ಶಾಶ್ವತ ಶಂಕಿತರ ಬದುಕಿನ ಕಥೆ-ವ್ಯಥೆ

Update: 2017-07-30 08:34 GMT
ಅಮೀರ್ ಖಾನ್

ಭಾರತದಲ್ಲಿ ಈಗ ಭಯೋತ್ಪಾದನೆಯ ವಿಚಾರಗಳನ್ನು ನಿರ್ವ ಹಿಸುವಾಗ, ಶಂಕಿತರನ್ನು-ಅದರಲ್ಲೂ ಅವರು ಮುಸ್ಲಿಮರಾ ಗಿದ್ದರೆ- ಬಂಧಿಸಿ ವಿಚಾರಣೆಗೊಳಪಡಿಸುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಒಂದು ತೆರನಾದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪೊಲೀಸರನ್ನು ಒಳಗೊಂಡ ಕಾರ್ಯಾಂಗವು ಆಕ್ರಮಣಕಾರಿ ಧೋರಣೆ ಪ್ರದರ್ಶಿಸುತ್ತಿದ್ದರೆ, ಅನೇಕ ಬಾರಿ ನ್ಯಾಯಾಂಗವೂ ಪೊಲೀಸರ ಧೋರಣೆಗೆ ಪೂರಕವಾಗಿ ವರ್ತಿಸುತ್ತಿರುವುದಕ್ಕೆ ಅನೇಕ ಉದಾಹರಣೆಗಳು ಕಾಣಸಿಗುತ್ತಿವೆ.

ಮುಂಬೈ ಬಾಂಬ್ ದಾಳಿ ಘಟನೆಯ ಶಂಕಿತ ಆರೋಪಿಗಳಲ್ಲಿ ಒಬ್ಬರಾಗಿ ಬಂಧನಕ್ಕೊಳಗಾಗಿ ಒಂಬತ್ತು ವರ್ಷಗಳ ಕಾಲ ಭಯೋತ್ಪಾದನೆಯ ಆರೋಪ ಹೊತ್ತು ಈಗ ನಿರ್ದೋಷಿ ಎಂದು ನ್ಯಾಯಾಲಯದಿಂದ ಬಿಡುಗಡೆ ಹೊಂದಿರುವ ಅಬ್ದುಲ್ ವಾಹಿದ್ ಶೇಖ್ ಅವರಲ್ಲಿ ಒಬ್ಬರು.

ಸೆರೆವಾಸದಿಂದ ಬಿಡುಗಡೆಯಾಗಿ ಬಂದ ನಂತರ ಇತ್ತೀಚೆಗೆ ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್‌ನಲ್ಲಿ ವಾಹಿದ್ ಶೇಖ್ ಮಾತನಾ ಡಿದ್ದನ್ನು ಇಲ್ಲಿ ನಿರೂಪಿಸಿದೆ.

ನಿನ್ನ ಎರಡು ತುಟಿಗಳು ಮುಕ್ತವಾಗಿವೆ, ಮಾತನಾಡು
ಈಗಲೂ ನಿನ್ನ ನಾಲಿಗೆ ನಿನ್ನದೇ, ಮಾತನಾಡು
ನೇರವಾದ, ಹುರಿಗೊಂಡ ನಿನ್ನ ದೇಹವು ಈಗಲೂ ನಿನ್ನದೇ
ನಿನ್ನ ಬದುಕು ಈಗಲೂ ನಿನ್ನದೇ, ಮಾತನಾಡು

