ನ್ಯೂಝಿಲೆಂಡ್ ಓಪನ್: ಪ್ರಣಯ್, ಕಶ್ಯಪ್‌ಗೆ ಜಯ
ಆಕ್ಲೆಂಡ್, ಆ.1: ಯುಎಸ್ ಓಪನ್ ಚಾಂಪಿಯನ್ ಎಚ್.ಎಸ್. ಪ್ರಣಯ್ ಮತ್ತು ಕಾಮನ್‌ವೆಲ್ತ್ ಚಾಂಪಿಯನ್ ಪಿ. ಕಶ್ಯಪ್ ಇಲ್ಲಿ ಮಂಗಳವಾರ ಆರಂಭಗೊಂಡ ನ್ಯೂಝಿಲೆಂಡ್ ಓಪನ್ ಗ್ರಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ.
ಇದೇ ವೇಳೆ ಭಾರತದ ಅಜಯ್ ಜಯರಾಮ್ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ನಾಲ್ಕನೆ ಶ್ರೇಯಾಂಕದ ಪ್ರಣಯ್ ಅವರು ಇಂಡೊನೇಷ್ಯಾದ ಶೇಸರ್ ಹಿರೆನ್ ರುಸ್ತಾವಿಟೊ ವಿರುದ್ಧ 21-14, 21-16 ಅಂತರದಲ್ಲಿ ಜಯ ಗಳಿಸಿ ಎರಡನೆ ಸುತ್ತು ಪ್ರವೇಶಿಸಿದರು. ಕಶ್ಯಪ್ ಅವರು ಇಂಡೊನೇಷ್ಯಾದ ಡಿಯಾನೈಸಿಯೆಸ್ ಹೆಯೊಮ್ ರಂಬಾಕಾ ವಿರುದ್ಧ 21-5, 21-10ನೇರ ಸೆಟ್‌ಗಳಿಂದ ಜಯ ಗಳಿಸಿದರು. ಎರಡನೆ ಸುತ್ತಿನಲ್ಲಿ ಪ್ರಣಯ್ ಅವರು ಇಂಡೊನೇಷ್ಯಾದ ಫರ್ಮಾನ್ ಅಬ್ದುಲ್ ಖೋಲಿಕ್‌ರನ್ನು ಎದುರಿಸಲಿದ್ದಾರೆ. ಕಶ್ಯಪ್‌ಗೆ ಸ್ಥಳೀಯ ಆಟಗಾರ ಆಸ್ಕರ್ ಗುವಾ ಸವಾಲು ಎದುರಾಗಿದೆ.
ಯುವ ಶಟ್ಲರ್‌ಗಳಾದ ಸಿರಿಲ್ ವರ್ಮಾ, ಪ್ರತ್ಯೂಲ್ ಜೋಶಿ, ಸೌರಭ್ ವರ್ಮಾ , ನೀರಜ್ ವಶಿಷ್ಠ ಮತ್ತು ಸಾಹಿಲ್ ಸಿಪಾನಿ ಶುಭಾರಂಭ ಮಾಡಿದ್ದಾರೆ.
7ನೆ ಶ್ರೇಯಾಂಕದ ಸೌರಭ್ ಅವರು ಆಸ್ಟ್ರೇಲಿಯದ ನಥಾನ್ ಟ್ಯಾಂಗ್ ವಿರುದ್ಧ 21-17, 21-15 ಅಂತರದಲ್ಲಿ ಜಯ ಸಾಧಿಸಿದರು. 16ನೆ ಶ್ರೇಯಾಂಕದ ಸಿರಿಲ್ ಅವರು ಇಂಡೊನೇಷ್ಯಾದ ರಿಯಾಂತೊ ಸಬ್ಗಜಾಗೆ 21-13, 21-12 ಸೆಟ್‌ಗಳಿಂದ ಸೋಲುಣಿಸಿದರು.
