ಸಾಮಾಜಿಕ ಜಾಲತಾಣ ಮತ್ತು ಸಂಘಶಕ್ತಿ

Update: 2017-08-05 14:36 GMT

ಶಿಶುಪ್ರಧಾನ ಸಮಾಜದ ಆಸಕ್ತರನ್ನು ಗುರುತಿಸಿ

ಸಾಮಾನ್ಯವಾಗಿ ಪೇಸ್ಬುಕ್‌ನಲ್ಲಿ ಮಗುವಿನ ಚಿತ್ರವನ್ನೋ, ಮಗುವಿನ ಜೊತೆಗಿರುವ ತುಂಟತನದ ಅಥವಾ ಪ್ರೇಮಪೂರ್ಣವಾದ ಚಿತ್ರವನ್ನೋ ಹಾಕಿದರೆ ಬಹಳಷ್ಟು ಜನ ಲೈಕಿಸುತ್ತಾರೆ. ಅದಕ್ಕೆ ತಮ್ಮ ಸಂದೇಶಗಳನ್ನೂ ಹಾಕುತ್ತಾರೆ. ಆದರೆ, ಮಗುವಿನ ಪೋಷಣೆ, ಮನಶಾಸ್ತ್ರ ಅಥವಾ ಶಿಕ್ಷಣದ ಕುರಿತಾಗಿ ಇರುವಂತಹ ಲೇಖನಗಳನ್ನು ಹಾಕಿದರೆ ಅದಕ್ಕೆ ಗಮನ ಕೊಡುವವರು ತೀರಾ ಕಡಿಮೆ. ರಾಜಕೀಯ, ಧಾರ್ಮಿಕ ಅಥವಾ ರಾಜಕೀಯ ವ್ಯಂಗ್ಯ, ವ್ಯಕ್ತಿ ಅವಹೇಳನಕ್ಕೆ ಬರುವಂತಹ ಕಮೆಂಟುಗಳು ಒಂದು ಆರೋಗ್ಯಪೂರ್ಣವಾದಂತಹ, ಅದರಲ್ಲೂ ಮಕ್ಕಳ ಬಗ್ಗೆ ಇರುವಂತಹ ಲೇಖನಗಳಿಗೆ ಸಿಗುವುದಿಲ್ಲ. ಸಾವು, ನೋವು, ಚೆಲುವು ಇತ್ಯಾದಿ ಯಾವುದಾದರೂ ಭಾವುಕ ಅಥವಾ ಉನ್ಮತ್ತ ವಿಚಾರಗಳಿಗೆ ಸ್ಪಂದಿಸುವಂತಹ ಜನ ಪ್ರಾಯೋಗಿಕವಾದಂತಹ ಮತ್ತು ಪ್ರಕ್ರಿಯೆಗಳಿಗೆ ಒಳಮಾಡುವಂತಹ ಲೇಖನಗಳಿಗೆ ಅತ್ಯಂತ ಕಡಿಮೆ ಸ್ಪಂದಿಸುವುದು. ಆದ್ದರಿಂದ ಶಿಶುಪ್ರಧಾನ ಸಮಾಜದ ಬಗ್ಗೆ ಆಸಕ್ತಿ ಇರುವಂತಹ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಬೇಕು. ಹಾಗೆಯೇ ಮಕ್ಕಳ ಶಿಕ್ಷಣ, ಹಕ್ಕು ಮತ್ತು ಹಿತಾಸಕ್ತಿ ಇರುವಂತಹ ಗುಂಪುಗಳನ್ನೂ ಕೂಡ ಕಂಡುಕೊಳ್ಳಬೇಕು. ಇದರಲ್ಲಿ ಮಕ್ಕಳ ಕುರಿತಾಗಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಶಿಕ್ಷಣ ಅಥವಾ ಇನ್ನಾವುದೇ ರೀತಿಯ ತರಬೇತಿಗಳ ಬಗ್ಗೆ ಪ್ರಕಟಿಸಬೇಕು. ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಂದೆತಾಯಿಗಳೂ ತಮ್ಮ ವಿಷಯಕ್ಕೆ ಸಮಾನವಾಗಿರುವಂತಹ ಹಾಗೂ ತಾವು ಪರಿಹಾರ ಕಂಡುಕೊಂಡಿರುವಂತಹ ವಿಷಯಗಳನ್ನು ಹಂಚಿಕೊಂಡಾಗ ಇತರರಿಗೆ ಅದು ಅನುಕೂಲವಾಗಬಹುದು. ಅಂತೆಯೇ ಆಯಾ ಪ್ರದೇಶಗಳ ವ್ಯಾಪ್ತಿಗೆ ತಕ್ಕಂತೆ ಗುಂಪುಗಳನ್ನಾಗಿ ಮಾಡಿಕೊಂಡು ಪರಸ್ಪರ ಭೇಟಿಯಾಗುವುದು ಮತ್ತು ಮಕ್ಕಳ ವಿಷಯವಾಗಿ ವಿಚಾರಗಳನ್ನು, ಸಮಸ್ಯೆಗಳನ್ನು, ಪರಿಹಾರಗಳನ್ನು ಹಂಚಿಕೊಳ್ಳುವುದರ ಮೂಲಕ ಸಂಘಟಿತರಾಗಬೇಕು. ಇದರಿಂದ ಶಾಲೆಯಿಂದ ಅಥವಾ ಶಿಕ್ಷಕರಿಂದ ಎದುರಿಸುವಂತಹ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ.