ಎನ್ನುವ ಫೈಝ್ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸುತ್ತ ತಮ್ಮ ಮಾತುಗಳನ್ನು ಆರಂಭಿಸಿದ ಅಬ್ದುಲ್ ವಾಹಿದ್ ಶೇಖ್ ‘‘ಅನು ಮಾನಿತರು ಮತ್ತು ಅವಮಾನಿತರ’’ ಮತ್ತೊಂದು ನರಕದ ಲೋಕವನ್ನೇ ಬಿಚ್ಚಿಟ್ಟರು. ಮೂಲತಃ ಬಿ.ಎಡ್. ಪದವೀಧರ, ಶಿಕ್ಷಕರಾದ ವಾಹಿದ್ ನಮ್ಮ ಮುಂದೆ ಬಿಚ್ಚಿಟ್ಟಿದ್ದು ‘‘ಶಾಶ್ವತ ಶಂಕಿತ’’ರಾದ ಭಯೋತ್ಪಾದಕರೆನ್ನುವ ಹುಸಿಯಾದ ಆರೋಪಗಳನ್ನು ಎದುರಿಸಿ ಜೈಲು ಸೇರಿದ ನಿರಪರಾಧಿ ಮುಸ್ಲಿಂ ಯುವಕರ ಲೋಕ. 11, ಜುಲೈ 2006ರ ಮುಂಬೈ ಟ್ರೇನ್ ಬಾಂಬ್ ಸ್ಫೋಟದ ಪ್ರಕರಣ ದಲ್ಲಿ ಯಾವುದೇ ಅಪರಾಧವನ್ನೇ ಮಾಡದ, ಶಿಕ್ಷಕರಾಗಿದ್ದ ವಾಹಿದ್‌ರನ್ನು ಮುಸ್ಲಿಂ ತರುಣ ಎನ್ನುವ ಒಂದೇ ಕಾರಣಕ್ಕೆ ಆರೋಪಿಯಾಗಿ ಬಂಧಿಸಲಾ ಗಿತ್ತು. ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸಿ, 9 ವರ್ಷಗಳ ಕಾಲ ಕೈದಿಯಾಗಿಕಳೆದ ಆ ದಿನಗಳನ್ನು ಅಬ್ದುಲ್ ವಾಹಿದ್ ವಿವರಿಸುತ್ತಾ ಹೋದಂತೆ ನಮ್ಮೆ ಲ್ಲರ ರಕ್ತ ತಣ್ಣಗೆ ಹೆಪ್ಪುಗಟ್ಟುತ್ತಿತ್ತು. ಅವಮಾನಿತನಾಗಿ ಹೊರಬಂದ ಅಬ್ದುಲ್ ವಾಹಿದ್ ತಮ್ಮ ಅನುಭವಗಳನ್ನು ‘‘ಬೇಗುನಾ ಕೈದಿ’’ (ಅಮಾಯಕ ಕೈದಿ) ಎನ್ನುವ ಆತ್ಮ ಕಥನ ಮಾದರಿಯ ಪುಸ್ತಕ ದಲ್ಲಿ ವಿವರಿಸಿದ್ದಾರೆ.

  ಮುಂಬೈನ ಪಶ್ಚಿಮ ಲೋಕಲ್ ಟ್ರೇನ್‌ನ ಪುರುಷರ ಮೊದಲ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿ 11, ಜುಲೈ 2006ರಂದು ಸಂಜೆ 6:30 -6:37 ರ ಏಳು ನಿಮಿಷದ ಅವಧಿಯಲ್ಲಿ 7 ಬಾಂಬ್ ಸ್ಫೋಟಗೊಳ್ಳುತ್ತವೆ ಮತ್ತು ಯಾವುದೂ ವಿಫಲಗೊಳ್ಳುವುದಿಲ್ಲ. ಜುಲೈ 11 ರಂದು ವಿಚಾರಣೆ ಆರಂಭಿಸಿದ ಮಹಾರಾಷ್ಟ್ರ ಪೊಲೀಸರು ಜುಲೈ 12 ರಂದು ಇಡೀ ತನಿಖೆ ಯ ಜವಾಬ್ದಾರಿಯನ್ನು ‘‘ಭಯೋತ್ಪಾದನೆ ನಿಗ್ರಹ ದಳ’’ (ಎಟಿಎಸ್)ಕ್ಕೆೆ ಹಸ್ತಾಂತರಿಸುತ್ತಾರೆ. ಬಾಂಬ್‌ಅನ್ನು ಸ್ಫೋಟಿಸಿ ಸಾವುನೋವಿಗೆ ಕಾರಣರಾದ ನಿಜವಾದ ಆರೋಪಿಗಳು ಎಟಿಎಸ್ ಪೊಲೀಸರಿಗೆ ದೊರಕುವುದಿಲ್ಲ. ಸ್ಫೋಟ ಗೊಂಡ ಸ್ಥಳದಲ್ಲಿಯೇ ಪಂಚನಾಮೆ ನಡೆಸುತ್ತಾರೆ. ಆದರೆ ಅಲ್ಲಿ ಯಾವುದೇ ಸುಳಿವು ದೊರಕುವುದಿಲ್ಲ, ಆಗ ಈ ಪೋಲೀಸ್ ಅಧಿಕಾರಿಗಳು ಕತ್ತಲಲ್ಲಿ ಬಾಣ ಬಿಡತೊಡಗುತ್ತಾರೆ, ಈ ಪೊಲೀಸರ ಬಳಿ ಎರಡು ಆಯ್ಕೆಗಳಿ ದ್ದವು. ಒಂದು ‘ಸರ್ ನಮಗೆ ಆರೋಪಿಗಳು ದೊರಕಲಿಲ್ಲ, ನಾವು ಅಪರಾಧಿ ಗಳನ್ನು ಪತ್ತೆ ಹಚ್ಚಲು ವಿಫಲರಾಗಿದ್ದೇವೆ’ ಎಂದು ತಮ್ಮ ಮೇಲಧಿಕಾರಿ ಗಳಲ್ಲಿ ನಿವೇದನೆ ಮಾಡಿಕೊಳ್ಳುವುದು, ಎರಡನೆಯದು ನಿರಪರಾಧಿ, ಮುಗ್ದ ಮುಸ್ಲಿಂ ಯುವಕರನ್ನು ಬಂಧಿಸಿ ‘ಸರ್ ನಾವು ಬಾಂಬ್ ಸ್ಫೋಟದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಸುಳ್ಳು, ಕಪಟ ವರದಿ ಸಲ್ಲಿಸುವುದು.

