ಕರೀಂಲಾಲ ತೆಲಗಿ ಪ್ರಕರಣ: ಇಬ್ಬರು ಜೈಲು ಅಧಿಕಾರಿಗಳಿಗೆ ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್
ಬೆಂಗಳೂರು, ಆ.3: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಅಬ್ದುಲ್ ಕರೀಂ ತೆಲಗಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಒದಗಿಸಿದ ಆರೋಪದಲ್ಲಿ ಮೈಸೂರಿನ ಜೈಲು ಸೂಪರಿಂಟೆಂಡೆಂಟ್ ಪಿ.ಎನ್.ಜಯಸಿಂಹ ಹಾಗೂ ಪರಪ್ಪನ ಅಗ್ರಹಾರ ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್ ಆಗಿದ್ದ ಜೈಲು ಅಧಿಕಾರಿ ನಂಜಪ್ಪ ಅವರಿಗೆ ಹೈಕೋರ್ಟ್ ತಲಾ ಐದು ವರ್ಷ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂ.ದಂಡ ವಿಧಿಸಿದೆ.
ಈ ಕುರಿತಂತೆ ಸಿಬಿಐ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಆರೋಪಿಗಳಾದ ಪಿ.ಎನ್.ಜಯಸಿಂಹ ಹಾಗೂ ನಂಜಪ್ಪ ಅವರು ಈಗಾಗಲೇ 3 ವರ್ಷ 10 ತಿಂಗಳು ಕಾರಾಗೃಹ ವಾಸವನ್ನು ಅನುಭವಿಸಿದ್ದಾರೆ. ಹೀಗಾಗಿ, ಉಳಿದ 14 ತಿಂಗಳುಗಳ ಕಾಲ ಕಾರಾಗೃಹ ವಾಸವನ್ನು ಅನುಭವಿಸಲು ಹೈಕೋರ್ಟ್ ಆದೇಶಿಸಿದೆ.
166 ಕೋಟಿ ಹಗರಣ: 166 ಕೋಟಿ ರೂ.ಮೊತ್ತದ ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ 2001-2002ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಿಚಾರಣಾಧೀನ ಕೈದಿಯಾಗಿದ್ದ ತೆಲಗಿಗೆ ಇಬ್ಬರು ಜೈಲು ಅಧಿಕಾರಿಗಳು ಆದೇಶ ಇಲ್ಲದಿದ್ದರೂ ಸೌಲಭ್ಯ ಒದಗಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಅಧಿಕಾರಿಗಳನ್ನು ವಿಶೇಷ ನ್ಯಾಯಾಲಯ ನಿರ್ದೋಷಿಗಳು ಎಂದು ಬಿಡುಗಡೆ ಮಾಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು.
ತೆಲಗಿಗೆ 'ಎ' ದರ್ಜೆ ಸೌಲಭ್ಯ: ತೆಲಗಿ ಸಿ ದರ್ಜೆಯ ಕೈದಿಯಾಗಿದ್ದ. ಆದರೆ, ಆತನಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎ ದರ್ಜೆಯ ಸೌಲಭ್ಯ ಒದಗಿಸಲಾಗಿತ್ತು. ಇದಕ್ಕೆ ಜೈಲು ಅಧಿಕಾರಿಗಳಾದ ಜಯಸಿಂಹ ಮತ್ತು ನಂಜಪ್ಪ ಅವಕಾಶ ಮಾಡಿಕೊಟ್ಟಿದ್ದರು. ಆತನಿಗೆ ಪ್ರತ್ಯೇಕ ಕೋಣೆಗೆ ಮರದ ಬಾಗಿಲು ಇರಿಸಲಾಗಿತ್ತು. ಕಿಟಕಿಗಳಿಗೆ ಪರದೆಗಳಿದ್ದವು. ಪ್ರತ್ಯೇಕ ಟಿವಿ, ವಿಸಿಡಿ, ಮೊಬೈಲ್‌ಫೋನ್, ಆತ ಬಯಸಿದ ಊಟ, ತಿಂಡಿ ನೀಡಲು ಅವಕಾಶ ಕಲ್ಪಿಸಲಾಗಿತ್ತು ಎಂದು ಸಿಬಿಐ ಮೇಲ್ಮನವಿಯಲ್ಲಿ ವಿವರಿಸಿತ್ತು.
ತಿಂಗಳಿಂದ ವಿಚಾರಣೆ: ತೆಲಗಿ ವಿರುದ್ಧ ಹೈಕೋರ್ಟ್‌ನಲ್ಲಿ ಸದ್ಯ 34 ಕ್ರಿಮಿನಲ್ ಮೇಲ್ಮನವಿ ಸಲ್ಲಿಕೆಯಾಗಿವೆ. ಪ್ರತಿದಿನವೂ ನಡೆಯುತ್ತಿರುವ ಈ ಮೇಲ್ಮನವಿಗಳ ವಿಚಾರಣೆಗೆ ಗುರುವಾರಕ್ಕೆ ಒಂದು ತಿಂಗಳಾಯಿತು. ಇನ್ನೂ ಏಳು ಪ್ರಕರಣ ವಿಚಾರಣೆಗೆ ಬಾಕಿ ಇವೆ.