ಸೌದಿ: ವೇತನ ಸುರಕ್ಷಾ ಕಾನೂನಿನ 11ನೆ ಹಂತ ಇಂದು ಜಾರಿ

Update: 2017-08-01 10:52 GMT

ಜಿದ್ದ,ಆ.1: ಸೌದಿ ಕಾರ್ಮಿಕ ಸಚಿವಾಲಯದ ವೇತನ ಸುರಕ್ಷಾ ಕಾನೂನಿನ ಹನ್ನೊಂದನೆ ಹಂತ ಇಂದು ಜಾರಿಗೊಳ್ಳಲಿದೆ. 60ರಿಂದ 79ರಷ್ಟು ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗಲಿದೆ. ಆದ್ದರಿಂದ ಹೊಸದಾಗಿ ಐದು ಲಕ್ಷದಷ್ಟು ಕಾರ್ಮಿಕರಿಗೆ ಕಾನೂನಿನ ರಕ್ಷಣೆ ಸಿಗಲಿದೆ.

ಸುರಕ್ಷಿತವಾದ ಕೆಲಸದ ವಾತಾವರಣ ಸೃಷ್ಟಿಸುವುದು, ವೇತನಕ್ಕೆ ಸಂಬಂಧಿಸಿ ಕಾರ್ಮಿಕರುಮತ್ತು ಮಾಲಕರ ನಡುವಿನ ಸಮಸ್ಯೆಗಳನ್ನು ಇಲ್ಲದಾಗಿಸುವುದು ವೇತನ ಸುರಕ್ಷ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಕಾರ್ಮಿಕರಿಗೆ ವೇತನ ಸರಿಯಾದ ಸಮಯದಲ್ಲಿ ಲಭಿಸುತ್ತದೆಯೇ ಎನ್ನುವುದನ್ನು ಕೂಡಾ ದೃಢಪಡಿಸಲಾಗುತ್ತದೆ. ನಿಗದಿತ ಸಮಯದಲ್ಲಿ ವೇತನ ನೀಡದಿದ್ದರೆ ಮಾಲಕನಿಗೆ 3,000 ರಿಯಾಲ್‍ವರೆಗೂ ದಂಡ ವಿಧಿಸಲಾಗುವುದು. ಮೂರು ತಿಂಗಳಿಗಿಂತ ಹೆಚ್ಚು ಸಂಬಳವನ್ನು ತಡಮಾಡಿದರೆ ಸಂಸ್ಥೆಗೆ ಕಾರ್ಮಿಕ ಸಚಿವಾಲಯ ನೀಡುವ ಸೇವೆ ಸ್ಥಗಿತಗೊಳಿಸಲಾಗುವುದು. ಜೊತೆಗೆ ಕಾರ್ಮಿಕರಿಗೆ ಈಗಿನ ಕಂಪೆನಿಯ ಅನುಮತಿ ಇಲ್ಲದೆಯೇ ಪ್ರಾಯೋಜಕತ್ವ ಬದಲಾವಣೆಗೆ ಅವಕಾಶ ಲಭಿಸಲಿದೆ.

ಸಂಬಳ ಸಹಿತ ಸೌಲಭ್ಯಗಳನ್ನು ಬ್ಯಾಂಕ್ ಮೂಲಕ ವರ್ಗಾಯಿಸಬೇಕು. ಪ್ರತಿಯೊಂದೂ ಕೆಲಸದ ವೇತನವನ್ನು ನಿಗದಿಗೊಳಿಸಬೇಕು. ಸೇವೆ, ವೇತನದ ವಿವರಗಳನ್ನು ಕಾರ್ಮಿಕ ಸಚಿವಾಲಯಕ್ಕೆ ನೀಡಬೇಕು ಮುಂತಾದ ಕ್ರಮಗಳನ್ನು ವೇತನ ಸುರಕ್ಷಾ ಕಾನೂನಿನ ಭಾಗವಾಗಿ ಆಯಾ ಸಂಸ್ಥೆಗಳು ನಿರ್ವಹಿಸಬೇಕಾಗಿದೆ.

 ಕಾರ್ಮಿಕ ಸಚಿವಾಲಯದ ವೆಬ್‍ಸೈಟ್‍ನ ಡಾಟಬೇಸ್‍ನಲ್ಲಿ ಮಾಹಿತಿಗಳನ್ನು ಅಪ್‍ಡೇಟ್ ಮಾಡುತ್ತಿರಬೇಕು. ಈ ರೀತಿ ಕಾರ್ಮಿಕ ಸಚಿವಾಲಯಕ್ಕೆ ಸಂಸ್ಥೆ ತನ್ನ ಉದ್ಯೋಗಿಗೆ ವೇತನ ನೀಡುತ್ತದೆಯೇ ಎನ್ನುವುದನ್ನು ದೃಢಪಡಿಸಲಿದೆ. ಕೆಲಸದ ಸಮಸ್ಯೆಗಳನ್ನು ಕಡಿಮೆಗೊಳಿಸಲು, ದೂರುಗಳು ಇಲ್ಲದಾಗಿಸಲು ಒಂದು ಹಂತದವರೆಗೆ ಈ ಕಾನೂನು ಉಪಯುಕ್ತವಾಗಲಿದೆ. 7,021 ಸಂಸ್ಥೆಗಳಲ್ಲಿರುವ 4,81,097 ಕೆಲಸಗಾರರಿಗೆ ಹೊಸ ಕಾನೂನಿನ ರಕ್ಷಣೆ ದೊರಕಲಿದೆ. ಹತ್ತು ಘಟ್ಟಗಳಲ್ಲಿ ಈ ಹಿಂದೆ ಕಾನೂನಿನ ಮೂಲಕ 80-ಕ್ಕಿಂತ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳು ಕಾನೂನಿನ ವ್ಯಾಪ್ತಿಗೆ ಬಂದಿದ್ದವು. ಒಟ್ಟು ಹದಿನಾರು ಘಟ್ಟಗಳಲ್ಲಿ ಕಾರ್ಮಿಕಸಚಿವಾಲಯ ವೇತನ ಸುರಕ್ಷಾ ಕಾನೂನನ್ನು ಜಾರಿಗೊಳಿಸುತ್ತಿದೆ. ಹನ್ನೆರಡನೆ ಘಟ್ಟ ನವೆಂಬರ್ ಒಂದಕ್ಕೆ ಜಾರಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News