  

   ವಾಹಿದ್ ಶೇಖ್                                  ಅಮೀರ್ ಖಾನ್

ವಾಹಿದ್ ಅವರನ್ನು ಭಯೋತ್ಪಾದಕನೆಂದು ಅನುಮಾನಿಸಿ ಮುಂಬೈ ನಲ್ಲಿ ಬಂಧಿಸಲಾಯಿತಾದರೂ ವಿಚಾರಣೆಯ ನೆಪದಲ್ಲಿ ಬೆಂಗಳೂರಿಗೆ ಕರೆತಂದ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರ ಉದ್ದೇಶ ಹಿಂಸೆ ಕೊಡುವುದಾಗಿತ್ತು. ಅದು ವೈದ್ಯಕೀಯ ಹಿಂಸೆ. ಮಂಪರು ಪರೀಕ್ಷೆ ಯಲ್ಲಿ, ಬ್ರೇನ್ ಮ್ಯಾಪಿಂಗ್‌ನಲ್ಲಿ ಪರಿಣಿತಿ ಸಾಧಿಸಿದವರೆಂದು ಖ್ಯಾತಿ ಪಡೆದ ಫೋರೆನ್ಸಿಕ್ ಲ್ಯಾಬ್‌ನ ವೈದ್ಯರು ವಾಹಿದ್ ಅವರನ್ನು ಮಂಪರು ಪರೀಕ್ಷೆಗೆ ಗುರಿಪಡಿಸಿದರು. ಪರೀಕ್ಷೆಯಲ್ಲಿ ಎಲ್ಲಾ ಸತ್ಯವು ಹೊರಬಂದು ತಾವು ಬಿಡುಗಡೆಯಾಗಬಹುದೆಂದು ಮುಗ್ಧರಾಗಿ ನಂಬಿದ್ದ ಅಬ್ದುಲ್ ವಾಹಿದ್ ಅವರಿಗೆ ಮುಂದೆ ಸರಣಿ ಆಘಾತಗಳು ಕಾದಿದ್ದವು. ಪೊಲೀಸರಕ್ರೌರ್ಯದ ನಿಜಸ್ವರೂಪ ಈರುಳ್ಳಿ ಸಿಪ್ಪೆ ಸುಲಿದಂತೆ ಒಂದೊಂದಾಗಿ ಬಿಚ್ಚಿಕೊ ಳ್ಳತೊಡಗಿದೊಡನೆ ಬೆಚ್ಚಿಬಿದ್ದರು. ಎಟಿಎಸ್‌ನ ಹಿರಿಯ ಅಧಿಕಾರಿಗಳು ಈ ಆರೋಪಿಗೆ ಯಾವ ಪ್ರಶ್ನೆ ಕೇಳಬೇಕು ಮತ್ತು ಈ ಆರೋಪಿಯಿಂದ ಯಾವ ಉತ್ತರವನ್ನು ಪಡೆದುಕೊಳ್ಳಬೇಕೆಂದು ತಮ್ಮೆಳಗೆ ವಿಚಾರಣೆ ಪೂರ್ವದಲ್ಲಿಯೇ ನಿಷ್ಕರ್ಷೆ ಮಾಡಿಕೊಳ್ಳ್ಳತೊಡಗಿದ್ದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಬ್ದುಲ್ ವಾಹಿದ್ ಅವರಿಗೆ ಆತಂಕವಾಗತೊಡಗಿತು.

ಎಟಿಎಸ್ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಪ್ರಶ್ನೆಗಳನ್ನು ತಿರುಚ ಲಾಯಿತು ಮತ್ತು ಉತ್ತರಗಳನ್ನು ಅವರೇ ಕಟ್ಟುತ್ತಿದ್ದರು. ಪೊಲೀಸ್ ಕಸ್ಟಡಿಯಲ್ಲಿ ತಾವು ಮೂರನೆ ದರ್ಜೆಯ ಚಿತ್ರಹಿಂಸೆಗೆ ಗುರಿಯಾಗಿದ್ದನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋದ ವಾಹಿದ್ ಅವರು ಪೊಲೀಸರು ಯಾವ ಯಾವ ಬಗೆಯಲ್ಲಿ ನಕಲಿ ಕತೆಗಳನ್ನು ಸೃಷ್ಟಿಸುತ್ತಾರೆ ಎಂದು ವಿವರಿಸಿದರು. ಇಡೀ ವಿಚಾರಣೆಯ ಪ್ರಕ್ರಿಯೆಯಲ್ಲಿ ಮೂರು ವಿಧಾನಗಳನ್ನು ಅನುಸರಿಸಲಾಗುತ್ತದೆ. ಮೊದಲನೆಯದಾಗಿ ತಪ್ಪೊಪ್ಪಿಗೆ ಯ ಹೇಳಿಕೆ. ಟಾಡಾದ ಸೆಕ್ಷನ್ 15, ಪೋಟಾದ ಸೆಕ್ಷನ್ 32 ಮತ್ತು ಮೋಕಾ ದ ಸೆಕ್ಷನ್ 80ರ ಅಡಿಯಲ್ಲಿ ಈ ತಪ್ಪೊಪ್ಪಿಗೆಯ ಹೇಳಿಕೆಯನ್ನು ದಾಖಲಿಸಿ ಕೊಳ್ಳಲಾಗುತ್ತದೆ. ಈ ತಪ್ಪೊಪ್ಪಿಗೆ ಎನ್ನುವುದು ನಿರಪರಾಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸುವ ಅತ್ಯಂತ ಪ್ರಬಲವಾದ ಆಯುಧ.

