×
Ad

ಐಟಿ ಅಧಿಕಾರಿಗಳ ಅನಗತ್ಯ ವಿಳಂಬ: ಡಿ.ಕೆ.ಸುರೇಶ್ ಆರೋಪ

Update: 2017-08-04 21:17 IST

ಬೆಂಗಳೂರು, ಆ.4: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕೇಳಿದ ಎಲ್ಲ ದಾಖಲೆಗಳನ್ನು ನಾವು ಒದಗಿಸುತ್ತಿದ್ದೇವೆ. ಆದರೂ ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

ಶುಕ್ರವಾರ ಸದಾಶಿವ ನಗರದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ಅನಗತ್ಯವಾದ ವಿಳಂಬ ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಎರಡು ದಿನದಿಂದ ನನ್ನ ಅಣ್ಣ ಡಿ.ಕೆ.ಶಿವಕುಮಾರ್ ಭೇಟಿಗೆ ಐಟಿ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಗುಜರಾತ್ ಕಾಂಗ್ರೆಸ್ ಶಾಸಕರು ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿರುವುದರಿಂದ ಡಿ.ಕೆ.ಶಿವಕುಮಾರ್ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಐಟಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

ಗುಜರಾತ್ ಶಾಸಕರು ಚೆನ್ನಾಗಿದ್ದಾರೆ: ಈಗಲ್‌ಟನ್ ರೆಸಾರ್ಟ್‌ನಲ್ಲಿರುವ ಗುಜರಾತ್ ಶಾಸಕರು ಒಗ್ಗಟ್ಟಾಗಿದ್ದಾರೆ. ಸಂತೋಷವಾಗಿದ್ದಾರೆ. ಗುಜರಾತ್ ರಾಜ್ಯಸಭೆ ಚುನಾವಣೆ ಹಿಂದಿನ ದಿನದವರೆಗೆ ಅಲ್ಲೇ ಇರುತ್ತಾರೆ. ಕೇಂದ್ರ ಸರಕಾರದ ಈ ಎಲ್ಲ ಷಡ್ಯಂತ್ರಗಳನ್ನು ನಾವು ಧೈರ್ಯದಿಂದ ಎದುರಿಸಲಿದ್ದೇವೆ ಎಂದು ಅವರು ತಿಳಿಸಿದರು.
ಕೆಲವು ಮಾಧ್ಯಮಗಳಲ್ಲಿ ಊಹಾಪೋಹ ವರದಿಗಳು ಪ್ರಸಾರವಾಗುತ್ತಿವೆ. ಅಂತಹ ಮಾಧ್ಯಮಗಳ ಮೇಲೆ ಪ್ರಕರಣ ದಾಖಲಿಸುತ್ತೇವೆ. ನಮ್ಮ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿವೆ. ಉದ್ದೇಶಪೂರ್ವಕವಾಗಿ ದಾಳಿ ನಡೆದಿರುವುದರಿಂದ ಬೇಕಂತಲೇ ಪರಿಶೀಲನೆ ವಿಳಂಬ ಮಾಡಲಾಗುತ್ತಿದೆ ಎಂದು ಐಟಿ ಅಧಿಕಾರಿಗಳ ವಿರುದ್ಧ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News