ಬೆಂಗಳೂರು ತೊರೆಯುವಂತೆ ಸಿಖ್ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ
ಬೆಂಗಳೂರು, ಆ.5: ಬೆಂಗಳೂರಿನಲ್ಲಿ ಸಿಖ್ ಕುಟುಂಬವೊಂದರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಾಳಿಗೊಳಗಾದರು ಪಂಜಾಬ್ ಮೂಲದ ನಿವೃತ್ತ ಸೇನಾ ಕರ್ನಲ್ ಹರ್‌ಪ್ರೀತ್ ಉಪ್ಪಾಳ್ ಅವರ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. ಈ ಕುಟುಂಬದ ಮೂವರ ಮೇಲೆ ಸ್ಥಳೀಯರು ದಾಳಿ ಮಾಡಿ, ಬೆಂಗಳೂರು ತೊರೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 13ರಂದು ನನ್ನ ತಾಯಿ ಹಾಗೂ ನನ್ನ ಇಬ್ಬರು ಸಹೋದರರ ಮೇಲೆ ಸ್ಥಳೀಯರು ದಾಳಿ ಮಾಡಿದ್ದಾರೆ. ಅಲ್ಲದೇ, ಇವರ ಕುಟುಂಬದವರನ್ನು ’ಪಾಕಿಸ್ತಾನಿಗಳು’ ಎಂದು ಸ್ಥಳೀಯರು ಕರೆದಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿರುವ ಆಸ್ತಿಯನ್ನು ಮಾರಿಕೊಂಡು ನಗರ ಬಿಡುವಂತೆ ಧಮ್ಕಿ ಹಾಕಿದ್ದಾರೆ ಎಂದು ಹರ್‌ಪ್ರೀತ್ ಉಪ್ಪಾಳ್ ಆರೋಪಿಸಿದ್ದಾರೆ.
ಇದಲ್ಲದೆ, ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಕೆಲವರನ್ನು ಅರೆಸ್ಟ್ ಮಾಡಿದರೂ, ತಕ್ಷಣವೇ ಆರೋಪಿಗಳನ್ನು ಬೇಲ್ ಮೇಲೆ ಬಿಟ್ಟಿದ್ದಾರೆ ಎಂದು ಅವರು ದೂರಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಗಮನ ಹರಿಸಿದ್ದಕ್ಕಾಗಿ ಇಬ್ಬರೂ ಸಿಎಂಗಳಿಗೆ ಹರ್‌ಪ್ರೀತ್ ಉಪ್ಪಾಳ್ ಧ್ಯನವಾದ ತಿಳಿಸಿದ್ದಾರೆ. ಇನ್ನು, ಈ ಪ್ರಕರಣದ ಬಗ್ಗೆ ಪೊಲೀಸರು ಚಾರ್ಜ್‌ಶೀಟ್ ದಾಖಲಿಸಿ, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹರ್‌ಪ್ರೀತ್ ಉಪ್ಪಾಳ್ ಒತ್ತಾಯಿಸಿದ್ದಾರೆ.