ನಿಮಿಷಗಳಲ್ಲಿ ವಿಮಾನ ನಿಲ್ದಾಣ ಸೇರಲು ‘ಹೆಲಿಟ್ಯಾಕ್ಸಿ’
ಬೆಂಗಳೂರು, ಆ.4: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರದಟ್ಟಣೆ ಸಮಸ್ಯೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ನಗರದಲ್ಲಿರುವ ಟೂರಿಸ್ಟ್ ಟ್ಯಾಕ್ಸಿ, ಆ್ಯಪ್ ಆಧಾರಿತ ಟ್ಯಾಕ್ಸಿಗಳಂತೆಯೇ ಇನ್ಮುಂದೆ ‘ಹೆಲಿಟ್ಯಾಕ್ಸಿ’(ಹೆಲಿಕಾಪ್ಟರ್ ಟ್ಯಾಕ್ಸಿ)ಗಳು ಹಾರಾಟ ನಡೆಸಲಿವೆ. ಆ ಮೂಲಕ ಯಾವುದೇ ಸಂಚಾರದಟ್ಟಣೆ ಕಿರಿಕಿರಿ ಇಲ್ಲದೆ, ಹಾರಿಕೊಂಡೇ ನಿಮಿಷಗಳಲ್ಲಿ ವಿಮಾನ ನಿಲ್ದಾಣಕ್ಕೆ ಸೇರಬಹುದಾಗಿದೆ..!
ಈ ಬಗ್ಗೆ ಶುಕ್ರವಾರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಬಿಐಎಎಲ್)ವು ಥುಂಬಿ ಏವಿಯೇಷನ್ ಪ್ರೈ.ಲಿ., ಸಹಯೋಗದಲ್ಲಿ ‘ಹೆಲಿಟ್ಯಾಕ್ಸಿ’ ಪ್ರಯೋಗಕ್ಕೆ ಮುಂದಾಗಿದೆ ಎಂದು ಮಾಹಿತಿ ನೀಡಿದರು.
ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ‘ಹೆಲಿಟ್ಯಾಕ್ಸಿ’ ಸೇವೆಯನ್ನು ಬೆಂಗಳೂರಿನಲ್ಲಿ ಪರಿಚಯಿಸಲಾಗುತ್ತಿದೆ. ಹೊರರಾಜ್ಯ ಮತ್ತು ವಿದೇಶಗಳಿಂದ ವಿಮಾನದಲ್ಲಿ ನಿತ್ಯ ಅರವತ್ತು ಸಾವಿರಕ್ಕೂ ಹೆಚ್ಚು ಜನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಹೋಗುತ್ತಾರೆೆ. ಅವರೆಲ್ಲಾ ನಗರದ ವಿವಿಧ ಪ್ರದೇಶಗಳಿಗೆ ತೆರಳಲು ಸುಮಾರು ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಳೆಯುತ್ತಾರೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ನಲ್ಲೇ ಈ ವಿಮಾನ ಪ್ರಯಾಣಿಕರನ್ನು ನಗರದ ವಿವಿಧ ಪ್ರದೇಶಗಳಿಗೆ ತಲುಪಿಸಲಾಗುವುದೆಂದು ಹೇಳಿದರು.
ಪ್ರಾಯೋಗಿಕವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ ನಡುವೆ ಈ ಹೆಲಿಟ್ಯಾಕ್ಸಿ ಸೇವೆ ಆರಂಭಗೊಳ್ಳಲಿದೆ. ಈ ಸಂಬಂಧ ಈಗಾಗಲೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಲಿಕಾಪ್ಟರ್ ನಿಲ್ದಾಣ(ಏರ್‌ಪೊರ್ಟ್ ಮಾದರಿಯಲ್ಲಿ ಹೆಲಿಪೋರ್ಟ್)ಕ್ಕೆ ಜಾಗ ಗುರುತಿಸಲಾಗಿದ್ದು, ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಸೇವೆ ಶುರುವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಕೆಐಎಎಲ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳಲು ಹಲವು ಗಂಟೆಗಳೇ ಬೇಕಾಗುತ್ತದೆ. ಹೆಲಿಕಾಪ್ಟರ್‌ನಲ್ಲಿ ಕೇವಲ 15 ನಿಮಿಷಗಳಲ್ಲಿ ತಲುಪಬಹುದು. ಪ್ರಯಾಣದರ ಇನ್ನೂ ನಿಗದಿಯಾಗಿಲ್ಲ. ಆದರೆ, ಐಷಾರಾಮಿ ಕಾರುಗಳಲ್ಲಿ ಈಗಿರುವ ಟ್ಯಾಕ್ಸಿ ಬಾಡಿಗೆಗೆ ಹೆಚ್ಚು-ಕಡಿಮೆ ಸರಿಸಮವಾಗಿರುತ್ತದೆ ಎಂದರು.
ರಾಜ್ಯ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಹೊಸ ಪ್ರಯೋಗಗಳಲ್ಲಿ ಯಾವಾಗಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಐಟಿ-ಬಿಟಿ, ವೈಮಾನಿಕ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದನ್ನು ನಿರೂಪಿಸಿದೆ. ಈ ಸಾಲಿಗೆ ‘ಹೆಲಿಟ್ಯಾಕ್ಸಿ’ ಸೇರ್ಪಡೆಗೊಳ್ಳುತ್ತಿದೆ. ಆದರೆ, ಈ ಸೇವೆ ಕೇವಲ ಪ್ರತಿಷ್ಠಿತ ಜನರಿಗೆ ಸೀಮಿತವಾಗಬಾರದು. ಸಾಮಾನ್ಯರಿಗೂ ತಲುಪುವಂತಾಗಬೇಕು. ಅಲ್ಲದೆ, ರಾಜ್ಯ ಸರಕಾರವು ಹೆಲಿಕಾಪ್ಟರ್‌ಗಳನ್ನು ಆಸ್ಪತ್ರೆಯ ತುರ್ತು ಸೇವೆಗಳಿಗೆ ಬಳಸಿ ಯಶಸ್ವಿಯಾಗಿದೆ ಎಂದರು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್‌ಚಂದ್ರ ಕುಂಟಿಯಾ ಮಾತನಾಡಿ, ಮೇಲ್ಛಾವಣಿ ಜತೆಗೆ ಎಚ್‌ಎಎಲ್ ಸೇರಿದಂತೆ ನೆಲದ ಮೇಲೂ ಹಲವು ಹೆಲಿಪ್ಯಾಡ್‌ಗಳಿವೆ. ಅವುಗಳನ್ನು ಇದಕ್ಕೆ ಬಳಸಿಕೊಳ್ಳಲು ಸರಕಾರ ಪೂರಕ ಸಹಕಾರ ನೀಡಲಿದೆ. ಈ ಸಂಬಂಧ ಹೆಲಿಪ್ಯಾಡ್ ಹೊಂದಿದ ಕಟ್ಟಡ ಮಾಲಕರಿಂದ ಅಗತ್ಯ ಅನುಮತಿ ಪಡೆಯಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ಆಡಳಿತ ನಿರ್ದೇಶಕ ಹರ್ಷರಘುವನ್, ಕಾರ್ಯನಿರ್ವಾಹಕ ಹರಿ ಮರಾರ್ ಸೇರಿ ಪ್ರಮುಖರು ಹಾಜರಿದ್ದರು.
ನಗರದಲ್ಲಿ 90 ಬಹುಮಹಡಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್‌ಗಳಿವೆ. ಇವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಈಗ ಆರಂಭಿಸುತ್ತಿರುವ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಗೆ ಇವುಗಳನ್ನು ಬಳಸಿಕೊಳ್ಳಲಾಗುವುದು.
-ಕೆಎನ್‌ಜಿ ನಾಯರ್ ಥುಂಬಿ ಏವಿಯೇಷನ್ ಪ್ರೈ.ಲಿ., ನಿರ್ದೇಶಕ