ಬಿಎಸ್‌ವೈ ಮತ್ತವರ ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ಬೆಂಗಳೂರು, ಆ.3: ಸಿಎಂ ಆಗಿದ್ದ ವೇಳೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಗಳು ಅರುಣಾ ದೇವಿಗೆ ಕೆಎಚ್‌ಬಿಯಿಂದ ನಿವೇಶನ ಕೊಡಿಸಿದ, ಶಿವಮೊಗ್ಗದ ಹುಣಸೇ ಕಟ್ಟೆ ಬಳಿ ಅರಣ್ಯ ಜಮೀನು ಒತ್ತುವರಿ ಹಾಗೂ ಕೋಟೆಗಂಗೂರು ಅಕ್ರಮ ಡಿ-ನೋಟಿಫಿಕೇಷನ್ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಪ್ರಕರಣ ಸಂಬಂಧ ದಾಖಲಿಸಿದ್ದ ಖಾಸಗಿ ದೂರುಗಳನ್ನು ವಜಾಗೊಳಿಸಿದ್ದ ಶಿವಮೊಗ್ಗ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಪ್ರಶ್ನಿಸಿ ವಕೀಲ ಬಿ.ವಿನೋದ್ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ, ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಪುತ್ರಿಯರಾದ ಅರುಣಾದೇವಿ, ಉಮಾದೇವಿ, ಅಳಿಯ ಆರ್.ಎನ್.ಸೋಹನ್ ಕುಮಾರ್ ಹಾಗೂ ಇತರೆ 11 ಮಂದಿಗೆ ನೋಟಿಸ್ ಜಾರಿ ಮಾಡಿತು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಗಳು ಅರುಣಾ ದೇವಿಗೆ ಕೆಎಚ್‌ಬಿಯಿಂದ ನಿವೇಶನ ಕೊಡಿಸಿದ್ದಾರೆ. ಹಾಗೆಯೇ, ಶಿವಮೊಗ್ಗದ ಹುಣಸೇಕಟ್ಟೆ ಬಳಿ ಸುಮಾರು 63 ಎಕರೆ ಅರಣ್ಯ ಜಮೀನು ಒತ್ತುವರಿ ಮತ್ತು ಕೋಟೆಗಂಗೂರು ಅಕ್ರಮವಾಗಿ ಜಮೀನು ಡಿ-ನೋಟಿಫಿಕೇಷನ್ ಮಾಡಿ, ಬಳಿಕ ಆ ಜಮೀನನ್ನು ತಮ್ಮ ಪುತ್ರರ ಹಾಗೂ ಅಳಿಯನ ಒಡೆತನದ ರಿಯಲ್ ಎಸ್ಟೇಟ್ ಕಂಪೆನಿಗೆ ವರ್ಗಾಯಿಸಿದ್ದಾರೆ. ಆ ಮೂಲಕ ಸರಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಹಣ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬಿ.ವಿನೋದ್ ಶಿವಮೊಗ್ಗದ ಲೋಕಾಯುಕ್ತ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.
ಈ ದೂರುಗಳನ್ನು ಲೋಕಾಯುಕ್ತ ನ್ಯಾಯಾಲಯ ವಜಾಗೊಳಿಸಿದ್ದರಿಂದ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ.