×
Ad

ಏಕಸದಸ್ಯ ನ್ಯಾಯಪೀಠದ ಆದೇಶ ಎತ್ತಿ ಹಿಡಿದ ಹೈಕೋರ್ಟ್

Update: 2017-07-31 20:44 IST

ಬೆಂಗಳೂರು, ಜು.31: ಕನ್ನಡ ಚಲನಚಿತ್ರ ನಟ ಉಪೇಂದ್ರ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬ್ಯಾಲಾಳು ಗ್ರಾಮದಲ್ಲಿ ಖರೀದಿಸಿದ್ದ 17 ಎಕರೆ 10ಗುಂಟೆ ಜಮೀನು ಕಾನೂನು ಬದ್ಧವಾಗಿದೆ ಎಂದಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ನಟ ಉಪೇಂದ್ರ ಕೃಷಿ ಭೂಮಿ ಖರೀದಿ ಪ್ರಕರಣ ವಿವಾದ ಸಂಬಂಧ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿಯಿತು.

 ವಕೀಲರ ವಾದ ಪ್ರತಿವಾದ ಆಲಿಸಿದ ವಿಭಾಗೀಯ ನ್ಯಾಯಪೀಠವು ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ಭೂ ಕಂದಾಯ ಕಾಯ್ದೆಗೆ 2015ರಲ್ಲಿ ತರಲಾದ ತಿದ್ದುಪಡಿಯು ಪೂರ್ವಾನ್ವಯಕ್ಕೆ ಒಳಪಡುತ್ತದೆ. ಹೀಗಾಗಿ, ಉಪೇಂದ್ರ ಖರೀದಿಸಿರುವ ಕೃಷಿ ಜಮೀನು ಕಾನೂನು ಬಾಹಿರ ಅಲ್ಲ ಎನ್ನುವ ಆದೇಶವನ್ನು ಎತ್ತಿಹಿಡಿಯಿತು. ಪ್ರತಿವಾದಿಯ ಮನವಿ ಪುರಸ್ಕರಿಸಿ ಸರಕಾರದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣವೇನು: 2005ರಲ್ಲಿ ತಾವರೆಕರೆ ಹೋಬಳಿಯ ಸರ್ವೇ ನಂ.13/1 ಹಾಗೂ 14ರಲ್ಲಿ ನಟ ಉಪೇಂದ್ರ ಕೃಷಿ ಜುಮೀನು ಖರೀದಿಸಿದ್ದರು. ಆದರೆ, ಸ್ಥಳೀಯ ಸಹಾಯಕ ಆಯುಕ್ತರು, ಉಪೇಂದ್ರ ಅವರಿಗೆ ಕೃಷಿಯೇತರ ಮೂಲದ ಆದಾಯ ಮಿತಿ ವಾರ್ಷಿಕ 2 ಲಕ್ಷಕ್ಕಿಂತಲೂ ಹೆಚ್ಚಿಗೆ ಇರುವುದರಿಂದ ಈ ಖರೀದಿ ಕ್ರಮ ಕಾನೂನು ಬಾಹಿರ ಎಂದು ಸ್ಥಿರಾಸ್ತಿ ಮುಟ್ಟುಗೋಲಿಗೆ ಆದೇಶಿಸಿದ್ದರು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಉಪೇಂದ್ರ ಕರ್ನಾಟಕ ಭೂ ಕಂದಾಯ ಕಾಯ್ದೆಯ 79 ಎ ಮತ್ತು 79 ಬಿ ಅಸಾಂವಿಧಾನಿಕವಾಗಿದೆ ಎಂದು ಆಕ್ಷೇಪಿಸಿದ್ದರು. ಈ ಸಂಬಂಧ ಸರಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News