ಜಲಾಲುದ್ದೀನ್ ರೂಮಿ

Update: 2017-07-29 12:15 GMT

ಮನುಷ್ಯ ಮಾನವನೆನಿಸಿಕೊಳ್ಳಲು ಪಶುಗಳಿಗಿಂತ ಭಿನ್ನನೂ ಉತ್ತಮನೂ ಆಗಬೇಕಾದುದು, ನಾಗರಿಕ ಮತ್ತು ಸಭ್ಯನಾಗ ಬೇಕಾದುದು ಸಾಮಾಜಿಕ ಹಾಗೂ ನೈತಿಕ ದೃಷ್ಟಿಯಿಂದ ಪರಿಗಣಿ ಸಲ್ಪಡುವ ವಿಷಯ. ಲೌಕಿಕ ಜೀವನದ ಸಾರ್ಥಕತೆಯಲ್ಲದೆ ಪರಲೋಕದಲ್ಲೂ ಸದ್ಗತಿ ಪ್ರಾಪ್ತವಾಗಬೇಕೆಂಬ ಪ್ರಮೇಯ ಬಂದಾಗ, ದೇವರು, ಸ್ವರ್ಗ ನರಕ, ಮೋಕ್ಷ, ಮುಕ್ತಿ ಇತ್ಯಾದಿಗಳ ಪ್ರಸಾಪ ಬರುತ್ತದೆ.ಜಗತ್ತಿನ ಬಹುತೇಕ ಧರ್ಮಗಳು ಈ ಅಂಶಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಒಳಗೊಂಡಿವೆ.

ಮೋಕ್ಷ ಸಾಧನೆಗಾಗಿ ಸಂಸಾರದಿಂದ ಪಲಾಯನ ಮಾಡಿ, ಸನ್ಯಾಸಿ ಗಳಾಗುವುದು ಒಂದು ಬಗೆಯಾದರೆ, ಮಹಾತ್ಮ ಬುದ್ಧನಂತೆ ಅಥವಾ ಸೂಫಿ ಸಂತರಂತೆ ಜನಸಾಮಾನ್ಯರ ನಡುವೆ ಇದ್ದು ಧರ್ಮ ಬೋಧನೆ ಮಾಡುವುದು ಇನ್ನೊಂದು ಬಗೆ. ಎಲ್ಲ ಧರ್ಮಗಳೂ ಮಾನವನ ಇಹ- ಪರಗಳ ಶ್ರೇಯಸ್ಸನ್ನೇ ಕುರಿತು ಬೋಧಿಸುವುದಾದರೂ ಯಾವುದೇ ಒಂದು ಧರ್ಮ ವಿಶ್ವಮಾನ್ಯ ಧರ್ಮವಾಗದಿರುವುದು ಸ್ಪಷ್ಟವಿದೆ. ವಿವಿಧ ಧರ್ಮಗಳ ಭಿನ್ನ ಭಿನ್ನ ದೃಷ್ಟಿ ಮತ್ತು ಮಾರ್ಗಗಳ ಕಾರಣ ಮನುಷ್ಯ ಮನುಷ್ಯನ ಮಧ್ಯೆ ದ್ವೇಷ, ಕಲಹ ಮತ್ತು ಯುದ್ಧಗಳೇ ನಡೆದು ಹೋಗಿರುವುದೂ ಮತ್ತು ಇಂದಿಗೂ ನಡೆಯುತ್ತಿರುವುದು ಸಾಮಾನ್ಯ ವಿಷಯ. ಧರ್ಮದ ಜೊತೆ ರಾಜಕೀಯ ತಳಕು ಹಾಕಿ ಕೊಂಡಾಗ ಆಗುವ ಅನಾಹುತ, ರಕ್ತಪಾತ ಮತ್ತು ಹಾನಿ, ಇಂದು ಸಾಮಾನ್ಯ ಸಂಗತಿಗಳಾಗಿರುವಷ್ಟೇ, ಪಶುತ್ವವನ್ನೇ ಪಾಲಿಸುವವರಿಗೆ ಅವು ಮನರಂಜನೆಯ ಸಾಧನಗಳೂ ಆಗಿವೆ.