ಸ್ಫೋಟಕ್ಕೆ ಸಂಬಂಧಿತ ವಸ್ತುಗಳು: 

ಈ ಸ್ಫೋಟಕ್ಕೆ ಸಂಬಂಧಿತ ವಸ್ತು ಗಳಾದ ರಿವಾಲ್ವರ್, ಆರ್‌ಡಿಎಕ್ಸ್ ಬಾಂಬ್, ಸಿಮಿ ಉಗ್ರ ಸಂಘಟನೆಯ ಮಾನಿಫೆಸ್ಟೋ, ಇಂಡಿಯಾ-ಬಾಂಗ್ಲಾ ದೇಶದ ನಕ್ಷೆ ಇತ್ಯಾದಿಗಳು ಬಂಧಿ ಸಿದ ಆರೋಪಿಗಳ ಮನೆಯಲ್ಲಿ ದೊರೆತವು ಎನ್ನುವ ಸುಳ್ಳು ಸುದ್ದಿಯನ್ನು ಪೊಲೀಸರು ತಮ್ಮ ಮನಸ್ಸಿಗೆ ತೋಚಿದಂತೆ ದಾಖಲಿಸಿದರೂ ಸಾಕು ಅದು ಬಲವಾದ ಸಾಕ್ಷಿಯಾಗಿ ಪರಿಗಣನೆಯಾಗುತ್ತದೆ.


ನಿಜವಲ್ಲದ ಸಾಕ್ಷಿಗಳ ತಯಾರಿ:

ಪೊಲೀಸರ ಚಿತ್ರಹಿಂಸೆ, ನಕಲಿ ಎನ್ ಕೌಂಟರ್ ಮುಂತಾದವುಗಳಿಂದ ಪಾರಾಗಲು ಕೆಲವರು ಅಸಹಾಯಕರಾಗಿ ಸುಳ್ಳು ಸಾಕ್ಷಿಗಳಾಗಿ ನ್ಯಾಯಾಲಯದಲ್ಲಿ ಹಾಜರಾಗುತ್ತಾರೆ. ಬಿಡುಗಡೆಯಾದ ನಂತರ ಅಬ್ದುಲ್ ವಾಹಿದ್ ಅವರು ತಮ್ಮ ಶಿಕ್ಷಕ ವೃತ್ತಿಗೆ ಮರಳಿದ್ದಾರೆ. ಅಂಜುಮನ್-ಎ-ಇಸ್ಲಾಂ ಶಾಲೆಯ ಆಡಳಿತ ಮಂಡಳಿ ವಾಹಿದ್ ಅವರಿಗೆ ಎಲ್ಲಾ ಗೌರವ ಆದರಗಳಿಂದ ಶಿಕ್ಷಕ ಹುದ್ದೆಗೆ ನೇಮಕ ಮಾಡಿಕೊಂಡಿದೆ.

           ವಾಹಿದ್ ಶೇಖ್

ಡಿಸೆಂಬರ್ 1996-1997ರ ನಡುವೆ ದಿಲ್ಲಿ, ರೋಟಕ್, ಘಾಝಿ ಯಾಬಾದ್, ಸೋನಪೇಟ್ ಪಟ್ಟಣಗಳಲ್ಲಿ ಉಂಟಾದ ಬಾಂಬ್ ಸ್ಫೋಟಗಳ (5 ಜನ ತೀರಿಕೊಂಡಿದ್ದರು) ರೂವಾರಿಯಲ್ಲೊಬ್ಬರು ಎಂದು ಮತ್ತೊಬ್ಬ ‘‘ಶಾಶ್ವತ ಶಂಕಿತ’’ರಲ್ಲಿ ಒಬ್ಬರಾದ ಮುಹಮ್ಮದ್ ಅಮೀರ್ ಖಾನ್. ಅವರನ್ನು ಬಂಧಿಸಿದ ಪೊಲೀಸರು ಅವರ ಮೇಲೆ ಕೊಲೆ, ಭಯೋ ತ್ಪಾದನೆ, ದೇಶ ದ್ರೋಹದ ಆಪಾದನೆಗಳನ್ನೊಳಗೊಂಡ ಸುಮಾರು 19 ಕೇಸುಗಳನ್ನು ಹಾಕುತ್ತಾರೆ. ಫೆಬ್ರವರಿ 1998ರ ಸಂಜೆಯ ಹೊತ್ತು. ದಿಲ್ಲಿಯ ಓಣಿಯೊಂದರಲ್ಲಿ 20ರ ಹರೆಯದ ಅಮೀರ್ ಖಾನ್ ಅವರನ್ನು ಹಠಾತ್ತಾಗಿ ಸುತ್ತುವರಿದ ಮಫ್ತಿಯಲ್ಲಿದ್ದ ಪೊಲೀಸರು ಯಾವುದೇ ಮುನ್ಸೂಚನೆ, ಬಂಧನದ ವಾರೆಂಟ್ ನೀಡದೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಹೊತ್ತೊಯ್ಯುತ್ತಾರೆ. ನಂತರದ್ದು ಒಂದು ಯಾತನಾಮಯ ಕತೆ. 14 ವರ್ಷಗಳ ಕಾಲ ದಿಲ್ಲಿಯ ತಿಹಾರ್ ಜೈಲ್, ಘಾಝಿಯಾಬಾದ್ ಜೈಲ್‌ಗಳಲ್ಲಿ ಶಂಕಿತ ಉಗ್ರ ಎನ್ನುವ ಆರೋಪದ ಅಡಿಯಲ್ಲಿ ಕೈದಿಯಾಗಿ ಬಂಧನದಲ್ಲಿದ್ದರು. ಅನೇಕ ಬಗೆಯ ಚಿತ್ರಹಿಂಸೆಗೆ ಗುರಿಯಾದರು.

14 ವರ್ಷಗಳ ನಂತರ 19 ಕೇಸುಗಳ ಪೈಕಿ 17 ಕೇಸುಗಳಲ್ಲಿ ಸೂಕ್ತ ಸಾಕ್ಷಾಧಾರಗಳಿಲ್ಲದೆ ನಿರಪರಾಧಿಯಾಗಿ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಬಂದ ಅಮೀರ್ ಖಾನ್‌ಗೆ ಎದುರಾದದ್ದು ಕಾಯಿಲೆಯಿಂದ, ಮಿದುಳು ರಕ್ತ ಸ್ರಾವದಿಂದ ನರಳುತ್ತಿದ್ದ ಆತನ ಪ್ರೀತಿಯ ಅಮ್ಮ. 6 ತಿಂಗಳ ನಂತರ ಆಕೆಯೂ ತೀರಿಕೊಂಡರು. ಆದರೆ 14 ವರ್ಷಗಳ ಕಾಲ ತನಗಾಗಿ ಕಾಯುತ್ತಿದ್ದ ಬಾಲ್ಯಕಾಲದ ಗೆಳತಿ ಅಲಿಯಾ ಆತನಲ್ಲಿ ಮತ್ತೊಮ್ಮೆ ಬದುಕುವ ಹುಮ್ಮಸ್ಸು, ಜೀವನಪ್ರೀತಿ ಮೂಡಿಸಿದಳು.

ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಕುಟುಂಬದವರ ಜೊತೆ ವಾಹಿದ್ ಶೇಖ್...

ತನ್ನ ಬಾಲ್ಯ ಗೆಳತಿ ಅಲಿಯಾಳನ್ನು ಮದುವೆಯಾದ ಅಮೀರ್ ಖಾನ್‌ಗೆ ಈಗ ಒಬ್ಬ ಮಗಳಿದ್ದಾಳೆ. ಶಬನಮ್ ಹಾಷ್ಮಿ ನಡೆಸುತ್ತಿರುವ ಕೋಮು ಸೌಹಾರ್ದ ಮತ್ತು ಮಾನವ ಹಕ್ಕುಗಳಿಗಾಗಿ ಕೆಲಸ ಮಾಡುವ ‘ಅನ್ಹದ್’ ಎನ್ನುವ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ
1998ರಲ್ಲಿ ಟಾಡಾ, ಪೋಟಾ, ಮೋಕಾ ಕಾಯ್ದೆಗಳನ್ನು ಮುಂದಿಟ್ಟುಕೊಂಡು ನನ್ನನ್ನು ಅಪಹರಿಸಲಾಯಿತು. ಅದು ಬಂಧನವಲ್ಲ. ಕಾನೂನು ಅನುಸಾರ ನನ್ನ ಬಂಧನವಾಗಲಿಲ್ಲ. ಅದು ಅಪಹರಣವಾಗಿತ್ತು. ನಮ್ಮಂತಹವರನ್ನು ಭಯೋತ್ಪಾದನೆಯ ಅಡಿಯಲ್ಲಿ ಬಂಧಿಸಿದಾಗ ನಮ್ಮ ಪರವಾಗಿ ವಕಾಲತ್ತು ವಹಿಸಲು ವಕೀಲರು ದೊರಕುತ್ತಿರಲಿಲ್ಲ. ಸಂತ್ರಸ್ತರ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರವನ್ನು ಹಾಕಲಾಗುತ್ತಿತ್ತು. ಆದರೆ 19 ವರ್ಷಗಳ ನಂತರ ಬಹಳ ಬದಲಾಗಿದೆ. ಮಾನವ ಹಕ್ಕುಗಳ ಪರವಾಗಿ ಅನೇಕ ಸಂಘಟನೆಗಳು ಹೋರಾಡುತ್ತಿವೆ. ಚರ್ಚಿಸುತ್ತಿವೆ. ಸತ್ಯವನ್ನು ಜನರ ಮುಂದಿಡಲು ಪ್ರಯತ್ನಿಸುತ್ತಿವೆ. 19 ವರ್ಷಗಳ ಹಿಂದೆ ಈ ವಾತಾವರಣವಿರಲಿಲ್ಲ.