ಹವ್ಯಾಸ ಮತ್ತು ಅಭಿರುಚಿಗಳ ವಿಸ್ತರಣೆ

ಮಕ್ಕಳ ಅಭಿರುಚಿ ಮತ್ತು ಹವ್ಯಾಸಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೂ ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು. ಮಗುವು ತಾನು ಮಾಡುವ ವರ್ಣಕಲೆ ಅಥವಾ ಕರಕುಶಲ ಕಲೆ ಇತ್ಯಾದಿಗಳ ಬಗ್ಗೆ ಪ್ರಕಟಿಸುವುದು. ಸಮೀಪದಲ್ಲಿ ಇರುವಂತಹ ಸಮಾನ ಅಭಿರುಚಿಯ ಮಕ್ಕಳನ್ನು ಸಂಘಟಿಸುವುದು ಇತ್ಯಾದಿಗಳನ್ನು ಮಾಡುವ ಮೂಲಕ ಹಿರಿಯರೂ ಪರಿಚಯವಾಗುವುದಲ್ಲದೇ ಮಕ್ಕಳ ಕ್ಷೇಮಾಭ್ಯುದಯಕ್ಕೆ ಒಂದು ರೀತಿಯಲ್ಲಿ ಸಾಂಘಿಕವಾಗಿ ಕ್ರಿಯಾಶೀಲವಾ ದಂತಾಗುತ್ತದೆ.

