ಬೆಸ್ಕಾಂಗೆ ತಲಾ 15 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು, ಜು.2: ವ್ಯಕ್ತಿಯೊಬ್ಬರ ನಿವೇಶನಕ್ಕೆ ಸಂಬಂಧಿಸಿದ ಖಾತೆ ರದ್ದುಗೊಳಿಸಿದ್ದ ಬಿಬಿಎಂಪಿ ಎಆರ್‌ಓಗೆ ಹಾಗೂ ಆ ನಿವೇಶನದ ಕಟ್ಟಡಕ್ಕೆ ಒದಗಿಸಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಬೆಸ್ಕಾಂಗೆ ಹೈಕೋರ್ಟ್ ತಲಾ 15 ಸಾವಿರ ರೂ.ದಂಡ ವಿಧಿಸಿ, ಅರ್ಜಿ ವಿಲೇವಾರಿ ಮಾಡಿದೆ. ಈ ಸಂಬಂಧ ಪಿ.ಮಹೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ರುಬಿನ್ ಜಾಕಬ್ ಅವರು, ಅರ್ಜಿದಾರ ಮಹೇಶ್ ಅವರು ತಮ್ಮ ಮದುವೆ ಕಾರ್ಡ್‌ನ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಬಿಬಿಎಂಪಿ ಎಆರ್‌ಓ ಅವರು ಅತ್ತಿಗುಪ್ಪೆಯಲ್ಲಿರುವ ನಿವೇಶನದ ಖಾತಾವನ್ನು ರದ್ದುಗೊಳಿಸಿದ್ದಾರೆ. ಹಾಗೂ ಬೆಸ್ಕಾಂನವರೂ ನಿವೇಶನದ ಕಟ್ಟಡಕ್ಕೆ ಒದಗಿಸಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಪ್ರತಿವಾದಿಗಳ ಪರ ವಾದಿಸಿದ ವಕೀಲ ದೇವೇಂದ್ರಪ್ಪ ಅವರು, ನಿವೇಶನಕ್ಕೆ ಸಂಬಂಧಿಸಿದ ಖಾತೆ ರದ್ದುಗೊಳಿಸಿರುವುದನ್ನು ಈಗಾಗಲೇ ಬಿಬಿಎಂಪಿ ಎಆರ್‌ಓ ಅವರು ವಾಪಸ್ ಪಡೆದಿದ್ದಾರೆ. ಹಾಗೂ ಬೆಸ್ಕಾಂನವರೂ ಆ ಕಟ್ಟಡಕ್ಕೆ ಪುನಃ ವಿದ್ಯುತ್‌ನ್ನು ಕಲ್ಪಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಖಾತೆ ರದ್ದುಗೊಳಿಸಿದ್ದ ಬಿಬಿಎಂಪಿ ಎಆರ್‌ಓಗೆ ಹಾಗೂ ಆ ನಿವೇಶನದ ಕಟ್ಟಡಕ್ಕೆ ಒದಗಿಸಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಬೆಸ್ಕಾಂಗೆ ತಲಾ 15 ಸಾವಿರ ರೂ.ದಂಡ ವಿಧಿಸಿ, ಅರ್ಜಿ ವಿಲೇವಾರಿ ಮಾಡಿತು.