ಕಾನೂನುಬದ್ಧವಾದ ಸೆರೆಯಲ್ಲಿಡುವುದು ಮತ್ತು ಕಾನೂನುಬಾಹಿರವಾಗಿ ಸೆರೆಯಲ್ಲಿಡುವುದು ಹೀಗೆ ಎರಡು ಬಗೆಯ ಕಸ್ಟಡಿಗಳಿವೆ. ನನ್ನ ಬಂಧಿಸಿದ ನಂತರ 7 ದಿನಗಳ ಕಾಲ ಅನಧಿಕೃತವಾಗಿ ಸೆರೆಯಲ್ಲಿ ಬಂಧಿಸಿದ್ದು ಕಾನೂನುಬಾಹಿರವಾಗಿತ್ತು. ಈ ಬಂಧನದ ಕುರಿತಾಗಿ ನ್ಯಾಯಾಲಯಕ್ಕೆ ತಿಳಿಸಿರಲಿಲ್ಲ, ನನ್ನ ಬಂಧುಗಳಿಗೆ, ತಂದೆ ತಾಯಿಗಳಿಗೆ ತಿಳಿದಿರಲಿಲ್ಲ. ಆದರೆ ದುರಂತವೆಂದರೆ ಈ ಕಾನೂನುಬಾಹಿರ ಬಂಧನದ ಸಂದರ್ಭದಲ್ಲಿಯೇ ಆರೋಪಪಟ್ಟಿ ಸಿದ್ಧವಾಗುತ್ತದೆ. ಸಾಕ್ಷಿಗಳು ಸೃಷ್ಟಿಯಾಗುತ್ತವೆ. ತಪ್ಪೊಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಎಲ್ಲವೂ ಅನಧಿಕೃತವಾಗಿ, ಗೌಪ್ಯವಾಗಿ ಸಾಧಿಸಲಾಗುತ್ತದೆ. ಈ ಕಾನೂನುಬಾಹಿರ ಬಂಧನದ ಮತ್ತೊಂದು ಅಪಾಯವೆಂದರೆ ಆ ಸಂದರ್ಭದಲ್ಲಿ ಪೊಲೀಸರ ಥರ್ಡಗ್ರೇಡ್ ಹಿಂಸೆಯ ಕಾರಣದಿಂದ ಆರೋಪಿಯು ತೀವ್ರವಾಗಿ ಗಾಯಗೊಂಡರೆ, ಸತ್ತು ಹೋದರೆ ಅದಕ್ಕೆ ಯಾವುದೇ ದಾಖಲೆಗಳು ಇರುವುದಿಲ್ಲ. ಆ ಅನಾಥ ಶವವನ್ನು ಪೊಲೀಸರು ರಸ್ತೆಯಲ್ಲಿ ಬಿಸಾಡುತ್ತಾರೆ. ಅದಕ್ಕೆ ಯಾವುದೇ ಪುರಾವೆಗಳೂ ಇರುವುದಿಲ್ಲ. ಏಕೆಂದರೆ ಬಂಧನವೇ ಅನಧಿಕೃತವಾಗಿರುತ್ತದೆ. ಹಾಗಾಗಿ ಸಾವು ಸಹ ಅನಧಿಕೃತವಾಗುತ್ತದೆ. ನನ್ನ ವಿಚಾರಣೆಯನ್ನು ದೀರ್ಘ ವರ್ಷಗಳ ಕಾಲ ಲಂಬಿಸಲಾಯಿತು. 12 ವರ್ಷಗಳ ಕಾಲ ನಾನು ನಿರಂತರವಾಗಿ ಜೈಲಿನ ಸೆಲ್‌ನಲ್ಲಿ ಕೊಳೆಯುತ್ತಿದ್ದೆ, ಬೇಲ್ ಅನ್ನು ಸತತವಾಗಿ ನಿರಾಕರಿಸಲಾಗುತ್ತಿತ್ತು ಎಂದು ನೋವಿನಿಂದ ವಿವರಿಸುತ್ತಾ ಹೋದಂತೆ ಕೇಳುತ್ತ ಕುಳಿತ ಜನರಿಗೆ ಅಧಿಕೃತವಾಗಿ ಬದುಕಿದ್ದೇವೆಯೇ ಎನ್ನುವ ಅನುಮಾನ ಕಾಡಲಾರಂಭಿಸಿತು.

