×
Ad

ಸಿಎಂ ದುಬಾರಿ ವಾಚ್‌: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೊಸ ಆರೋಪ

Update: 2017-07-31 21:58 IST

ಬೆಂಗಳೂರು, ಜು. 31: ಉಡುಪಿಯ ಸರಕಾರಿ ಆಸ್ಪತ್ರೆ ಮೇಲ್ದರ್ಜೆ ಗುತ್ತಿಗೆ ಹಾಗೂ ಜೋಗಫಾಲ್ಸ್ ಅಭಿವೃದ್ಧಿಯ ಗುತ್ತಿಗೆ ನೀಡಿದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಉಡುಗೊರೆಯಾಗಿ ದುಬಾರಿ ಮೊತ್ತದ ವಾಚ್ ನೀಡಲಾಗಿದೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಇಂದಿಲ್ಲಿ ಆರೋಪಿಸಿದ್ದಾರೆ.

ಸೋಮವಾರ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ 70 ಲಕ್ಷ ರೂ.ಮೊತ್ತದ ವಾಚ್ ಉಡುಗೊರೆ ನೀಡಿದ ಡಾ. ಗಿರೀಶ್ ಚಂದ್ರ ವರ್ಮಾ ದುಬೈನಲ್ಲಿ ಎನ್‌ಎಂಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಅದೇ ಆಸ್ಪತ್ರೆಗೆ ಉಡುಪಿ ಸರಕಾರಿ ಆಸ್ಪತ್ರೆ ನಿರ್ವಹಣೆ ಗುತ್ತಿಗೆ ನೀಡಲಾಗಿದೆ ಎಂದು ದೂರಿದರು.

ದುಬಾರಿ ಮೊತ್ತದ ವಾಚ್ ಉಡುಗೊರೆಯ ಹಿಂದೆ ಭ್ರಷ್ಟಾಚಾರ ನಡೆದಿದ್ದು, ಈ ಸಂಬಂಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರಿಗೆ ಪತ್ರ ಬರೆಯುತ್ತೇನೆ ಎಂದು ಅನುಪಮಾ ಶೆಣೈ ತಿಳಿಸಿದರು.

ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದ(ಪಿಪಿಪಿ) ಈ ಯೋಜನೆಗಳಿಂದ ಸುಮಾರು 400 ಕೋಟಿ ರೂ.ಗಳಷ್ಟು ವಹಿವಾಟು ನಡೆದಿದೆ. ಹೀಗಾಗಿ ಡಾ.ಗಿರೀಶ್ ಚಂದ್ರ ವರ್ಮಾ ಅವರು ನೀಡಿರುವ ದುಬಾರಿ ಮೊತ್ತದ ಹೂಬ್ಲೇಟ್ ವಾಚ್ ಪ್ರಕರಣ ಭ್ರಷ್ಟಾಚಾರದ ವ್ಯಾಪ್ತಿಗೆ ಬರಲಿದೆ ಎಂದು ಅನುಪಮಾ ಶೆಣೈ ಹೇಳಿದರು.
ಭ್ರಷ್ಟಾಚಾರಕ್ಕೂ ಒಂದು ನಿಯಮವಿದ್ದು, ಅದರನ್ವಯ ಉಡುಗೊರೆ ಬಂದ ನಂತರ ಎರಡು ಯೋಜನೆಗಳ ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ ಎಂದ ಅವರು, ಈಗಾಗಲೇ ಸಿದ್ದರಾಮಯ್ಯ ದುಬಾರಿ ವಾಚನ್ನು ಸಂಪುಟ ಸಭಾ ಮಂದಿರದಲ್ಲಿ ಇರಿಸಿದ್ದಾರೆ. ಹೀಗಾಗಿ ಈ ಸಂಬಂಧ ಸ್ಪೀಕರ್ ಅವರೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

‘ಉಡುಪಿ ಸರಕಾರಿ ಆಸ್ಪತ್ರೆ ಮೇಲ್ದರ್ಜೆ ಗುತ್ತಿಗೆ ಮತ್ತು ಜೋಗಫಾಲ್ಸ್ ಅಭಿವೃದ್ದಿ ಗುತ್ತಿಗೆಯನ್ನು ‘ಪಾರದರ್ಶಕ ಕಾಯ್ದೆ’ ಅನ್ವಯ ನೀಡಿಲ್ಲ. ಹೀಗಾಗಿ ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಸಂಬಂಧ ಸ್ಪೀಕರ್ ಕೋಳಿವಾಡ್ ಅವರು ಎಫ್‌ಐಆರ್ ದಾಖಲಿಸಿ, ಕೂಡಲೇ ತನಿಖೆಗೆ ಆದೇಶಿಸಬೇಕು’
-ಅನುಪಮಾ ಶೆಣೈ, ಮಾಜಿ ಡಿವೈಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News