ಚಿತ್ರಾಗೆ ಕೇರಳ ಸರಕಾರದಿಂದ ಆರ್ಥಿಕ ನೆರವು

Update: 2017-08-02 18:37 GMT

ತಿರುವನಂತಪುರ, ಆ.2: ಭಾರತದ ಫುಟ್ಬಾಲ್ ಆಟಗಾರ ಸಿ.ಕೆ. ವಿನೀತ್‌ಗೆ ರಾಜ್ಯ ಸರಕಾರಿ ಹುದ್ದೆ ಹಾಗೂ ಅಥ್ಲೀಟ್ ಪಿ.ಯು. ಚಿತ್ರಾಗೆ ವಿದ್ಯಾರ್ಥಿವೇತನ ಹಾಗೂ ತರಬೇತಿ ಭತ್ತೆ ನೀಡಲು ಕೇರಳ ಸರಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಿ.ಕೆ. ವಿನೀತ್‌ರನ್ನು ಸಚಿವಾಲಯದ ಸಹಾಯಕನಾಗಿ ನೇಮಿಸಲು ಹಾಗೂ ಇತ್ತೀಚೆಗೆ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ 1,500 ಮೀ. ಓಟದಲ್ಲಿ ಚಿನ್ನದ ಪದಕ ವಿಜೇತೆ ಪಿ.ಯು.ಚಿತ್ರಾಗೆ ಪ್ರತಿ ತಿಂಗಳು 10,000 ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ.

 ವಿನೀತ್ ಈ ಹಿಂದೆ ಕ್ರೀಡಾ ಮೀಸಲಾತಿಯಡಿ ಕೇಂದ್ರ ಸರಕಾರದ ಅಕೌಂಟ್ ಜನರಲ್ ಕಚೇರಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಅನಿಯಮಿತ ಹಾಜರಾತಿಯಿಂದಾಗಿ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ತರಬೇತಿ ಹಾಗೂ ಪಂದ್ಯಗಳಿಂದಾಗಿ ವಿನೀತ್ ದೀರ್ಘ ರಜೆ ಪಡೆದಿದ್ದರು. ಅವರನ್ನು ಹುದ್ದೆಗೆ ಮರು ನೇಮಿಸಿಕೊಳ್ಳಬೇಕೆಂದು ಕೇರಳ ಸಿಎಂ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರು. ಆದರೆ, ಕೇಂದ್ರ ಕ್ರೀಡಾ ಸಚಿವಾಲಯ ಈ ಮನವಿಗೆ ಮನ್ನಣೆ ನೀಡಿಲ್ಲ ಎಂದು ತಿಳಿದುಬಂದಿದೆ.

ಲಂಡನ್‌ನಲ್ಲಿ ಈ ತಿಂಗಳು ಆರಂಭವಾಗಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ಚಿತ್ರಾರನ್ನು ಹೊರಗಿಡಲಾಗಿತ್ತು. ಚಿತ್ರಾ ದೇಶದ ಅಥ್ಲೆಟಿಕ್ ಸಂಸ್ಥೆಯ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದ ಚಿತ್ರಾ ಭಾರತದ ಅಥ್ಲೆಟಿಕ್ ಫೆಡರೇಶನ್ ನಿಗದಿಪಡಿಸಿದ ಸಮಯದಲ್ಲಿ ಗುರಿ ತಲುಪದ ಕಾರಣ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗಿಡಲಾಗಿತ್ತು. ಈ ವೇಳೆ ಕೇರಳದ ಸರಕಾರ ಚಿತ್ರಾರ ಬೆಂಬಲಕ್ಕೆ ನಿಂತಿತ್ತು.

ಬಡ ಕುಟುಂಬದಿಂದ ಬಂದಿರುವ ಚಿತ್ರಾ ಇತ್ತೀಚೆಗೆ ಶ್ರೇಷ್ಠ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಆರ್ಥಿಕ ನೆರವು ನೀಡಲು ವಿಜಯನ್ ಸರಕಾರ ನಿರ್ಧರಿಸಿದೆ.
ಚಿತ್ರಾಗೆ ವಿದ್ಯಾರ್ಥಿವೇತನ ಹಾಗೂ ತರಬೇತಿಗೆ ಬೇಕಾದ ನೆರವು ಕೇರಳ ಕ್ರೀಡಾ ಕೌನ್ಸಿಲ್‌ನ ಮೂಲಕ ದೊರೆಯಲಿದೆ. ತಜ್ಞ ಕೋಚಿಂಗ್ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ರಾಜ್ಯ ಸರಕಾರ ಈಗಾಗಲೇ ಭರವಸೆ ನೀಡಿದೆ.

ಪಾಲಕ್ಕಾಡ್‌ನ ಮುಂಡೂರ್‌ನ ಬಡ ಕುಟುಂಬಕ್ಕೆ ಸೇರಿದ ಚಿತ್ರಾ ಅವರಿಗೆ ವಿದ್ಯಾರ್ಥಿವೇತನದ ಜೊತೆಗೆ ತರಬೇತಿ ಹಾಗೂ ಊಟ-ತಿಂಡಿಗೆ ಪ್ರತಿದಿನ 500 ರೂ. ದಿನಭತ್ತೆ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News