ಇಲ್ಲಿಯ ಸ್ಮಶಾನದಲ್ಲಿ ಚಿತೆಯ ಎದುರು ಲೈಂಗಿಕ ಕಾರ್ಯಕರ್ತೆಯರು ಕುಣಿಯುತ್ತಾರೆ!

Update: 2017-08-04 10:37 GMT

ಭಾರತವು ಸಂಪ್ರದಾಯಗಳ ಅಗಾಧ ವೈವಿಧ್ಯಗಳನ್ನು ಒಳಗೊಂಡಿರುವ ಸಂಸ್ಕೃತಿ ಸಮೃದ್ಧ ದೇಶವಾಗಿದೆ. ನಾವು ಈ ದೇಶದಲ್ಲಿಯೇ ವಾಸವಾಗಿದ್ದೇವಾದರೂ ಹೆಚ್ಚಿನ ಸಂಪ್ರದಾಯಗಳ ಕುರಿತು ನಮಗೇ ತಿಳಿದಿಲ್ಲ.

ಚಿತಾಗಾರದಲ್ಲಿ/ಸ್ಮಶಾನ ಭೂಮಿಗಳಲ್ಲಿ ಮೃತರ ಸುತ್ತ ಲೈಂಗಿಕ ಕಾರ್ಯಕರ್ತೆಯರು ಕುಣಿಯುವ ವಿಲಕ್ಷಣ ಸಂಪ್ರದಾಯವೊಂದರ ವಿವರಗಳಿಲ್ಲಿವೆ.

ಉರಿಯುತ್ತಿರುವ ಚಿತೆಯ ಸುತ್ತ ಲೈಂಗಿಕ ಕಾರ್ಯಕರ್ತೆಯರು ಕುಣಿಯುವ ಈ ವಿಲಕ್ಷಣ ಸಂಪ್ರದಾಯವು ಹಲವರಿಗೆ ಒಂದು ಅಪರಾಧದಂತೆ ಕಂಡುಬರಬಹುದು. ಆದರೆ ಈ ಸಂಪ್ರದಾಯ ಯಾವ ಕಾರಣದಿಂದ ಆರಂಭಗೊಂಡಿತ್ತು ಎನ್ನುವುದನ್ನು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಲೈಂಗಿಕ ಕಾರ್ಯಕರ್ತೆಯರ ಕುಣಿತದ ಸಂಪ್ರದಾಯವು ಸುಮಾರು 450 ವರ್ಷಗಳ ಹಿಂದೆ ರಾಜಾ ಮಾಂಜಸಿಂಗ್‌ನ ಕಾಲದಲ್ಲಿ ಆರಂಭವಾಗಿತ್ತು. ಕೆಲಕಾಲದ ಬಳಿಕ ನಿಂತುಹೋಗಿದ್ದ ಸಂಪ್ರದಾಯಕ್ಕೆ ಮರುಜೀವ ನೀಡುವಂತೆ ಸ್ಮಶಾನದ ಅಧಿದೇವತೆಯಾಗಿರುವ ‘ಬಾಬಾ ಸ್ಮಶಾನನಾಥ್’ ಆದೇಶಿಸಿದ್ದರೆನ್ನಲಾಗಿದೆ. ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಈ ಸಂಪ್ರದಾಯವನ್ನು ಆಚರಿಸಲಾಗುತ್ತದೆ.

ಶಿವದಾಸಪುರ, ಮಂದೌಧ್, ಚುನರ್ ಮತ್ತು ದಾಲ್‌ಮಂಡಿಯಂತಹ ವಾರಣಾಸಿಯ ವಿವಿಧ ಕೆಂಪುದೀಪ ಪ್ರದೇಶಗಳಿಂದ ಲೈಂಗಿಕ ಕಾರ್ಯಕರ್ತೆಯರು ಇಲ್ಲಿಗೆ ಆಗಮಿಸಿ ಮುಂದಿನ ಜನ್ಮದಲ್ಲಿ ಉತ್ತಮ ಬದುಕಿಗಾಗಿ ಪ್ರಾರ್ಥಿಸುತ್ತಾರೆ. ಇದೇ ಕಾರಣದಿಂದ ‘ಸ್ಮಶಾನೇಶ್ವರ ಮಹಾದೇವನ ಶೃಂಗಾರ ’ ಹೆಸರಿನ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಈ ಕಾರ್ಯಕ್ರಮ ನಡೆಯುವ ಸ್ಥಳವನ್ನು ‘ಮಹಾಸ್ಮಶಾನ ’ಎಂದು ಕರೆಯಲಾಗುತ್ತದೆ. ಇಲ್ಲಿ ಚಿತಾಗ್ನಿ ಎಂದೂ ಆರುವುದಿಲ್ಲ ಎಂಬ ಜನಪ್ರಿಯ ನಂಬಿಕೆಯು ಈ ಸ್ಮಶಾನವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದೆ. ನಸುಕಿನ ವೇಳೆಯಲ್ಲಿ ನಡೆಯುವ ಲೈಂಗಿಕ ಕಾರ್ಯಕರ್ತೆಯರ ಕುಣಿತವನ್ನು ನೋಡಲು ಜನರು ಇಲ್ಲಿಗೆ ಮುಗಿಬೀಳುತ್ತಾರೆ.

 ಸ್ಮಶಾನದ ಅಧಿದೇವತೆಗೆ ಮಾಂಸ, ಭಾಂಗ್, ಗಾಂಜಾ, ಹಣ ಇತ್ಯಾದಿಗಳೊಂದಿಗೆ ಮದ್ಯದ ಬಾಟಲಿಗಳನ್ನೂ ಅರ್ಪಿಸಲಾಗುತ್ತದೆ.

ತಮ್ಮ ಮುಂದಿನ ಜನ್ಮದಲ್ಲಿ ಉತ್ತಮ ಬದುಕಿಗಾಗಿ ಬಾಬಾನ ಆಶೀರ್ವಾದಗಳನ್ನು ಪಡೆಯಲು ಇಲ್ಲಿಗೆ ಬರುತ್ತಿದ್ದೇವೆ ಎಂದು ಲೈಂಗಿಕ ಕಾರ್ಯಕರ್ತೆಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News