ಬೆಂ.ನಗರ ನೂತನ ಪೊಲೀಸ್ ಆಯುಕ್ತರಾಗಿ ಟಿ.ಸುನೀಲ್ ಕುಮಾರ್ ಪದಗ್ರಹಣ
ಬೆಂಗಳೂರು, ಜು.31: ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಟಿ.ಸುನೀಲ್ ಕುಮಾರ್ ಅಧಿಕಾರ ಸ್ವೀಕರಿಸಿದರು.
ಸೋಮವಾರ ರಾತ್ರಿ 8 ಗಂಟೆಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಗಮಿತ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಂದ ಟಿ.ಸುನೀಲ್‌ಕುಮಾರ್ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಎಲ್ಲ ಭಾಷಿಕರೂ ಒಂದೇ ಎಂಬ ಮನೋಭಾವ ಎಲ್ಲ ಪೊಲೀಸರಲ್ಲೂ ಇದೆ. ಅಲ್ಲದೆ, ಬೆಂಗಳೂರಿನಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಅನುಭವ ಇರುವ ಅಧಿಕಾರಿಗಳಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಮಾಡಲಾಗುವುದು ಎಂದ ಅವರು, ಚುನಾವಣೆ ವೇಳೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ನುಡಿದರು.
ಸಂಚಾರ ದಟ್ಟಣೆ ಸಮಸ್ಯೆಗೆ ಸಂಚಾರ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ಅದೇ ರೀತಿ, ಕೆಲವೊಂದು ಹೊಸ ಯೋಜನೆ, ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಟಿ.ಸುನೀಲ್‌ಕುಮಾರ್ ಹೇಳಿದರು.
ಟೀಂ ವರ್ಕ್‌ಗೆ ಒತ್ತು
‘ಪೊಲೀಸ್ ಇಲಾಖೆ ಇರುವುದು ಜನರಿಗಾಗಿ, ಪೊಲೀಸರು ಜನ ಸ್ನೇಹಿಯಾಗಬೇಕು. ಅಲ್ಲದೆ, ನನಗೆ ಟೀಂ ವರ್ಕ್‌ನಲ್ಲಿ ನಂಬಿಕೆಯಿದ್ದು, ಹೆಚ್ಚಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಒತ್ತು ನೀಡುತ್ತೇನೆ’
-ಟಿ.ಸುನೀಲ್‌ಕುಮಾರ್, ಬೆಂ.ನಗರ ಪೊಲೀಸ್ ಆಯುಕ್ತ
ತೃಪ್ತಿ ತಂದಿದೆ: ಪ್ರವೀಣ್ ಸೂದ್
ಬಹುಷಃ ಬೆಂಗಳೂರು ಆಯುಕ್ತರಾಗಿ ನಾನೆ ಕಡಿಮೆ ಅವಧಿ ಕಾರ್ಯ ನಿರ್ವಹಿಸಿದ್ದೇನೆ ಎನ್ನಿಸುತ್ತದೆ. ಆದರೆ, ಕಳೆದ ಏಳು ತಿಂಗಳ ಕಾಲ ಬೆಂಗಳೂರು ಪೊಲೀಸ್ ಆಯುಕ್ತನಾಗಿ ಕಾರ್ಯನಿರ್ವಹಿಸಿರುವುದು ತೃಪ್ತಿ ನೀಡಿದ್ದು, ಸರಕಾರ ಯಾವುದೇ ಜವಾಬ್ದಾರಿ ನೀಡಿದರೂ ಪ್ರಶ್ನಿಸದೇ ಕಾರ್ಯನಿರ್ವಹಿಸುತ್ತೇನೆ.
ಅಧಿಕಾರ ಸ್ವೀಕರಿಸಿದ ಬಳಿಕ, ಸಹಾಯವಾಣಿ 100 ರಂತಹ ಜನಪರ ಕೆಲಸಗಳನ್ನು ಮಾಡಿದ್ದು, ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿರುವ ಡಿಸಿಪಿಗಳು ತಮ್ಮ ವ್ಯಾಪ್ತಿಯಲ್ಲಿ ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಗಾಂಜಾ ಸಾಗಾಟದ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದೆ. ಕಳೆದ ಏಳು ತಿಂಗಳು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ.