ನಿರ್ಜೀವ ಕೆರೆಗಳ ಡಿನೋಟಿಫೈ ಪ್ರಸ್ತಾವ ಸರಕಾರದ ಮುಂದಿಲ್ಲ: ಕಾಗೋಡು ತಿಮ್ಮಪ್ಪ
ಬೆಂಗಳೂರು, ಆ. 4: ರಾಜ್ಯದಲ್ಲಿನ ನಿರ್ಜೀವ ಕೆರೆಗಳನ್ನು ಡಿನೋಟಿಫಿಕೇಷನ್ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬತ್ತಿ ಹೋಗಿರುವ 1100 ಕೆರೆಗಳನ್ನು ರಾಜ್ಯ ಸರಕಾರ ಡಿನೋಟಿಫೈ ಮಾಡುತ್ತಿದೆ ಎಂಬ ವಿಪಕ್ಷ ಮುಖಂಡರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಕೇಂದ್ರಕ್ಕೆ ಪ್ರಸ್ತಾವೆ: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ, ಅಂತರ್ಜಲ ಕುಸಿತದಿಂದ ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಪ್ರತಿ ಎಕರೆಗೆ 30ಸಾವಿರ ರೂ.ಪರಿಹಾರ ಕೋರಿ ಕೇಂದ್ರಕ್ಕೆ ಶೀಘ್ರದಲ್ಲೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಶೇ.20ರಿಂದ 30ರಷ್ಟು ಮಳೆ ಕೊರತೆ ಉಂಟಾಗಿದ್ದು, ಮುಂಗಾರು ಬಿತ್ತನೆ ಪ್ರಮಾಣವೂ ಶೇ.20ರಷ್ಟು ಕಡಿಮೆಯಾಗಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿಯೂ ಬರ ಪರಿಸ್ಥಿತಿ ಆವರಿಸುವ ಸಾಧ್ಯತೆಗಳಿವೆ ಎಂದು ಕಾಗೋಡು ತಿಮ್ಮಪ್ಪ ಇದೇ ವೇಳೆ ತಿಳಿಸಿದರು.
ಹೊಸ ಬರ ಪೀಡಿತ ತಾಲೂಕುಗಳ ಪಟ್ಟಿ ಇನ್ನೂ ಸಿದ್ಧಪಡಿಸಿಲ್ಲ. ಕುಡಿಯುವ ನೀರಿನ ಕೊರತೆ ಇರುವ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಜಾನುವಾರುಗಳಿಗೆ ಅಗತ್ಯವಿರುವ ಕಡೆ ಗೋಶಾಲೆ ತೆರೆದು ಮೇವು, ನೀರು ಒದಗಿಸಲು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.