×
Ad

‘ರಾಜಧಾನಿಗೆ ಪ್ರತ್ಯೇಕ ಕಾಯ್ದೆ, ಆತಂಕ ಬೇಡ’

Update: 2017-07-31 19:27 IST

ಬೆಂಗಳೂರು, ಜು.31: ರಾಜ್ಯ ಸರಕಾರ ಜಾರಿಗೆ ಮುಂದಾಗಿರುವ ಏಕರೂಪ ಬೈಲಾ ಪದ್ಧತಿಯು ರಾಜಧಾನಿ ಬೆಂಗಳೂರಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ನಗರಕ್ಕೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಆತಂಕ ಬೇಡ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ಪ್ರಸಾದ್ ಹೇಳಿದ್ದಾರೆ.

ಸೋಮವಾರ ನಗರದ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಏಕರೂಪ ಕಟ್ಟಡ ಬೈಲಾ, ವಲಯ ನಿಯಂತ್ರಣಾಧಿಕಾರವನ್ನು ಜಾರಿಗೆ ತರುತ್ತಿದೆ. ಸಾಮಾನ್ಯ ಬೈಲಾ ಪದ್ಧತಿ ಜಾರಿಗೊಳಿಸುವ ನಿರ್ಧಾರವನ್ನು ಬಿಡಿಎಗೆ ವಹಿಸಲಾಗಿದೆ. ಆದರೆ, ಅದೇ ಅಂತಿಮವಲ್ಲ ಎಂದರು.

ಬೈಲಾ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆಯಲಾಗುವುದೆಂದ ಅವರು, ವಲಯ ನಿಯಂತ್ರಣಾಧಿಕಾರವನ್ನು ಸಹ ಚರ್ಚೆ ಮಾಡಿದ ನಂತರವೇ ಚಾಲನೆ ನೀಡಲಾಗುವುದು. ಅದೇ ರೀತಿ, ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ಬೈಲಾ ಪದ್ಧತಿ ಜಾರಿಗೊಳಿಸಲು ಸರಕಾರ ತೀರ್ಮಾನಿದೆ ಎಂದು ಮಂಜುನಾಥ್ ಪ್ರಸಾದ್ ನುಡಿದರು.

ಆದೇಶ-ಆಕ್ರೋಶ: ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸುವ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ವಲಯ ನಿಯಂತ್ರಣಾ ಕುರಿತ ಕರಡು ಅಧಿಸೂಚನೆ ಮತ್ತು ಮಾಸ್ಟರ್ ಪ್ಲಾನ್ ಆದೇಶಗಳ ಬಗ್ಗೆ ಪ್ರತಿ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಸಭೆಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಜೊತೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಕಿತ್ತುಕೊಳ್ಳಲು ಸರಕಾರ ಏಕಾಏಕಿ ಆದೇಶ ಹೊರಡಿಸಿರುವುದು ಕಾನೂನಿಗೆ ವಿರುದ್ಧವಾದುದು. ಈ ಕೂಡಲೇ ಈ ಆದೇಶಗಳನ್ನು ವಾಪಸ್ಸು ಪಡೆಯಬೇಕು. ಆದೇಶಗಳನ್ನು ತರುವ ಔಚಿತ್ಯವೇ ಇರಲಿಲ್ಲ ಎಂದರು.

ವಲಯ ನಿಯಂತ್ರಣಾ ಕುರಿತ ಆದೇಶಕ್ಕೆ ಈಗಾಗಲೇ 10 ಸಾವಿರ ಮಂದಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಸರಕಾರ ಪಾಲಿಕೆ ಸದಸ್ಯರು ಹಾಗೂ ನಾಗರಿಕರನ್ನು ಕತ್ತಲೆಯಲ್ಲಿಟ್ಟು ಈ ಆದೇಶಗಳನ್ನು ಜಾರಿ ಮಾಡಲು ಹೊರಟಿದೆ. ಪಾಲಿಕೆ ಸದಸ್ಯರಿಗೆ ಅಧಿಕಾರವೇ ಬೇಡ ಎನ್ನುವುದಾದರೆ, ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ ಎಂದು ಪದ್ಮನಾಭರೆಡ್ಡಿ ನುಡಿದರು.

