×
Ad

ದಾಖಲೆ ಪತ್ರಗಳಷ್ಟೇ ಆದಾಯ ತೆರಿಗೆ ಇಲಾಖೆ ವಶಕ್ಕೆ

Update: 2017-08-03 21:37 IST

ಬೆಂಗಳೂರು, ಆ. 3: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಒಡೆತನದ ಶಿಕ್ಷಣ ಸಂಸ್ಥೆ, ಪಾಲುದಾರಿಕೆಯ ಸಂಸ್ಥೆಗಳು, ಅವರ ಆಪ್ತರ ನಿವಾಸ ಹಾಗೂ ಕಚೇರಿಯ ಮೇಲೆ ಎರಡನೆ ದಿನವೂ ಪರಿಶೀಲನೆ ಮುಂದುವರಿಸಿದ್ದು, ಅವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಮಧ್ಯೆ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಶಿಷ್ಟಾಚಾರ ಉಲ್ಲಂಘಿಸಿ, ಇಂಧನ ಸಚಿವ ಶಿವಕುಮಾರ್, ಸಂಸದ ಸುರೇಶ್ ಹಾಗೂ ಮೇಲ್ಮನೆ ಸದಸ್ಯ ರವಿ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಗುಜರಾತ್ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ದ್ವೇಷದಿಂದ ಐಟಿಯನ್ನು ಬಳಸಿಕೊಂಡು ಶಿವಕುಮಾರ್ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯ ನಿವಾಸ ಮತ್ತು ಶಿವಕುಮಾರ್ ಆಪ್ತ ಆಂಜನೇಯ ನಿವಾಸದ ಮೇಲೆ ದಾಳಿ ನಡೆಸಿದ್ದು, ನಗದು ಮತ್ತು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಆದರೆ, ಇಲ್ಲಿನ ಸದಾಶಿವನಗರದಲ್ಲಿನ ಶಿವಕುಮಾರ್ ಅವರ ನಿವಾಸದಿಂದ ಕೆಲ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಯಾವುದೇ ರೀತಿಯ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿಲ್ಲ ಎಂದು ಐಟಿ ಮೂಲಗಳು ಖಚಿತಪಡಿಸಿವೆ.

ಕನಕಪುರ, ಮೈಸೂರಿನಲ್ಲಿರುವ ಮಾವನ ಮನೆ, ಅವರ ಸಹೋದರ ಡಿ.ಕೆ.ಸುರೇಶ್, ಅವರ ಜ್ಯೋತಿಷಿ ದ್ವಾರಕನಾಥ್ ಸೇರಿದಂತೆ ಸಚಿವರ ಆಪ್ತರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ಕಾರ್ಯ ಕೈಗೊಂಡಿದ್ದು, ಗುರುವಾರ ರಾತ್ರಿಯೂ ಪರಿಶೀಲನೆ ಕಾರ್ಯ ಮುಂದುವರಿಯುವ ಸಾಧ್ಯತೆಗಳಿವೆ.

ಗಾಳಿ ಸುದ್ದಿ: ಶಿವಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಶಕ್ತಿ ಕೇಂದ್ರ ವಿಧಾನಸೌಧ ಸೇರಿದಂತೆ ರಾಜ್ಯಾದ್ಯಂತ ಎಲ್ಲರ ಬಾಯಲ್ಲೂ ಅದೇ ಸುದ್ದಿ. ‘ಅಷ್ಟು ದುಡ್ಡು ಸಿಕ್ತು.. ಇಷ್ಟು ಬಂಗಾರ ಸಿಕ್ತು.. ಐಟಿಯವರು ಯಾರನ್ನೂ ಬಿಡುವುದಿಲ್ಲ’ ಎಂಬ ಗಾಳಿ ಸುದ್ದಿ ಎಲ್ಲೆಡೆ ಕೇಳಿಬಂತು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್ ಅವರ ನಿವಾಸಗಳು, ಕಚೇರಿಗಳು, ಒಡೆತನ-ಪಾಲುದಾರಿಕೆ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಮಧ್ಯೆ ದೊಡ್ಡ ಮೊತ್ತದ ವ್ಯವಹಾರದಲ್ಲಿ ಸಚಿವ ಶಿವಕುಮಾರ್ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

ನಿನ್ನೆ ಬೆಳಗ್ಗೆಯಿಂದ 60ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಎರಡು ನೂರಕ್ಕೂ ಅಧಿಕ ಮಂದಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ. ಅತ್ತ ರಾಮನಗರದ ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಯೋಗಕ್ಷೇಮ ವಿಚಾರಿಸಿದರು.

ದಾಳಿಯ ಸಂದರ್ಭದಲ್ಲಿ ಎಷ್ಟು ಮೊತ್ತದ ನಗದು, ಆಭರಣ ಪತ್ತೆಯಾಗಿದೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಆದರೆ, ಶಿವಕುಮಾರ್ ಅವರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ದಾಖಲೆ ಪತ್ರಗಳು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News