ರೈಲು ಪ್ರಯಾಣಕ್ಕಿನ್ನು ಬುತ್ತಿ ಕಟ್ಟಿಕೊಂಡು ಬನ್ನಿ..!

Update: 2017-07-30 04:15 GMT

ವಾರಾಣಾಸಿ, ಜು. 30: ರೈಲು ಪ್ರಯಾಣಿಕರು ಇನ್ನು ಮುಂದೆ ತಮ್ಮ ಪ್ರಯಾಣದ ಅವಧಿಗೆ ಬೇಕಾಗುವ ಊಟ- ತಿಂಡಿಯನ್ನು ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬರಬೇಕು. ರೈಲಿನಲ್ಲಿ ಪೂರೈಕೆ ಮಾಡುವ ಆಹಾರ ವಸ್ತುಗಳ ಬಗ್ಗೆ ದೂರುಗಳ ಸುರಿಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ.ಮಿತ್ತಲ್ ಈ ಸಲಹೆ ನೀಡಿದ್ದಾರೆ.

"ರೈಲಲ್ಲಿ ಸಿದ್ಧಪಡಿಸಿ ನೀಡುವ ಆಹಾರವನ್ನು ಅವಲಂಬಿಸದೆ ಮನೆಯಿಂದಲೇ ನಿಮ್ಮ ಊಟ- ತಿಂಡಿ ತನ್ನಿ" ಎಂದು ಪ್ರಯಾಣಿಕರಲ್ಲಿ ಅವರು ಮನವಿ ಮಾಡಿದ್ದಾರೆ.

ಪೂರ್ವ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳೆದ ಮಂಗಳವಾರ ವಿತರಿಸಲಾದ ಆಹಾರದಲ್ಲಿ ಹಲ್ಲಿ ಇದ್ದ ಬಗ್ಗೆ ಗಮನ ಸೆಳೆದಾಗ, ತಾಳ್ಮೆ ಕಳೆದುಕೊಂಡ ಮಿತ್ತಲ್ "ಮನೆ ಊಟದ ಗುಣಮಟ್ಟಕ್ಕೆ ಪರ್ಯಾಯ ಇಲ್ಲ" ಎಂದು ಸಿಡುಕಿದರು.

"ಆಹಾರದ ಗುಣಮಟ್ಟದ ಬಗ್ಗೆ ಗುತ್ತಿಗೆದಾರರು ರಾಜಿ ಮಾಡಿಕೊಳ್ಳುವುದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳ ಅರಿವು ನಮಗಿದೆ. ರೈಲುಗಳಲ್ಲಿ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಊಟ- ತಿಂಡಿ ವಿತರಿಸುವಲ್ಲಿ ರೈಲ್ವೆ ಇಲಾಖೆಯ ಮುಂದೆ ದೊಡ್ಡ ಸವಾಲಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ, ರೈಲ್ವೆ ಬೇಸ್ ಕಿಚನ್ ನಿರ್ಮಿಸುವತ್ತ ಗಮನ ಹರಿಸಿದೆ. ಒಂದು ವರ್ಷದೊಳಗೆ ಇದು ಕಾರ್ಯಾರಂಭ ಮಾಡಲಿದೆ. ಜತೆಗೆ ಇ-ಕೇಟರಿಂಗ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪ್ರಯಾಣಿಕರು ಇ-ಕೇಟರಿಂಗ್ ಪೋರ್ಟೆಲ್ ಮೂಲಕ ಆಹಾರ ಬುಕ್ಕಿಂಗ್ ಮಾಡುವಂತೆ ಉತ್ತೇಜಿಸಲಾಗುತ್ತದೆ ಎಂದು ವಿವರಿಸಿದರು.

ರೈಲುಗಳ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ, ಸರಕು ಸಾಗಾಣಿಕೆ ಕಾರಿಡಾರ್ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಂಡ ಬಳಿಕ ರೈಲುಗಳ ವಿಳಂಬದ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News