ಬೆಂಕಿಯಿಂದ ಶಾಖ ಮತ್ತು ಬೆಳಕುಗಳನ್ನು ಪಡೆದುಕೊಳ್ಳುವ ಬದಲು ಅದನ್ನು ವಿಧ್ವಂಸಕ ಕೆಲಸಗಳಿಗೆ ಮಾತ್ರ ಉಪಯೋಗಿಸಿಕೊಳ್ಳುವ ರೀತಿಯೊಂದೇ ಸಾಧ್ಯವೆಂದು ಬಗೆದಾಗ; ಚಾಕು ಚೂರಿ ಮಚ್ಚುಗಳನ್ನು ತರಕಾರಿ ಹೆಚ್ಚುವ ಅಥವಾ ಇತರ ಉಪಯುಕ್ತ ಕೆಲಸಗಳಿಗಾಗಿ ಬಳಸಿ ಕೊಳ್ಳುವ ಬದಲು ಮಾನವನ ಕೊಲೆಗಾಗಿ ಬಳಸಿದಾಗ; ಹೊರಾಕ್ರಮಣ ಸಂಭವಿಸಿದಾಗ ತನ್ನ ದೇಶದ ರಕ್ಷಣೆಗಾಗಿ ಯುದ್ಧ ಮಾಡುವ ಬದಲು, ಒಂದು ಕಡೆ ಉನ್ನತ ಮಾನವೀಯ ತತ್ವಗಳನ್ನು ಸಾರುತ್ತ, ಇನ್ನೊಂದೆಡೆ ತನ್ನ ಧ್ಯೇಯ ಧೋರಣೆಗಳನ್ನೇ ಇಡಿ ಜಗತ್ತು ಪಾಲಿಸಬೇಕೆಂಬ ನೀತಿಯನ್ನು ಹೇರುತ್ತ, ಸಮರಗಳನ್ನು ಸಾರಿ, ವಿಶ್ವವನ್ನೇ ವಿನಾಶದ ಅಂಚಿಗೆ ದೂಡುವ ಕುಯುಕ್ತಿ ಪ್ರಬಲವಾದಾಗ; ಸಾಮಾನ್ಯ ಜ್ಞಾನವಿರುವ ಯಾವ ಮನುಷ್ಯನಾದರೂ ದಿಗ್ಭ್ರಾಂತನಾಗುತ್ತಾನೆ.

ವಿಲಕ್ಷಣ ಸತ್ಯವೇನೆಂದರೆ, ಶಾಂತಿ ನೆಮ್ಮದಿ ಸೌಹಾರ್ದವನ್ನು ಬಯ ಸುವ ಮಾನವರ ಸಂಖ್ಯೆ ಅಧಿಕವಿದ್ದರೂ, ಅಲ್ಪಸಂಖ್ಯೆಯ ಕ್ರೂರಿಗಳೂ ನಿರಂಕುಶಮತಿಗಳೂ ಮತ್ತು ಅಧಿಕಾರದಾಹಿಗಳೇ ಬಹುಸಂಖ್ಯಾತ ಸಜ್ಜನರ ಸಾವು ನೋವುಗಳಿಗೆ ಕಾರಣರಾಗಿದ್ದಾರೆ. ಮಾನವನ ಇತಿಹಾಸ ದ ಉದ್ದಕ್ಕೂ ಇದರ ಉದಾಹರಣೆಗಳು ಹೇರಳವಾಗಿ ಲಭಿಸುತ್ತವೆ. ನಾಗರಿಕತೆ ಆರಂಭವಾಗುವ ಮೊದಲು ತನ್ನ ರಕ್ಷಣೆಗಾಗಿ ಹೊಡೆದಾ ಡುತ್ತಿದ್ದ ಮಾನವ, ನಾಗರಿಕತೆ ಬೆಳೆದಂತೆಲ್ಲಾ ಪರಾಕ್ರಮಣಕಾರಿ ಯಾಗುತ್ತ ನಡೆದದ್ದು ಸೋಜಿಗದ ಸಂಗತಿ.

ಕಾಲ ಮತ್ತು ದೇಶಗಳು ಯಾವುದೇ ಇರಲಿ, ಸರ್ವಾಧಿಕಾರಿಗಳ ಮತ್ತು ಮತಾಂಧರ ಸಮ್ಮುಖ ಬದುಕಿದ್ದು ಸ್ವಹಿತದ ಜೊತೆಗೆ ಪರಹಿತ ಬಯಸಿದ ಮಹಾನುಭಾವರೂ ಬಹಳ ಜನ ಆಗಿಹೋಗಿದ್ದಾರೆ. ಯಾವ ಪ್ರಾಚೀನ ಇರಾನ್ ದೇಶ ಕ್ರೂರಿ ರಾಜರ ನೆಲೆಯಾಗಿತ್ತೋ ಅದೇ ದೇಶದಲ್ಲಿ ಮಹಾಕವಿಗಳೂ ದಾರ್ಶನಿಕರೂ ಸೂಫಿಸಂತರೂ ಜನಿಸಿ ವಿಶ್ವದಾದ್ಯಂತ ತಮ್ಮ ವಿಚಾರಗಳ, ಜೀವನಕ್ರಮದ ಮತ್ತು ಮಾನವ ಬಂಧುತ್ವದ ಪ್ರಭಾವವನ್ನೂ ಬೀರಿದುದು ಗಮನಾರ್ಹ.