ಪ್ರತ್ಯೂಲ್ ಅವರು ಸ್ಥಳೀಯ ಆಟಗಾರ ಡೆಕ್ಸಾನ್ ವಾಂಗ್‌ರನ್ನು 21-10, 21-13 ಅಂತರದಲ್ಲಿ ಮಣಿಸಿದರು. ನೀರಜ್ ಅವರು ಇಂಡೋನೆಷ್ಯಾದ ಆ್ಯಂಡ್ರೋ ಯುನಾಂಟೊ ವಿರುದ್ಧ 21-8, 21-9 ಅಂತರದಲ್ಲಿ ಜಯ ಸಾಧಿಸಿದರು. ಸಾಹಿಲ್ ಅವರು ನ್ಯೂಝಿಲೆಂಡ್‌ನ ಜೊಶುವಾ ಫೆಂಗ್ ವಿರುದ್ಧ 21-10, 21-10 ಅಂತರದಲ್ಲಿ ಗೆಲುವು ದಾಖಲಿಸಿದರು. ಜಯರಾಮ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಚೈನಿಸ್ ತೈಪೆಯ ಚಿಯಾ ಹಂಗ್ ಲು ವಿರುದ್ಧ ಸಿಂಗಲ್ಸ್‌ನಲ್ಲಿ 19-21,13-21 ಅಂತರದಲ್ಲಿ ಸೋಲು ಅನುಭವಿಸಿ ಅಭಿಯಾನ ಕೊನೆಗೊಳಿಸಿದರು.
ಮುಂದಿನ ಪಂದ್ಯದಲ್ಲಿ ಪ್ರತ್ಯೂಲ್ ಅವರು ಚೈನೀಸ್ ತೈಪೆಯ ಝು ವೇಯ್ ವಾಂಗ್, ನೀರಜ್‌ಗೆ ಅಸ್ಟ್ರೇಲಿಯಾದ ಆ್ಯಂಟೊನಿ ಜೋ ಸವಾಲು ಎದುರಾಗಲಿದೆ. ಸೌರಭ್ ಅವರು ಇಂಡೋನೆಷ್ಯಾದ ಹೆನ್ರಿಕೋ ಖೋ ವಿಬೊವೊರನ್ನು, ಸಾಹಿಲ್ ಅವರು 11ನೆ ಶ್ರೇಯಾಂಕದ ಚೈನೀಸ್ ತೈಪೆಯ ಲಿನ್ ಯ್ಯೂ ಎಸ್ನಿನ್‌ರನ್ನು ಮತ್ತು ಸಿರಿಲ್ ಅವರು ಇಂಡೊನೇಷ್ಯಾದ ಸಪುತ್ರಾ ವಿಕ್ಕಿ ಅನ್ಗಾರನ್ನು ಎದುರಿಸಲಿದ್ದಾರೆ.
ಸಚಿನ್ ಅವರು ಮಲೇಷ್ಯಾದ ಗಿಯಾಪ್ ಚಿನ್ ಗೋಹ್ ವಿರುದ್ಧ 12-21, 8-21 ಅಂತರದಲ್ಲಿ ಸೋಲು ಅನುಭವಿಸಿದರು. ಹಾಂಕಾಂಗ್‌ನ ಲೀ ಚೆಕ್ ಯ್ಯೂ ವಿರುದ್ಧ ಸಿದ್ಧಾರ್ಥ ಠಾಕೂರ್ 21-23, 14-21 ಅಂತರದಲ್ಲಿ ಸೋಲು ಅನುಭವಿಸಿದರು. ಅರುಣ್ ಕುಮಾರ್ ಅವರು ಇಂಡೊನೇಷ್ಯಾದ ಸಪುತ್ರಾ ವಿಕ್ಕಿ ಅನ್ಗಾ ವಿರುದ್ಧ ಸೋಲು ಅನುಭವಿಸಿ ನಿರ್ಗಮಿಸಿದರು.
ಮಹಿಳೆಯರ ಸಿಂಗಲ್ಸ್‌ನ ಅರ್ಹತಾ ಸುತ್ತಿನಲ್ಲಿ ಸಂಯೋಗಿತ ಘೋರ್ಪಡೆ ನ್ಯೂಝಿಲೆಂಡ್‌ನ ಯಾಂಗಿಶಿ ವಿರುದ್ಧ ಕಠಿಣ ಹೋರಾಟ ನಡೆಸಿದರೂ 11-21, 24-22, 19-21 ಅಂತರದಲ್ಲಿ ಸೋಲುಂಡರು.