ಆಟದ ಮೈದಾನಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸದಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಆ.3: ನಗರದಲ್ಲಿ ಉದ್ಯಾನವನ, ಆಟದ ಮೈದಾನ ಹಾಗೂ ರಾಜಕಾಲುವೆಗಳ ಮೇಲೆ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸದಂತೆ ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಉದ್ಯಾನವನ, ಆಟದ ಮೈದಾನಗಳಲ್ಲಿ ನಿಯಮ ಕಟರತ್ನಯ್ಯ ಎಂಬುವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯ ಸರಕಾರ ಇಂದಿರಾ ಕ್ಯಾಟೀನ್‌ಗಳನ್ನು ಉದ್ಯಾನ, ಆಟದ ಮೈದಾನ ಹಾಗೂ ಖಾಲಿ ಜಾಗಗಳಲ್ಲಿ ನಿರ್ಮಿಸಲು ಹೊರಟಿದೆ. ಆದರೆ, ಕರ್ನಾಟಕ ಉದ್ಯಾನಗಳು, ಆಟದ ಮೈದಾನಗಳು ಮತ್ತು ಖಾಲಿ ಜಾಗಗಳು(ಸಂರಕ್ಷಣೆ ಮತ್ತು ನಿಯಂತ್ರಣ) ಅಧಿನಿಯಮ-1985ರ ಸೆಕ್ಷನ್ 5ರ ಅಡಿಯಲ್ಲಿ ಗುರುತಿಸಲಾಗಿರುವ ಯಾವುದೇ ಉದ್ಯಾನವನ, ಆಟದ ಮೈದಾನ, ಖಾಲಿ ಜಾಗಗಳನ್ನು ಇತರ ಉದ್ದೇಶಗಳಿಗಾಗಿ ಬಳಸಲು ಅವಕಾಶವಿಲ್ಲ. ಹೀಗಾಗಿ, ತಕ್ಷಣ ಕ್ಯಾಂಟೀನ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ನ್ಯಾಯಪೀಠಕ್ಕೆ ವಿವರಿಸಿದರು.
ಸರಕಾರದ ಪರ ವಾದಿಸಿದ ಎ.ಎಸ್.ಪೊನ್ನಣ್ಣ ಅವರು, ಗುರುತಿಸಲ್ಪಟ್ಟ ಉದ್ಯಾನ ಹಾಗೂ ಆಟದ ಮೈದಾನಗಳಲ್ಲಿ ಕ್ಯಾಂಟೀನ್‌ಗಳನ್ನು ನಿರ್ಮಾಣ ಮಾಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಆದರೆ ಖಾಲಿ ಜಾಗಗಳನ್ನು ಗುರುತಿಸುವಾಗಲೇ ಅದನ್ನು ಸಾರ್ವಜನಿಕ ಉದ್ದೇಶಕ್ಕೆಂದೇ ಮೀಸಲಿರಿಸಲಾಗಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ಸಾರ್ವಜನಿಕರ ಲಾಭಕ್ಕಾಗಿಯೇ ನಿರ್ಮಿಸುತ್ತಿರುವುದರಿಂದ ಅದಕ್ಕಾಗಿ ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ನಗರದಲ್ಲಿ ಗುರುತಿಸಲಾಗಿರುವ ಉದ್ಯಾನವನ, ಆಟದ ಮೈದಾನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಬಾರದು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.