ಸೂಫಿಗಳ ಸಂಖ್ಯೆ ಸಹಸ್ರಾರು. ಅವರಲ್ಲಿ ನೂರಾರು ಜನ ಮಾತ್ರ ಉನ್ನತಿಯನ್ನು ಪಡೆದವರು. ಆ ಶ್ರೇಷ್ಠ ಮಟ್ಟದ ಸೂಫಿಗಳಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಪರಿಣಾಮಕಾರಿ ಎನಿಸಿದವರು ಮೌಲಾನಾ ಜಲಾಲುದ್ದೀನ್ ರೂಮಿ. ಕೆಲವೊಮ್ಮೆ ವಿವರಿಸುವ ಸಂಗತಿಗಳು ಸಾಮಾನ್ಯವೆನಿಸುವಂಥವು. ಅದಕ್ಕೆ ಕಾರಣ, ಅವರು ನೀಡಿರುವ ದೃಷ್ಟಾಂತಗಳು ಇತಿಹಾಸದಲ್ಲಿ, ಧಾರ್ಮಿಕ ಪರಂಪರೆಗಳಲ್ಲಿ ಮತ್ತು ತತ್ವಜ್ಞಾನದಲ್ಲಿ ದೊರೆಯುವಂಥವು. ಆದರೆ ಅವರ ಸ್ವಂತ ಕೊಡುಗೆ ಯೂ ಕಮ್ಮಿ ಇಲ್ಲ. ಈ ಎರಡು ಬಗೆಯ ರಚನೆಗಳಲ್ಲೂ ರೂಮಿಯ ಸ್ವೋಪಜ್ಞತೆ ಕಂಡುಬರುವುದು ಅವರ ಕವಿತಾ ಕೌಶಲ್ಯದಲ್ಲಿ. ಅವರ ಎಷ್ಟೋ ಕಥನ ಕವನಗಳು ಜಗತ್ತಿನ ಇತರ ಭಾಷೆಗಳಿಗೆ ಅನುವಾದಗೊಂಡ ನಂತರ, ಅವರ ಹೆಸರನ್ನೂ ಕೃತಿಯ ಉಲ್ಲೇಖ ವನ್ನೂ ಸೂಚಿಸದೇ ಪ್ರಕಟಿಸಲ್ಪಟ್ಟ ಕಾರಣ, ನಿಜಾಂಶ ತಿಳಿಯದವರಿಗೆ ಅವು ಪರಿಚಿತ ಮತ್ತು ಚರ್ವಿತಚರ್ವಣ ಎನಿಸುವ ಅಪಾಯಕ್ಕೆ ಒಳಗಾಗಿವೆ. ‘ದೊಡ್ಡ ಜನರ ವಿಚಾರಗಳಲ್ಲಿ ಸಾಮ್ಯವಿದೆ’ ಎಂಬ ಇಂಗ್ಲಿಷ್ ಗಾದೆಯೊಂದಿದೆ. ಹಾಗೆಯೇ, ‘ಮೂರ್ಖಮತಿಗಳು ಭಿನ್ನರಾಗಿರುವುದು ಅಪರೂಪ’ ಎಂಬ ಹಾಸ್ಯಪೂರ್ಣ ಹೇಳಿಕೆಯೂ ಇದೆ. ‘ಅಂಬಿಗ ಮತ್ತು ಪಂಡಿತ’, ‘ನರಿಯ ಸಂಚು’ ‘ಸ್ವಾಮಿನಿಷ್ಠ ಸಚಿವ’ ಇತ್ಯಾದಿ ಹಲವಾರು ಪ್ರಸಂಗಗಳು ಇಂದು ಜಗತ್ತಿನ ಎಲ್ಲ ಶಾಲಾ ಪುಸ್ತಕಗಳಲ್ಲಿ ನೀತಿಪಾಠಗಳಾಗಿವೆ. ಆದರೆ ಏಳೆಂಟು ಶತಮಾನಗಳ ಹಿಂದೆ ಇಂಥ ವೃತ್ತಾಂತಗಳನ್ನು, ಕಟ್ಟುಕತೆಗಳನ್ನು, ಐತಿಹಾಸಿಕ ಸಂಗತಿಗಳನ್ನು ಕಾವ್ಯವನ್ನಾಗಿಸಿದ ರೂಮಿ, ತಮ್ಮ ಕವನಗಳ ಉದ್ದಕ್ಕೂ ಹಿತವಚನಗಳನ್ನು, ಎಚ್ಚರಿಕೆಗಳನ್ನು ಓದುಗನ ಮನಸ್ಸಿಗೆ ತಕ್ಷಣ ನಾಟುವಂಥ ರೀತಿಯಲ್ಲಿ ಪೋಣಿಸಿದ್ದಾರೆ. ಇದಕ್ಕೆ ಮಿಗಿಲಾಗಿ ತಾರ್ಕಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಸತ್ಯಗಳನ್ನೂ ಅವರು ನೀಡಿದ್ದಾರೆ.

ರೂಮಿ ತಮ್ಮ ವಿವೇಕಪೂರ್ಣ ಪದ್ಯಗಳ ವಾಚನ ಆರಂಭಿಸಿದಾಗ, ಅವರ ಬಗ್ಗೆ ಯಾವುದೇ ಅಭಿಪ್ರಾಯವನ್ನು ತಾಳಲು ಜನರಿಗೆ ಸಮಯವೇ ಇರಲಿಲ್ಲವಂತೆ. ಅವರ ಶ್ರೋತೃಗಳಲ್ಲಿ ಕೆಲವರು ಆಸಕ್ತರಾ ಗಿದ್ದರು. ಮತ್ತೆ ಕೆಲವರು ಆಗಿರಲಿಲ್ಲ. ಅನಿವಾರ್ಯವಾದ ಮಾನವೀ ಯ ಕ್ರಮವೊಂದನ್ನು ಅನುಸರಿಸಿದಂಥ ಮತ್ತೆ ಕೆಲವರು ರೂಮಿಯ ಬಗ್ಗೆ ಕೋಪಗೊಂಡು ಹೇಳಿದರು, ‘‘ನೀವು ನಿಮ್ಮನ್ನು ಎರಡನೆ ಇಸೋಪ್ ಅಥವಾ ಇನ್ಯಾರೋ ಎಂದು ಭಾವಿಸಿರಲಾರಿರಿ’’ ಎಂಬ ಭರವಸೆ ನಮಗಿದೆ.

ನೇರ ಮಾರ್ಗದಿಂದ ವಿಚಲಿತ ರಾಗಿ, ನಾಟಕ- ಪ್ರದರ್ಶನ ಗಳಿಗೆ, ಸಂಗೀತ, ಗಾಯನ ಮತ್ತಿತರ ಚಟು ವಟಿಕೆಗಳಿಗೆ ಆಸ್ಪದ ಮತ್ತು ಉತ್ತೇಜನ ನೀಡುತ್ತಿರುವುದಾಗಿ, ಜನರು ರೂಮಿ ಯನ್ನು ದೂಷಿಸುತ್ತಿದ್ದರು. ಆ ಟೀಕೆಗಳಿಗೆ ತಾವು ಎಂದೂ ಉತ್ತರ ನೀಡುತ್ತಿರಲಿಲ್ಲವೆಂದು ತಮ್ಮ ‘ಮುನಾಖಿಬಿಲ್ ಆರಿಫೀನ್’ ಕೃತಿಯಲ್ಲಿ ರೂಮಿ ಹೇಳಿದ್ದಾರೆ. ಆದರೆ ಅವರು ಕೆಳಗೆ ಉಲ್ಲೇಖಿಸಿರುವುದನ್ನು ಹೇಳಿದ್ದರೆಂದು ಇತರ ವರದಿಗಳು ತಿಳಿಸುತ್ತವೆ;

‘‘ಯಾವಾಗಲೂ ದಿನದ ಮುಕ್ತಾಯದ ವೇಳೆಯಲ್ಲಿ ಲೆಕ್ಕಾಚಾರವನ್ನು ಪರಿಶೀಲಿಸಲಾಗುತ್ತದೆ. ಕಾಲದ ಸಾಕಷ್ಟು ಅವಧಿ ಕಳೆದ ನಂತರ ನಮ್ಮ ಕಾರ್ಯವನ್ನು ಜನರು ಸ್ಮರಿಸುತ್ತಾರೋ ಅಥವಾ ವಿಮರ್ಶಕರ ಹೆಸರುಗಳನ್ನು ನೆನಪಿಸುತ್ತಾರೋ, ನೋಡೋಣ’’.

‘‘ಸಿಂಹಗಳಿರುವುದನ್ನು ನರಿಗಳಿರುವುದನ್ನೂ ಎಲ್ಲರೂ ಬಲ್ಲರು. ಆಧುನಿಕ ಯುಗದಲ್ಲಿ ಬಹುಮಂದಿ ನರಿಗಳು ತಾವು ಸಿಂಹಗಳೆಂದು ಹೇಳಿಕೊಂಡು ಜನರನ್ನು ನಂಬಿಸಿದರೂ ಕಾಲದ ಪ್ರವಾಹದ ಮೇಲೆ ಯಾವಾಗಲೂ ಗತಕಾಲದ ಕಾನೂನುಗಳೇ ಕೆಲಸಮಾಡುತ್ತವೆ’’.

‘‘ಒಂದಾನೊಂದು ಕಾಲದಲ್ಲಿ ಒಂದು ಸಿಂಹವಿತ್ತು ಎಂದು ಪ್ರಾರಂಭವಾಗುವ ಎಷ್ಟೋ ಕತೆಗಳನ್ನು ನೀವು ಕೇಳಿದ್ದೀರಿ. ಒಂದಾ ನೊಂದು ಕಾಲದಲ್ಲಿ ಒಂದು ನರಿ ಇತ್ತು...... ಎಂದು ಪ್ರಾರಂಭವಾ ಗುವ ಎಷ್ಟು ಕತೆಗಳನ್ನು ನೀವು ಕೇಳಿದ್ದೀರಿ?’’

ಪ್ರದರ್ಶನವೊಂದನ್ನು ಮಾಡಿ ತೋರಿಸುತ್ತಿದ್ದ ಸಂದರ್ಭದಲ್ಲಿ ರೂಮಿ ಒಂದು ಮಾಮೂಲಿ ಹರಳಿಗೆ ಅಸಾಧಾರಣ ಗುಣ ಬರುವಂತೆ ಅದನ್ನು ಮಾರ್ಪಡಿಸಿದರು. ಅದನ್ನು ನೋಡಿದ ಜನರು ಅದೊಂದು ಮಾಣಿಕ್ಯವೆಂದು ತಿಳಿದರು. ಅದನ್ನು ಒಡವೆಗಳ ವರ್ತಕನೊಬ್ಬನ ಬಳಿ ಒಯ್ದಿಗ ಅದು ಒಂದು ಲಕ್ಷಕ್ಕೂ ಹೆಚ್ಚು ದಿರ್‌ಹಮ್‌ಗಳಿಗೆ ಬಿಕರಿಯಾಯಿತು.