ರಸ್ತೆ ಹಾಳು, ಕ್ರಮಕ್ಕೆ ಆಗ್ರಹ: ನಗರದ ದೇವರ ಜೀವನಹಳ್ಳಿ ವಾರ್ಡ್‌ನ ಮೋದಿ ಗಾರ್ಡನ್ ರಸ್ತೆಗೆ 1.5 ಕೋಟಿ ರೂ. ವೆಚ್ಚದಲ್ಲಿ ಹಾಕಲಾಗಿರುವ ಟಾರ್ ರಸ್ತೆಯನ್ನು ಹಾಳು ಮಾಡಿರುವ ಸೇನಾ ಇಲಾಖೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಸಂಪತ್ ರಾಜ್ ಪಾಲಿಕೆ ಸಭೆಯಲ್ಲಿಂದು ಒತ್ತಾಯಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನನ್ನ ವಿರುದ್ಧವೇ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ನಾನು ಹೆದರಲ್ಲ. ಜೈಲಿಗೆ ಹೋಗಲು ಸಿದ್ಧ. ಆದರೆ ರಸ್ತೆಯನ್ನು ಹಾಳು ಮಾಡಿರುವ ಸೇನಾ ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ಹೋರಾಟ ನಡೆಸಲು ಹಿರಿಯ ವಕೀಲ ಕಪಿಲ್ಸಿಬಾಲ್ ಅವರಂತಹ ವಕೀಲರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಆಡಳಿತ ಪಕ್ಷದ ನಾಯಕ ಮುಹಮ್ಮದ್ ರಿಝ್ವೆನ್ ನವಾಬ್, 1.5 ಕೋಟಿ ರೂ. ವೆಚ್ಚದ ರಸ್ತೆಯನ್ನು ಹಾಳು ಮಾಡಿರುವ ಸೇನಾ ಇಲಾಖೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಹಾಗೂ ಸಂಪತ್ ರಾಜ್ ಮತ್ತು ಅಲ್ಲಿನ ಕಲ್ಯಾಣಾಭಿವೃದ್ಧಿಯ ಪದಾಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಹೇಳಿದರು.

ಸೇನಾ ಇಲಾಖೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಸದಸ್ಯರ ಒತ್ತಾಯವನ್ನು ಒಪ್ಪದ ಮೇಯರ್ ಪದ್ಮಾವತಿ ಅವರು, ಸೇನೆಯ ವಿರುದ್ಧ ಪ್ರಕರಣ ದಾಖಲು ಮಾಡುವುದು ತಪ್ಪಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಆದರೆ, ಇದಕ್ಕೆ ಒಪ್ಪದ ಸಂಪತ್ ರಾಜ್ ಒಂದೂವರೆ ತಿಂಗಳ ಹಿಂದಷ್ಟೇ ರಸ್ತೆ ನಿರ್ಮಾಣವಾಗಿದೆ. ಪ್ರತಿಯೊಂದು ಹಂತದಲ್ಲೂ ಸೇನಾ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ, ವೈಟ್ ಟ್ಯಾಪಿಂಗ್ ಮಾಡುತ್ತೇವೆ ಎಂದು ಬ್ಲಾಕ್ ಟ್ಯಾಪಿಂಗ್ ಮಾಡಿದ್ದಾರೆ ಎಂದು ನೆಪವೊಡ್ಡಿ ರಸ್ತೆಯನ್ನು ಹಾಳು ಮಾಡಿದ್ದಾರೆ. ಅವರ ವಿರುದ್ಧ ಮೊಕದ್ದಮೆ ಹೂಡಲೇಬೇಕು ಎಂದು ಪಟ್ಟುಹಿಡಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಶಾಸಕ ಗೋಪಾಲಯ್ಯ, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಮತ್ತಿತರ ಸದಸ್ಯರು ಕಾನೂನು ಸಲಹೆ ಪಡೆಯುವುದು ಸೂಕ್ತವೆಂದು ವಿಷಯಕ್ಕೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News