ಕಾಶ್ಮೀರದಲ್ಲಿ ಗುಂಡಿನ ಚಕಮಕಿ ; ಇಬ್ಬರು ಯೋಧರು ಹುತಾತ್ಮ

Update: 2017-08-03 08:27 GMT

 ಶ್ರೀನಗರ, ಆ.3: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ  ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಸೇನೆಯ ಓರ್ವ ಸೇನಾಧಿಕಾರಿ  ಸೇರಿದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇನ್ನೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.

ಮೇಜರ್ ಕಮಲೇಶ್ ಪಾಂಡೆ ಮತ್ತು ಯೋಧ ತೆನ್ ಝಿನ್ ಹುತಾತ್ಮರಾಗಿದ್ದಾರೆ. ಕಪಿಲ್ ಸಿಂಗ್ ಗಂಭೀರ ಗಾಯಗೊಂಡು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಬುಧವಾರ ರಾತ್ರಿ ಸೇನೆ ಝಾಯ್ಪೊರಾದಲ್ಲಿ ಅಡಗಿಕೊಂಡಿರುವ ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾಗ, ಉಗ್ರರು ಯೋಧರ ಮೇಲೆ ದಾಳಿ ನಡೆಸಿದರು ಎನ್ನಲಾಗಿದೆ.  ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಯೋಧರು ಗಾಯಗೊಂಡರು ಎಂದು ತಿಳಿದು ಬಂದಿದೆ.

ಗಾಯಗೊಂಡ ಮೂವರು ಯೋಧರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೊರಾ ಪ್ರದೇಶದಲ್ಲಿ ಗುರುವಾರ ನಡೆದ ನಡೆದ ಇನ್ನೊಂದು ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿಯ  ಹಿನ್ನಲೆಯಲ್ಲಿ ಸೇನಾ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದರು.. ಉಗ್ರರ ದಾಳಿಗೆ ಸೇನಾ ಪಡೆ ದಿಟ್ಟ ಉತ್ತರ ನೀಡುವ ಮೂಲಕ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆಂದು   ಪೊಲೀಸರು ತಿಳಿಸಿದ್ದಾರೆ

ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರ ಮೇ1 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ  ಬ್ಯಾಂಕ್ ನ ಹಣ ಸಾಗಾಟದ ವಾಹನದ ಮೇಲೆ ನಡೆದಿದ್ದ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ದಾಳಿಯಲ್ಲಿ ಐವರು ಪೊಲೀಸ್ ಸಿಬ್ಬಂದಿಗಳು ಹಾಗೂ ಇಬ್ಬರು ಬ್ಯಾಂಕ್ ಸಿಬ್ಬಂದಿಗಳು ಮೃತಪಟ್ಟಿದ್ದರು ಎಂದು ತಿಳಿಸಿದ್ದಾರೆ. 

ಎನ್ ಕೌಂಟರ್ ನಡೆದ ಸ್ಥಳದಲ್ಲಿ ಉಗ್ರರು ಬಳಸಿದ್ದ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ಸೇನಾಪಡೆ ವಶಕ್ಕೆ ತೆಗೆದುಕೊಂಡಿದೆ ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News