ಆದರೆ ರೂಪಾಂತರವನ್ನು ಕುರಿತು ಸ್ವತಃ ರೂಮಿ ಹೇಳಿದರು. ‘‘ಸ್ವರ್ಶಮಣಿಯನ್ನು ಬಳಸಿ ತಾಮ್ರವನ್ನು ಬಂಗಾರವನ್ನಾಗಿ ಪರಿವರ್ತಿಸುವುದು ನಿಜವಾಗಿಯೂ ಅದ್ಭುತ ಸಂಗತಿ. ಅದಕ್ಕಿಂತಲೂ ಅದ್ಭುತವಾದುದೇನೆಂದರೆ, ಸ್ವತಃ ಸ್ಪರ್ಶಮಣಿಯಾಗಿರುವ ಮನುಷ್ಯ ತನ್ನ ಉದಾಸೀನತೆಯ ಕಾರಣ ಘಳಿಗೆ ಘಳಿಗೆಗೂ ತಾಮ್ರವಾಗಿ ರೂಪಾಂತರಗೊಳ್ಳುತ್ತಿದ್ದಾನೆ’’.

ಇತರ ಸೂಫಿ ಬರಹಗಾರರಂತೆ ರೂಮಿಯೂ ತಮ್ಮ ಬೋಧನೆ ಗಳನ್ನು ಒಂದು ಚೌಕಟ್ಟಿನೊಳಗೆ ಜೋಡಿಸುತ್ತಾರೆ. ಈ ವಿಧಾನದ ಕಾರಣ ಅವರ ರಚನೆಗಳು ತಮ್ಮ ಒಳಾರ್ಥವನ್ನು ಎಷ್ಟು ಪರಿಣಾಮ ಕಾರಿಯಾಗಿ ಪ್ರಕಟಿಸುತ್ತಮೋ ಅಷ್ಟೇ ಕುಶಲತೆಯಿಂದ ಅದನ್ನು ಬಚ್ಚಿಡುತ್ತವೆ. ಈ ತಂತ್ರ ಹಲವು ಉದ್ದೇಶಗಳನ್ನು ಸಾಧಿಸುತ್ತದೆ. ಕಾವ್ಯ ಬೇಕೆನ್ನುವವರಿಗೆ ಅದು ಕಾವ್ಯ ನೀಡುತ್ತದೆ; ಮನರಂಜನೆ ಬಯಸಿದವರಿಗೆ ಅದು ಮನರಂಜಿಸುವ ಕತೆಗಳನ್ನು ಒದಗಿಸುತ್ತದೆ; ಅನುಭವಗಳಿಗೆ ಬೆಲೆ ಕೊಡುವವರಿಗೆ ಅದು ತಮ್ಮ ಬುದ್ಧಿಶಕ್ತಿಯನ್ನು ಚುರುಕುಗೊಳಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಅವು ಧ್ಯಾನ ಪ್ರಧಾನ ವಿಷಯಗಳಾದರೂ ಅವುಗಳಲ್ಲಿ ಹಲವು ಸೂಕ್ತಿಗಳಾಗಿಯೂ ತತ್ವಗಳಾಗಿಯೂ ಅಥವಾ ಬೋಧನಾಪ್ರಧಾನ ಸಂತವಾಣಿಗಳಾಗಿಯೂ ಉಪಯುಕ್ತವಾಗಬಲ್ಲವು.

ಸಾಹಿತ್ಯ ಗುಣ ಮತ್ತು ಕಾವ್ಯಪ್ರತಿಭೆ ಸೂಫಿಗಳಲ್ಲಿದ್ದ ಒಂದು ಅನನು ಕೂಲಕರ ಅಭ್ಯಾಸವಾಗಿತ್ತು. ಈ ದಿಸೆಯಲ್ಲಿ ರೂಮಿಯ ಅಭಿವ್ಯಕ್ತಿ ಅವರ ಎಲ್ಲಾ ಸಮಕಾಲೀನ ಸೂಫಿಕವಿಗಳ ರಚನೆಗಳನ್ನು ಮೀರಿದು ದಾಗಿದೆ. ಸೂಫಿತನದೊಂದಿಗೆ ಹೋಲಿಸಿದಾಗ ಈ ಸಾಧನೆ ಘನ ವಾದದ್ದೇನಲ್ಲವೆಂದು ರೂಮಿ ಯಾವಾಗಲೂ ಒತ್ತಿ ಹೇಳುತ್ತಿದ್ದರು.

ಒಮ್ಮೆ ಅವರ ಮಗ ರೂಮಿಯನ್ನು ಪ್ರಶ್ನಿಸಿದ: ‘‘ದರ್ವೇಶ್ ಆದವನು ಹೇಗೆ ಮತ್ತು ಏಕೆ ಅಗೋಚರನಾಗಿರುತ್ತಾನೆ? ಅದನ್ನವನು ವೇಷ ಮರೆಸಿ ಮಾಡುತ್ತಾನೋ ಅಥವಾ ಹುದುಗಿಸಿಟ್ಟಂಥದೇನಾ ದರೂ ಅವನಲ್ಲಿಯೇ ಇದೆಯೋ?’’

