ಜಾತ್ಯತೀತ ಪಕ್ಷಗಳು ದ್ವಂದ್ವ ನೀತಿಗಳನ್ನು ಅನುಸರಿಸುತ್ತಿವೆ: ಎ.ಸಯಿದ್ ಟೀಕೆ
ಬೆಂಗಳೂರು, ಆ.4: ಗೋ ರಕ್ಷಕರ ದಾಳಿಗೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವವಾದಿ ಜಾತ್ಯತೀತ ಪಕ್ಷಗಳು ದ್ವಂದ್ವ ನೀತಿಗಳನ್ನು ಅನುಸರಿಸುತ್ತಿವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎ. ಸಯಿದ್ ಟೀಕಿಸಿದ್ದಾರೆ.
ಶುಕ್ರವಾರ ರಾಜಸ್ಥಾನದ ಜೈಪುರದಲ್ಲಿ ಎಸ್‌ಡಿಪಿಐ ಆಯೋಜಿಸಿದ್ದ ‘ಗುಂಪು ಹಿಂಸೆಯ ವಿರುದ್ಧ ಜನಾಂದೋಲನ’ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿರುವ ಸರಕಾರಗಳು ನಡೆದುಕೊಳ್ಳುತ್ತಿವೆ. ಜಾತ್ಯತೀತತೆ, ಕಾನೂನಾತ್ಮಕ ಆಡಳಿತ ಹಾಗೂ ನ್ಯಾಯಾಂಗ ದುರ್ಬಲಗೊಳ್ಳುತ್ತಿದೆ. ದೇಶದಲ್ಲಿ ಗುಂಪು ಹಿಂಸೆಗಳು ಅತಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಇದನ್ನು ಖಂಡಿಸಬೇಕಾದ ಜಾತ್ಯತೀತ ಪಕ್ಷಗಳು ದ್ವಂದ್ವ ನಿಲುವು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಗುಂಪು ಆಕ್ರಮಣ ಮತ್ತು ಜನರ ಮೇಲೆ ಹಲ್ಲೆ ಮಾಡುವುದು ಮೋದಿ ಆಡಳಿತದಲ್ಲಿ ನಿರಂತರವಾಗಿ ನಡೆಯುತ್ತಿವೆ. ಗೋವುಗಳನ್ನು ಪೂಜಿಸುವುದು ಮತ್ತು ಗೌರವಿಸುವುದು ನಮ್ಮಲ್ಲಿ ಹೊಸದೇನಲ್ಲ. ಹಲವು ರಾಜ್ಯಗಳು ಗೋಹತ್ಯೆಯನ್ನು ಹಲವು ವರ್ಷಗಳ ಹಿಂದೆಯೇ ನಿಷೇಧಿಸಿದೆ. ಆದರೆ ಗೋ ರಕ್ಷಣೆ ಹೆಸರಿನಲ್ಲಿ ಆಕ್ರಮಣ, ಗುಂಪು ಹಲ್ಲೆ ಮತ್ತು ಕೊಲ್ಲುವುದು ಮೋದಿಯವರ ವಿಶೇಷವಾದ ಕೊಡುಗೆಯಾಗಿದೆ ಎಂದು ಅವರು ದೂರಿದರು. ದೇಶದ ಪ್ರಜಾತಂತ್ರ ಮೌಲ್ಯಗಳನ್ನು ಒಂದು ನಿರ್ದಿಷ್ಟ ಗುಂಪು ಆಕ್ರಮಿಸಿಕೊಳ್ಳುತ್ತಿರುವಾಗ ನಿಜವಾದ ಪ್ರಜೆ ಪ್ರೇಕ್ಷಕನಾಗಿ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಸಮಸ್ಯೆಯನ್ನು ಎದುರಿಸಬೇಕು ಹಾಗೂ ಪ್ರತಿರೋಧ ಒಡ್ಡಬೇಕು. ಇದು ಗುಂಪು ಹಿಂಸೆಗೆ ಸಿಲುಕಿ ಸಾಯುವುದಕ್ಕಿಂತ ಶ್ರೇಷ್ಠವಾದುದು ಎಂದ ಅವರು, ದೇಶದಾದ್ಯಂತ ಅವ್ಯವಸ್ಥೆ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ, ತೀವ್ರವಾದ ತುರ್ತು ಗಮನ ಕೊಡಬೇಕಾಗಿದೆ ಎಂದು ಹೇಳಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಕ ಕಾನೂನು ಮಂಡಳಿಯ ಸದಸ್ಯ ಕಲೀಲ್-ಉರ್-ರೆಹಮಾನ್ ಸಜ್ಜದ್‌ನೊಮಾನಿ ಮಾತನಾಡಿ, ಧರ್ಮ ಮತ್ತು ಜಾತಿಯ ಆಧಾರದ ಬಿಟ್ಟು, ಶಾಂತಿಯನ್ನು ಬಯಸುವ ಪ್ರತಿಯೊಬ್ಬರು ಕೋಮುವಾದಿ ಶಕ್ತಿಗಳು ತಂದಿಟ್ಟಿರುವ ಧೃವೀಕರಣ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ತೀವ್ರವಾದ ಗುಂಪು ಹಿಂಸೆ ವಿರುದ್ಧ ತಮ್ಮ ತಮ್ಮ ಮನೆಗಳಿಂದ ಹೊರಬಂದು ಒಂದು ಸಾಮೂಹಿಕ ಹೋರಾಟ ರೂಪಿಸಿ ಎಂದು ಕರೆ ನೀಡಿದರು.
ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯದೀಶರಾದ ಬಿ.ಜಿ.ಕೋಲ್ಸೆ ಪಾಟೀಲ್ ಮಾತನಾಡಿ, ರಸ್ತೆಯಲ್ಲಿ ನಿಂತಿರುವ ಪೂರ್ವ ನಿಯೋಜಿತ ಗುಂಪುಗಳು ಎಲ್ಲಾ ತೀರ್ಮಾನ ಮಾಡುತ್ತಿವೆ. ಕಾನೂನು ಮೀರುವ ವ್ಯಕ್ತಿಗಳು ಈಗ ಕಾನೂನಿಗೆ ಹೆದುರುತ್ತಿಲ್ಲ. ಅನೇಕ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಬಿಜೆಪಿ ಇವರನ್ನು ರಕ್ಷಿಸುತ್ತಿದೆ. ಅಲ್ಲದೆ, ಹಿಂದುತ್ವ ನೀತಿಗಳ ಅನುಷ್ಠಾನಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬ ಕಾರಣ ಇಟ್ಟುಕೊಂಡು ದಲಿತರನ್ನು ಮತ್ತು ಮುಸ್ಲಿಂರನ್ನು ಗುರಿಯಾಗಿಸಲಾಗಿದೆ ಎಂದು ಖಂಡಿಸಿದರು.
ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತಿರುವ ಬಿಜೆಪಿ ದೇಶವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಹಿಂದುತ್ವದ ನೀತಿಗಳ ಮೂಲಕ ದೇಶವನ್ನು ನಡೆಸಬಹುದು ಎಂಬ ದೃಷ್ಟಿಯಿಟ್ಟುಕೊಂಡು ಸಂಘಪರಿವಾರದವರನ್ನು ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀತಿಗಳನ್ನು ರೂಪಿಸುವ ಸ್ಥಳದಲ್ಲಿ ಕೂರಿಸಲಾಗಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಅವ್ಯವಸ್ಥೆಯನ್ನು ನಿರ್ನಾಮ ಮಾಡಲು ಎಲ್ಲರೂ ಒಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಎಐಸಿಸಿ ವಕ್ತಾರ ಶಹನವಾಜ್ ಪೂನವಾಲಾ ಮಾತನಾಡಿ, ಮನುಷ್ಯನ ಬೆಲೆ ಗೋವಿಗಿಂತಲೂ ಕಡಿಮೆಯಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಸ್ವಯಂ ಘೋಷಿತ ಗೋರಕ್ಷಕರು ಮುಸ್ಲಿಂರನ್ನು, ದಲಿತರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡುತ್ತಿದ್ದಾರೆ. ಮೋದಿಯವರು ಕ್ರಮ ಕೈಗೊಳ್ಳುವ ಬದಲಿಗೆ, ಸುಳ್ಳು ಹೇಳಿಕೆಗಳನ್ನು ನೀಡಿ ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಗೋ ರಕ್ಷಕರಿಗೆ ಸಂಪೂರ್ಣ ಬೆಂಬಲವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಆಪಾದಿಸಿದರು.
ಕಾರ್ಯಕ್ರಮದಲ್ಲಿ ಅಜುೀರ್‌ನ ಷರೀಫ್ ಸಮರ್‌ಚಿಶ್ತಿ, ವುಮೇನ್ ಇಂಡಿಯಾ ಮೂಮೆಂಟ್ ಸಂಘಟನೆಯ ಯಾಸ್ಮೀನ್ ಫಾರೂಕಿ, ಕ್ಯಾಂಪಸ್ ಫ್ರಂಟ್ ಇಂಡಿಯಾ ಸಂಘಟನೆಯ ಶೋಹೇಬ್ ಹಾಗೂ ಗುಂಪು ಹಿಂಸೆಗೆ ಬಲಿಯಾದವರ ಕುಟುಂಬಗಳ ಸಂತ್ರಸ್ಥ ಸದಸ್ಯರು ಪಾಲ್ಗೊಂಡಿದ್ದರು.