               ಅಮೀರ್ ಖಾನ್

ಇಲ್ಲಿ ಸಂತ್ರಸ್ತರು ಕೇವಲ ಮುಸ್ಲಿಂ ಸಮುದಾಯ ಮಾತ್ರವಲ್ಲ. 1984ರಲ್ಲಿ ಸಿಖ್ ಸಮುದಾಯ ಇದೇ ಬಗೆಯ ಕೊಲೆಗಳಿಗೆ ಬಲಿಯಾಗಿದ್ದಾರೆ. ಛತ್ತೀಸ್‌ಗಡದಲ್ಲಿ ಆದಿವಾಸಿಗಳು ಸಹ ಇದೇ ಮಾದರಿಯ ಸಂತ್ರಸ್ತರು ಎಂದು ಅಭಿಪ್ರಾಯ ಪಡುವ ಅಮೀರ್ ಖಾನ್ ಕಾನೂನನ್ನು ಜೇಡರ ಬಲೆಗೆ ಹೋಲಿಸುತ್ತಾರೆ. ಈ ಜೇಡರ ಬಲೆಗೆ ಸಿಕ್ಕಿಕೊಂಡ ಸಣ್ಣ ಸಣ್ಣ ಸಮುದಾಯಗಳು, ಅನಕ್ಷರಸ್ಥರು, ಅಸಹಾಯಕರು ಬಲೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ ಅಲ್ಲೇ ನರಳುತ್ತಿದ್ದರೆ ಪ್ರಭಾವಶಾಲಿ ವ್ಯಕ್ತಿಗಳು ಈ ಕಾನೂನು ಎನ್ನುವ ಬಲೆಯನ್ನೇ ಹರಿದುಕೊಂಡು ಹೊರ ಬರುತ್ತಾರೆ ಎಂದು ಮಾರ್ಮಿಕವಾಗಿ ವಿವರಿಸಿದರು. ಅಲ್ಲಿ ನೆರದಿದ್ದ ಕಾನೂನು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ‘ನೀವು ವಕೀಲರಾಗಿ ಹೊರಬಂದಾಗ ಈ ಮಾದರಿಯ ಸಂತ್ರಸ್ತರಿಗೆ ಸಹಾಯಹಸ್ತ ನೀಡಬೇಕು’ ಎಂದು ಕೇಳಿಕೊಂಡರು.

ಹೋಷಿಯಾರ್‌ಪುರ ಹತ್ಯಾಕಾಂಡದ ನ್ಯಾಯ?

ಹೋಷಿಯಾರ್‌ಪುರದ ಹತ್ಯಾಕಾಂಡಕ್ಕೆ ಇಂದು ಮೂವತ್ತು ವರ್ಷಗಳು ತುಂಬುತ್ತವೆ. 1987ರಲ್ಲಿ ಉ.ಪ್ರ.ದ ಹೋಷಿಯಾರ್‌ಪುರ ಪಟ್ಟಣದಲ್ಲಿ 42 ಅಮಾಯಕ ಮುಸ್ಲಿಂ ತರುಣರನ್ನು ಪೊಲೀಸರು ಹತ್ಯೆ ಮಾಡುತ್ತಾರೆ. ಇದನ್ನು ನೆನಪಿಸಿಕೊಂಡ ಅಮೀರ್ ಖಾನ್, ‘‘ಎರಡು ಕೊಲೆ ಮತ್ತು ಬಾಂಬ್ ಸ್ಫೋಟದ ಆರೋಪದ ಮೇಲೆ ಬಂಧಿತನಾದ ನನ್ನ ಕೇಸನ್ನು ನ್ಯಾಯಾಧೀಶರು ತುಂಬಾ ಸೂಕ್ಷ್ಮವಾದದ್ದು ಎನ್ನುತ್ತಾರೆ. ಆದರೆ ಮೂವತ್ತು ವರ್ಷಗಳ ಹಿಂದೆ ಹೋಷಿಯಾಪುರದಲ್ಲಿ 42 ನಾಗರಿಕರನ್ನು (ನಾನು ಮುಸ್ಲಿಂ ಎಂದು ಕರೆಯಲಾರೆ) ಹತ್ಯೆ ಮಾಡಿದ ಆ ಕೇಸು ನ್ಯಾಯಾಲಯಕ್ಕೆ ಸೂಕ್ಷ್ಮವಾದದ್ದು ಎಂದೆನಿಸುವುದಿಲ್ಲ. ಏಕೆಂದರೆ ಅಲ್ಲಿ ಆರೋಪಿಗಳು ಪೊಲೀಸರು. ಅಲ್ಲಿ ಬೇಲ್ ದೊರಕುತ್ತದೆ. ನನಗೆ ದೊರಕುವುದಿಲ್ಲ. ಆದರೆ ನನ್ನದು ಮಾತ್ರ ಸೂಕ್ಷ್ಮತೆಯುಳ್ಳದ್ದು ಅನಿಸುತ್ತದೆ, ಯಾಕೆ? ನನ್ನ ಹೆಸರು ಅಮೀರ್ ಖಾನ್ ಆಗಿರುವುದಕ್ಕೇನಾ? ಅಲ್ಪಸಂಖ್ಯಾತ, ದಲಿತರು, ಅಸಹಾಯಕರಿಗೆ ಮಾತ್ರ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಇದು ಯಾವ ಬಗೆಯ ನ್ಯಾಯ’’ ಎಂದು ಪ್ರಶ್ನಿಸುತ್ತಾರೆ.