ರೂಮಿ ಉತ್ತರಿಸಿದರು: ‘‘ಅದನ್ನು ಯಾವ ವಿಧಾನದಿಂದಾದರೂ ಮಾಡಬಹುದು. ಕೆಲವರು ಪ್ರೇಮಗೀತೆಗಳನ್ನು ಬರೆಯುತ್ತಾರೆ. ಅವು ಸಾಧಾರಣ ಪ್ರೇಮಕ್ಕೆ ಸಂಬಂಧಿಸಿದುವೆಂದು ಜನರು ಭಾವಿಸುತ್ತಾರೆ. ತಾನು ಅನುಸರಿಸುತ್ತಿರುವ ‘ಮಾರ್ಗ’ದ ಯಾವ ಹಂತದಲ್ಲಿ ತಾನಿ ದ್ದಾನೆಂಬುದನ್ನು, ಏನಾದರೊಂದು ವೃತ್ತಿಯನ್ನು ಆಚರಿಸುವುದರ ಮೂಲಕ ದರ್ವೇಶ್ ಬಚ್ಚಿಡಬಹುದು. ಕೆಲವರು ಬರಹಗಾರರಾಗಿದ್ದಾರೆ. ಮತ್ತೆ ಕೆಲವರು ಬಾಬಾ ಫರೀದ್‌ರಂತೆ ವರ್ತಕರಾಗಿದ್ದಾರೆ. ಇನ್ನೂ ಕೆಲವರು ವಿವಿಧ ರೀತಿಯ ಬಾಹ್ಯ ಚಟುವಟಿಕೆಗಳಲ್ಲಿ ತೊಡಗಿ ರುತ್ತಾರೆ’’.

‘‘ಟೊಳ್ಳು ಜನರ ವಿರುದ್ಧ ಸಂರಕ್ಷಣೆಗೋಸ್ಕರ ಹಾಗೆ ಮಾಡಬ ಹುದೆಂದು ಕೆಲವರು ಉದ್ದೇಶಪೂರ್ವಕವಾಗಿ, ಸಮಾಜವು ಅಂಗೀಕರಿ ಸದಂಥ ರೀತಿಯಲ್ಲಿ, ವರ್ತಿಸಬಹುದು. ಆದ್ದರಿಂದ, ‘ಉನ್ನತ ಜ್ಞಾನ ಸಂಪಾದಿಸಿದವ ನನ್ನು ದೇವರು ಬಚ್ಚಿಟ್ಟಿದ್ದಾನೆ’ ಎಂದು ಪ್ರವಾದಿ ಮುಹಮ್ಮದರು ಹೇಳಿದ್ದಾರೆ.’’

‘‘ಸೂಫಿ ಮಾರ್ಗವನ್ನು ಅನುಸರಿ ಸುವವರು, ಕ್ರಮವೊಂದನ್ನು ಅಳವ ಡಿಸಿಕೊಳ್ಳಬಹುದು, ಹಾಗೆ ಮಾಡ ದಿದ್ದರೆ ತಮಗೆ ಅಡ್ಡಿಯುಂಟಾಗ ಬಹುದೆಂಬ ಕಾರಣದಿಂದ.’’

ನಂತರ ರೂಮಿ ಈ ಸಾಲುಗಳನ್ನು ಉಸುರಿದರು:

ಸದಾ ತಿಳಿಯಬಯಸುತ್ತ, ಹುದುಗಿದ್ದಂತೆಯೇ ಅವರು ಶೋಧಿಸುತ್ತಿರುತ್ತಾರೆ.

ತಾವು ಏನಾಗಿರುವರೋ ಅದಕ್ಕೆ ವ್ಯತಿರಿಕ್ತವಾಗಿ,

ಸಾಧಾರಣ ಜನರಿಗೆ ತೋರುತ್ತಾರೆ.

ಆಂತರಿಕ-ಜ್ಯೋತಿಯಲ್ಲಿ ಅವರು ಅಲೆಯುತ್ತಾರೆ,

ಪವಾಡಗಳನ್ನು ಜರುಗಿಸುತ್ತ.

ಆದರೂ ‘ನಿಜವಾಗಿಯೂ’ ಯಾರೂ ಅವರನ್ನು ಗುರುತಿಸಲಾರರು.

ರೂಮಿಯ ‘ಮಸ್ನವಿ’ಯೊಳಗಿನ ವೃತ್ತಾಂತವೊಂದರ ಕಡೆ ಓದುಗರ ಗಮನ ಸೆಳೆಯುತ್ತ, ಅವರ ಅನುಯಾಯಿ ಖ್ವಾಜಾ ಫಿದಾಯಿ ಕೆಳಗೆ ಕಾಣಿಸಿದ ವಿವರಣೆ ನೀಡಿದ್ದಾರೆ:

‘‘ತನ್ನ ಇಡೀ ಮನಸ್ಸು ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯವನ್ನು ಮೀರಿ ಯಾರೊಬ್ಬನೂ ಅರ್ಥಮಾಡಿಕೊಳ್ಳಲಾರ. ಈ ಕಾರಣಕ್ಕಾಗಿಯೇ ಪ್ರವಾದಿ ಮುಹಮ್ಮದ್ ಪ್ರತಿಯೊಬ್ಬ ವ್ಯಕ್ತಿಯ ತಿಳುವಳಿಕೆಯ ಶಕ್ತಿಗನುಸಾರವಾಗಿ ಅವನೊಂದಿಗೆ ಮಾತಾಡಿ ಎಂದಿದ್ದಾರೆ. ಒಬ್ಬನು ಹೇಗೆ ಗ್ರಹಿಸಬಲ್ಲನೋ, ಹಾಗೆಯೇ ಅವನು ಲಾಭ ಪಡೆಯುವನು. ಒಬ್ಬ ಪುರುಷ ಅಥವಾ ಸ್ತ್ರೀ ಕೆಳಮಟ್ಟದ ಗ್ರಹಣಶಕ್ತಿಯನ್ನು ಮಾತ್ರ ಹೊಂದಿರುವುದಾದರೆ ಅವನು ಅಥವಾ ಅವಳು ಆ ಮಟ್ಟದಲ್ಲೇ ಜ್ಞಾನವನ್ನು ಅರಸುತ್ತ ತೃಪ್ತಿಪಡಬಹುದು.’’

