ಡಿಸಿ ಕಚೇರಿ ಮೇಲೆ ಕಲ್ಲು ತೂರಾಟ: ಲಘು ಲಾಠಿ ಪ್ರಹಾರ
ಬಾಗಲಕೋಟೆ, ಜು. 29: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕೆಂದು ಆಗ್ರಹಿಸಿ ರ‍್ಯಾಲಿ ಮೂಲಕ ಮನವಿ ಸಲ್ಲಿಸಲು ತೆರಳಿದ್ದ ವೇಳೆ ಕಚೇರಿಯಲ್ಲಿ ಜಿಲ್ಲಾಧಿಕಾರಿ ಇಲ್ಲದ್ದರಿಂದ ಪ್ರತಿಭಟನಾಕಾರರು ಡಿಸಿ ಕಚೇರಿಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ, ಕಚೇರಿ ನಾಮಫಲಕವನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಾಜಿ ಸಂಸದ ಎಚ್.ವಿಶ್ವನಾಥ್, ಧಾರವಾಡದ ರೇವಣ್ಣ ಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿ ನೇತೃತ್ವದಲ್ಲಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಕುರುಬರ ಸಂಘದ ಆಶ್ರಯದಲ್ಲಿ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಮನವಿ ಸಲ್ಲಿಸಲು ತೆರಳಿದ್ದ ವೇಳೆ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ್ ಇರಲಿಲ್ಲ. ಹೀಗಾಗಿ ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿಯ ಕಿಟಕಿ ಗಾಜುಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಅಲ್ಲದೆ, ಕಚೇರಿಯ ನಾಮಫಲಕ ಕಿತ್ತೆಸೆದು, ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಈ ಹಂತದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಇದೇ ಸಂದರ್ಭದಲ್ಲಿ ಅಲ್ಲೆ ಇದ್ದ ಮೇಜಿನ ಮೇಲೆರಿದ ಬಸವರಾಜ ದೇವರು ಸ್ವಾಮೀಜಿ, ಭಾಷಣ ಮಾಡಲು ಮುಂದಾದರು. ಇದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡು ಸ್ಥಳದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಯಿತು. ಈ ಹಂತದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಈ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲು, ಗೊಂದಲ ಹಿನ್ನೆಲೆಯಲ್ಲಿ ರೇವಣ್ಣ ಸಿದ್ದೇಶ್ವರ ಮಠದ ಶ್ರೀ ಬವಸರಾಜ ದೇವರು ಸ್ವಾಮೀಜಿ ಅಸ್ವಸ್ಥಕೊಂಡು ಸ್ಥಳದಲ್ಲೆ ಕುಸಿದು ಬಿದ್ದರು. ಕೂಡಲೇ ಭಕ್ತರು ಅವರನ್ನು ಹೊರಗೆ ಕರೆತಂದು ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಶ್ರೀಗಳ ಆರೋಗ್ಯ ಸುಸ್ಥಿತಿಯಲ್ಲಿದ್ದು, ನೂಕುನುಗ್ಗಲಿನ ಹಿನ್ನೆಲೆಯಲ್ಲಿ ಅವರಿಗೆ ಸಣ್ಣ-ಪುಟ್ಟ ಗಾಯಗಾಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.
ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುವ ಮಾಹಿತಿ ಇದ್ದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರಿಲ್ಲದ ಕಾರಣ ಉದ್ರಿಕ್ತರು ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ವಿನಾಕಾರಣ ಬಸವರಾಜ ದೇವರು ಶ್ರೀಗಳು ಹಾಗೂ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.