸಬೇಕು’’ ಎಂಬುದು ಮಹಿಳೆ ಮತ್ತು ಆದಿ ವಾಸಿಗಳ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ದಿಲ್ಲಿಯ ‘ಜನ ಸಂಗ್ರಾಮ ಪರಿಷತ್’ನ ರಮೇಶ್ ಶರ್ಮ ಅವರ ಅನಿಸಿಕೆ. ಕೃಷಿ ಯೋಗ್ಯ ಭೂಮಿಯು ಅತ್ಯಂತ ವೇಗವಾಗಿ ಅನ್ಯ ಉದ್ದೇಶಗಳಿಗೆ ವರ್ಗಾವಣೆಯಾಗುತ್ತಿದೆ. ಗಣಿಗಾರಿಕೆಗೆ, ಕೈಗಾರಿಕೆಗಳಿಗೆ, ನಗರೀಕರಣಕ್ಕೆ, ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಅಪಾರ ಪ್ರಮಾಣದ ಭೂಮಿಯನ್ನು ನೀಡಲಾಗುತ್ತಿದೆ. ಹಣದಾಸೆಗೆ ಮರುಳಾಗುವ ಪುರುಷರು ಮನೆಯಲ್ಲಿ ಹೇಳದೆ-ಕೇಳದೆ ಆಸ್ತಿ ಮಾರಾಟ ಮಾಡುವುದನ್ನು ಕಾಣುತ್ತಿದ್ದೇವೆ. ಇದನ್ನು ತಪ್ಪಿಸಲು ಗಂಡ-ಹೆಂಡತಿ ಇಬ್ಬರ ಹೆಸರಲ್ಲೂ ಆಸ್ತಿ ಇರಬೇಕು. ಮಕ್ಕಳು ಹಾಗೂ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಮಹಿಳೆಯ ಹೆಸರಲ್ಲಿ ಆಸ್ತಿ ಇದ್ದರೆ ಆಕೆ ಅದನ್ನು ಜೋಪಾನ ಮಾಡುತ್ತಾಳೆ.

ನೋವು ಬದಿಗಿರಿಸಿ ಬದುಕು ಸಾಗಿಸುತ್ತಿರುವವರು...

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯ ಹಾಗೂ ದೈಹಿಕ ಹಿಂಸೆಗಳಿಗೆ ಆಕೆಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲದಿರುವುದೂ ಒಂದು ಪ್ರಮುಖ ಕಾರಣ ಎನ್ನುತ್ತವೆ ಸಂಶೋಧನೆಗಳು. 2005ರಲ್ಲಿ ಬಂದ ಒಂದು ವರದಿ ಪ್ರಕಾರ ತನ್ನದೇ ಹೆಸರಲ್ಲಿ ಆಸ್ತಿ, ಅಂದರೆ ಜಮೀನು ಅಥವಾ ಮನೆ ಹೊಂದಿರುವ ಮಹಿಳೆಯರ ಮೇಲೆ ಕೇವಲ ಶೇ.7ರಷ್ಟು ಮಾತ್ರ ದೌರ್ಜನ್ಯಗಳಾಗಿವೆ. ಹಾಗಾಗಿ ಕಾನೂನಾತ್ಮಕವಾಗಿಯೂ ಸರಕಾರಗಳು ಮಹಿಳೆ ಹೆಸರಲ್ಲಿ ಆಸ್ತಿ ಇರುವಂತೆ ಕಾಯ್ದೆ ರೂಪಿಸಬೇಕು. ಸರಕಾರವು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಗಂಡ-ಹೆಂಡತಿ ಇಬ್ಬರ ಅನುಮತಿಯನ್ನೂ ಪಡೆಯಬೇಕು.

ಕಳೆದ ಎರಡು ದಶಕಗಳಲ್ಲಿ ದೇಶದ ಮೂರು ಲಕ್ಷ ಎಪ್ಪತ್ತೈದು ಸಾವಿರ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಶೇ.99ರಷ್ಟು ಪುರುಷರು ವಿವಾಹಿತರು. ಬೆರಳೆಣಿಕೆಯಷ್ಟು ಮಾತ್ರ ಅವಿವಾಹಿತರು. ಅಂದರೆ ಸುಮಾರು ಮೂರೂವರೆ ಲಕ್ಷ ಹೆಣ್ಣುಮಕ್ಕಳು ವಿಧವೆಯರಾಗಿದ್ದಾರೆ. ಅವರೆಲ್ಲರೂ ಕೃಷಿಕರು.

                 

Writer - ಮಲ್ಲಿಕಾರ್ಜುನ ಹೊಸಪಾಳ್ಯ

contributor

Editor - ಮಲ್ಲಿಕಾರ್ಜುನ ಹೊಸಪಾಳ್ಯ

contributor

Similar News