ಈ ಅಂಶವನ್ನು ವಿಶದೀಕರಿಸಲು ರೂಮಿ ತಮ್ಮ ‘ಮಸ್ನವಿ’ಯಲ್ಲಿ ‘ಪ್ರವಾದಿ ಮೂಸಾ ಮತ್ತು ಕುರುಬ’ನೊಬ್ಬನ ದೃಷ್ಟಾಂತವನ್ನು ಉಲ್ಲೇಖಿಸಿದ್ದಾರೆ. (ನೋಡಿ: ‘ಪ್ರತಿಮಾ ವಿಧಾನ’)

ಸೂಫಿ ಕವಿಗಳಿರಲಿ, ಸಂತರಿರಲಿ, ಅವರು ಅಪ್ಪಟ ಧಾರ್ಮಿಕ ವ್ಯಕ್ತಿಗಳಾಗಿದ್ದರೂ, ತಮ್ಮ ವಿಚಾರಧಾರೆಯನ್ನಾಗಲೀ ತಾವು ಅನುಸರಿಸುವ ಮಾರ್ಗವನ್ನಾಗಲೀ ಅನ್ಯರ ಮೇಲೆ ಹೇರುವ ಪ್ರವೃತ್ತಿಯವರಲ್ಲ. ಅವರು ಮತಾಂಧರೂ ಅಲ್ಲ, ಕಲಹಪ್ರಿಯರೂ ಅಲ್ಲ. ಅಲ್ಲದೆ ತಮ್ಮ ರೀತಿ ನೀತಿಗಳೇ ಸರಿ ಎಂದು ವಾದಿಸುವ ಕುತರ್ಕಿಗಳೂ ಅಲ್ಲ. ಜಿಜ್ಞಾಸೆಯುಳ್ಳವರಿಗೆ ಗುರುವಿನ ಸ್ಥಾನದಲ್ಲಿದ್ದು ನೇರವಾಗಿ ಅಥವಾ ತಮ್ಮ ಕೃತಿಗಳ ಮುಖಾಂತರ ಸತ್ಯವನ್ನು ಅರುಹುವವರು. ಅವರು ಕಾಲ-ದೇಶಗಳನ್ನು ಮೀರಿ ಮಾನವ ಜನಾಂಗಕ್ಕೆ ಮಾರ್ಗದರ್ಶನ ನೀಡುವವರು. ಅವರ ವಿಚಾರಗಳು ಎಲ್ಲ ಕಾಲ ಮತ್ತು ದೇಶಗಳಿಗೂ ಪ್ರಸ್ತುವೆನಿಸುತ್ತವೆ. ಹಾಗೆಂದೇ ಶ್ರೇಷ್ಠ ಸೂಫಿಗಳಲ್ಲಿ ಹೆಚ್ಚು ಗಮನಾರ್ಹರಾದ ಜಲಾಲುದ್ದೀನ್ ರೂಮಿ ವರ್ತಮಾನದ ಸಂದರ್ಭಕ್ಕೂ ಪ್ರಸ್ತುತರಾಗುತ್ತಾರೆ.

ಕನ್ನಡದ ಖ್ಯಾತ ಬರಹಗಾರ ಹಾಗೂ ಶಿಕ್ಷಕರಾಗಿದ್ದ ಶ್ರೀ ಅಬ್ದುಲ್ ಮಜೀದ್ ಖಾನ್‌ರವರು 13ನೆ ಶತಮಾನದ ಪರ್ಶಿಯಾದ ಜಗತ್ಪ್ರಸಿದ್ಧ ಚಿಂತಕ ಹಾಗೂ ಕವಿ. ಜಲಾಲುದ್ದೀನ್ ಮುಹಮ್ಮದ್ ರೂಮಿ ಕುರಿತಂತೆ ಬರೆದದ್ದು.

ರೂಮಿ ವಚನ ಸುಧೆ

ನಿರಾಕರಣೆ ಮತ್ತು ಆಕ್ಷೇಪಣೆ ಮಾಡುವುದರಲ್ಲಿ ದುಡುಕಬೇಡ.

ಪ್ರೀತಿ ಮತ್ತು ಭೀತಿ ಪರಸ್ಪರ ವಿರೋಧಿಗಳು.

ಸಂವಾದದಿಂದ ಉಪಯೋಗವಿಲ್ಲದಿದ್ದರೆ ನಾಲಗೆಯನ್ನು ಸಡಿಲ ಮಾಡಬೇಡ. ಅದು ನಿಜವಾಗಿಯೂ ಲಾಭದಾಯಕವಾಗಿದ್ದರೆ ಆಕ್ಷೇಪಣೆಯನ್ನು ಒಡ್ಡಬೇಡ.

