ಐಟಿ ದಾಳಿಗೆ ವಿರೋಧ: ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ
ಬೆಂಗಳೂರು, ಆ.2: ಕಾಂಗ್ರೆಸ್ ನಾಯಕರ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಆಡಳಿತರೂಢ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸ್ನೇಹಿತರು, ಸಂಬಂಧಿಕರ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಅಲ್ಲದೆ, ರಾಜ್ಯದಲ್ಲಿ ಪದೇ ಪದೇ ಕಾಂಗ್ರೆಸ್ ನಾಯಕರು, ಸಚಿವರ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆಯ ದಾಳಿಯ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳಬೇಕಿರುವ ಮುಂದಿನ ಹೋರಾಟದ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
ಆನಂತರ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸಂಪರ್ಕಿಸಿರುವ ವೇಣುಗೋಪಾಲ್, ರಾಜಕೀಯ ಉದ್ದೇಶದಿಂದ ನಡೆದಿರುವ ಈ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಖಂಡಿಸಿ, ಇತರೆ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆಯನ್ನು ರೂಪಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.