ಕಡೆಗೂ ಉಳಿದ ಪ್ರಶ್ನೆಗಳು 

ಈ ಮಾದರಿಯಲ್ಲಿ ನಿರಪರಾಧಿಗಳನ್ನು ಕಾನೂನು ಬಾಹಿರ ವಾಗಿ ಬಂಧಿಸಿ, ಅಪಹರಿಸಿ, ಚಿತ್ರಹಿಂಸೆ ನೀಡಿ, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಅವರ ಬದುಕನ್ನೇ ನಾಶಪಡಿಸುವ ಪೊಲೀಸರಿಗೆ ಅವರ ತಪ್ಪಿಗೆ, ಅಪರಾಧಕ್ಕೆ ಶಿಕ್ಷೆಯನ್ನು ನೀಡು ವಂತಹ ಇಚ್ಛಾಶಕ್ತಿ ನಮ್ಮ ಪ್ರಭುತ್ವ-ವ್ಯವಸ್ಥೆಗೆ ಯಾಕ್ಕಿಲ್ಲ?? ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾಕೆ ಸರಕಾರ ಹಿಂದೇಟು ಹಾಕುತ್ತದೆ? ಕಾನೂನುಬಾಹಿರವಾಗಿ ವರ್ತಿಸುವ, ನಾಗರಿಕ ಸಮಾಜದ ಘನತೆಯನ್ನು ಕುಗ್ಗಿಸುವ ಪೊಲೀಸರ ಈ ಕ್ರಮದ ವಿರುದ್ಧ ಯಾತಕ್ಕೆ ಜನಾಂದೋಲನ ರೂಪುಗೊಳ್ಳುತ್ತಿಲ್ಲ?? ಮುಖ್ಯ ವಾಗಿ ನ್ಯಾಯಾಂಗವು ಯಾತಕ್ಕೆ ಈ ವಿಷಯದಲ್ಲಿ ಉದಾಸೀನ ತೋರುತ್ತಿದೆ? ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಳಲೇಬೇಕಾದ ಪ್ರಶ್ನೆಗಳಿವು.

 14 ವರ್ಷಗಳ ನಂತರ 19 ಕೇಸುಗಳ ಪೈಕಿ 17 ಕೇಸುಗಳಲ್ಲಿ ಸೂಕ್ತ ಸಾಕ್ಷಾಧಾರಗಳಿಲ್ಲದೆ ನಿರಪರಾಧಿಯಾಗಿ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಬಂದ ಅಮೀರ್ ಖಾನ್‌ಗೆಎದುರಾದದ್ದು ಕಾಯಿಲೆಯಿಂದ, ಮಿದುಳು ರಕ್ತ ಸ್ರಾವದಿಂದ ನರಳುತ್ತಿದ್ದ ಆತನ ಪ್ರೀತಿಯ ಅಮ್ಮ. 6 ತಿಂಗಳ ನಂತರ ಆಕೆಯೂ ತೀರಿಕೊಂಡರು. ಆದರೆ 14 ವರ್ಷಗಳ ಕಾಲ ತನಗಾಗಿ ಕಾಯುತ್ತಿದ್ದ ಬಾಲ್ಯಕಾಲದ ಗೆಳತಿ ಅಲಿಯಾ ಆತನಲ್ಲಿ ಮತ್ತೊಮ್ಮೆ ಬದುಕುವ ಹುಮ್ಮಸ್ಸು, ಜೀವನಪ್ರೀತಿ ಮೂಡಿಸಿದಳು.

ಮತ್ತೆ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಕೊಂಡಿರುವ ವಾಹಿದ್ ಶೇಖ್...

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News