ವಸಂತ ಋತು ಬಂದರೂ ಕಲ್ಲು ಚಿಗುರುವುದಿಲ್ಲ. ಆದ್ದರಿಂದ ನೀನು ಮಣ್ಣಾಗು; ಆಗ ನಿನ್ನಿಂದ ಬಣ್ಣಬಣ್ಣದ ಹೂವುಗಳು ಅರಳುವವು. ವರ್ಷವರ್ಷವೂ ನೀನು ಗಟ್ಟಿ ಶಿಲೆಯಾಗಿದ್ದೆ; ಕೊಂಚಕಾಲ ಮಣ್ಣಾಗಿಯೂ ಪರೀಕ್ಷಿಸಿ ನೋಡು.

ಯಾರಿಗೂ ನಿನ್ನ ಹಿತಚಿಂತನೆ ಇಲ್ಲದಿರುವಾಗ, ನಿನ್ನ ಕೆಲಸವನ್ನು ನೀನೇ ಮಾಡಿಕೊಳ್ಳಬೇಕು. ಒಂದೊಂದು ದುರ್ಗುಣವೂ ಒಂದು ಮುಳ್ಳಿನ ಪೊದೆ. ನಿನ್ನ ದುರ್ಗುಣಗಳಿಂದ ಇತರರಿಗಾದ ತೊಂದರೆಯ ಬಗ್ಗೆ ನೀನು ಅಸಡ್ಡೆ ತೋರಿದರೆ ಚಿಂತೆ ಇಲ್ಲ. ಆದರೆ ಅದರಿಂದ ನಿನಗೂ ಆಗುವ

ಗಾಯಗಳ ಅರಿವು ನಿನಗಾಗದೆ?

ಅನ್ಯರ ದೋಷಗಳ ಮೇಲೆ ಕಣ್ಣಿಡುವವರು ಬಹುವಾಗಿ ಪತಭ್ರಾಂತರಾಗುವರು. ತನ್ನ ದೋಷಗಳನ್ನು ಗುರುತಿಸುವವನೇ ಸಜ್ಜನ. ಒಬ್ಬನು ಅವನಿಗೆ ಇನ್ನೊಬ್ಬನ ದೋಷಗಳನ್ನು ವಿವರಿಸಿದಾಗ, ಸಜ್ಜನ ಅವನ್ನು ತನಗೇ ಅನ್ವಯಿಸಿಕೊಳ್ಳುತ್ತಾನೆ. ಒಂದು ವೇಳೆ ಅಂಥ ದೋಷಗಳು ನಿನ್ನಲ್ಲಿರದಿದ್ದರೆ, ನಿಶ್ಚಿಂತನಾಗಬೇಡ. ಮುಂದೆ ಅವು ನಿನ್ನಲ್ಲೇ ಪ್ರಕಟವಾಗುವುದು ಸಾಧ್ಯವಿದೆ.

ಸಜ್ಜನರು ಅಸಹಾಯಕ ಸ್ಥಿತಿಯಲ್ಲಿ ನೀಚ ಲೋಭಿಗಳ ಅಡಿಯಾಳಾಗುತ್ತಾರೆ. ಹಸಿವು ಮಿತಿ ಮೀರಿದಾಗ ಹುಲಿಯೂ ಸತ್ತ ಪ್ರಾಣಿಗಳನ್ನು ತಿನ್ನಲು ಪ್ರಾರಂಭಿಸುತ್ತದೆ.

ಮೂರ್ಖರಿಂದ ದೂರ ಓಡು; ಬುದ್ಧಿಹೀನರ ಸಂಗ ದೊಡ್ಡ ದೊಡ್ಡ ಕಲಹಗಳಿಗೆ ಕಾರಣವಾಗಿದೆ. ಗಾಳಿ ಹೇಗೆ ನಿಧಾನವಾಗಿ ನೀರನ್ನು ಒಣಗಿಸುವುದೋ ಹಾಗೇ ಮೂರ್ಖನೂ ನಿನಗರಿವಿಲ್ಲದಂತೆ ನಿನ್ನನ್ನು ಆಕ್ರಮಿಸುತ್ತಾನೆ.

 

ರೂಮಿಯ ಸಮಾಧಿ ಲೇಖ

ನಾನು ಸತ್ತು ಹೋದಾಗ ನನ್ನ ಗೋರಿಗಾಗಿ ಹುಡುಕಬೇಡ; ಅದನ್ನು ಜನರ ಹೃದಯಗಳಲ್ಲಿ ಹುಡುಕು.

‘‘ಯಾವಾಗಲೂ ದಿನದ ಮುಕ್ತಾಯದ ವೇಳೆಯಲ್ಲಿ ಲೆಕ್ಕಾಚಾರವನ್ನು ಪರಿಶೀಲಿಸಲಾಗುತ್ತದೆ. ಕಾಲದ ಸಾಕಷ್ಟು ಅವಧಿ ಕಳೆದ ನಂತರ ‘ನಮ್ಮ’ ಕಾರ್ಯವನ್ನು ಜನರು ಸ್ಮರಿಸುತ್ತಾರೋ ಅಥವಾ ವಿಮರ್ಶಕರ ಹೆಸರುಗಳನ್ನು ನೆನಪಿಸುತ್ತಾರೋ, ನೋಡೋಣ.’’

 

Writer - ಅಬ್ದುಲ್ ಮಜೀದ್ ಖಾನ್

contributor

Editor - ಅಬ್ದುಲ್ ಮಜೀದ್ ಖಾನ್

contributor

Similar News