ಕ್ರೀಡೆ, ಸಂಗೀತ, ನೃತ್ಯ, ರಂಗಭೂಮಿ ಚಟುವಟಿಕೆ, ಹಿಂದುಳಿದಿರುವ ಕಲಿಕೆಯ ವಿಷಯಗಳಲ್ಲಿ ವಿಶೇಷ ತರಬೇತಿ ಇತ್ಯಾದಿಗಳನ್ನು ಆಯೋಜಿಸಬಹುದಾಗಿರುತ್ತದೆ. ಮಕ್ಕಳ ಸಲುವಾಗಿ ಸಂಘಟಿತವಾಗುವ ಅನಿವಾರ್ಯತೆ ಮತ್ತು ಅಗತ್ಯ ಹಿಂದೆಂದಿ ಗಿಂತಲೂ ಈಗ ಬಹಳ ಇದೆ. ಆದರೆ, ಮಕ್ಕಳನ್ನು ರೂಪಿಸುವುದರಲ್ಲಿ ತಪ್ಪು ತಿಳುವಳಿಕೆ ಯಿಂದಲೇ ಕೂಡಿರುವ ಪೋಷಕರು ಅಥವಾ ತಮ್ಮ ವರ್ಗ ಮತ್ತು ಜೀವಶೈಲಿಯ ತಾರತಮ್ಯದಿಂದಾಗಿ ಇತರ ಮಕ್ಕಳ ಪೋಷಕರೊಡನೆ ಕೂಡುವುದೇ ಇಲ್ಲ. ಪಟ್ಟಣಗಳಲ್ಲಿ ನಾನು ಗಮನಿಸಿದಂತೆ ಯಾವುದೇ ರೀತಿಯ ಭೇದಗಳ ಸಮಸ್ಯೆಗಳಿದ್ದರೂ ಅತೀ ಹೆಚ್ಚಿನ ತಾರತಮ್ಯದ ಸಮಸ್ಯೆಯೆಂದರೆ ಜೀವನಶೈಲಿಯ ವಿಷಯದಲ್ಲಿ. ಜೀವನ ಶೈಲಿಯ ತಾರತಮ್ಯ ಮತ್ತು ವರ್ಗಭೇದ ಅತ್ಯಂತ ಡಾಳಾಗಿ ನಗರದ ಕುಟುಂಬ ಗಳಲ್ಲಿ ಕಾಣುತ್ತೇವೆ. ಹಾಗಾಗಿ ತಮ್ಮ ಮಕ್ಕಳು ಇನ್ನೂ ಬೇರೆ ಶಾಲೆಯ ಅಥವಾ ವರ್ಗದ ಮಕ್ಕಳೊಡನೆ ಬೆರೆಯುವುದಕ್ಕೆ ಬಹಳ ಯೋಚಿಸುತ್ತಾರೆ ಮತ್ತು ನಿರಾಕರಿ ಸುತ್ತಾರೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಮಕ್ಕಳಿಗೆ ಅವರ ಜೊತೆ ಸೇರಬೇಡ. ಇವರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಡ. ಇವರ ಜೊತೆ ಸ್ನೇಹ ಮಾಡು ಎಂದೆಲ್ಲಾ ಹೇಳಿಕೊಡುವಂತಹ ಪೋಷಕರನ್ನು ಈಗಲೂ ನೋಡುತ್ತಿದ್ದೇವೆ. ಆದರೆ, ಎಲ್ಲಾ ಮಕ್ಕಳೂ ಸೇರಿರುವಂತಹ ನಮ್ಮ ಮುಂದಿನ ಪೀಳಿಗೆ ಒಟ್ಟಾಗಿ ಸಮಾಜದಲ್ಲಿ ಬಾಳುವವರು ಮತ್ತು ಸಮಾಜವನ್ನು ಮುನ್ನಡೆಸುವವರು ಎಂಬ ದೂರದೃಷ್ಟಿಯಿಂದ ಮತ್ತು ಮುಂದಾಲೋಚನೆಯಿಂದ ಕೆಲಸ ಮಾಡಬೇಕಾದ ಅಗತ್ಯ ಇದೆ. ದೊಡ್ಡ ವಿಪರ್ಯಾಸವೆಂದರೆ, ನಾವು ನಮ್ಮ ಮಕ್ಕಳನ್ನು ಸರಿಯಾಗಿ ರೂಪಿಸುತ್ತಿದ್ದೇವೆ ಎಂದು ಬಹಳಷ್ಟು ಪೋಷಕರು ಭ್ರಮಿಸಿಕೊಂಡೇ ಬಂದಿರು ವವರು. ತಾವು ಪರಮ ದೈವ ಭಕ್ತರಾಗಿದ್ದರೆ, ಅಥವಾ ನಾಸ್ತಿಕರಾಗಿದ್ದರೆ ಮಕ್ಕಳು ಅದರಂತೆಯೇ ಇರುವುದನ್ನು, ತಮ್ಮ ಇಷ್ಟದ ವಿಷಯಗಳನ್ನೇ ಅವರಿಗೂ ಇಷ್ಟಪಡಿಸುವುದರಲ್ಲಿಯೇ ಸಾರ್ಥಕತೆಯನ್ನು ಕಂಡುಕೊಳ್ಳುವ ಪೋಷಕರಿಗೆ ತಮ್ಮ ಸಾಮರ್ಥ್ಯ ಮತ್ತು ದೃಷ್ಟಿಯಿಂದ ಆಚೆಗೆ ಸಮಾಜ ಮತ್ತು ಜಗತ್ತು ಇದೆ ಎಂದು ಅರಿವಾದರೆ ಮಾತ್ರ ಮಕ್ಕಳ ವಿಷಯದಲ್ಲಿ ಇತರರನ್ನು ಬೆರೆಯುತ್ತಾರೆ. ಮಕ್ಕಳನ್ನು ಎಲ್ಲಾ ಬಗೆಯ ಮಕ್ಕಳೊಂದಿಗೆ ಬೆರೆಯುವ ಹಾಗೆ ಅವಕಾಶಗಳನ್ನು ಕಲ್ಪಿಸುತ್ತಾರೆ.

ನನ್ನ ಆತಂಕವೆಂದರೆ, ಹಿರಿಯರಲ್ಲೇ ಅತ್ಯಂತ ಮಡಿವಂತಿಕೆಯಿಂದ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಇನ್ನು ಮಕ್ಕಳಲ್ಲಿ ಈ ವಿಷಯವನ್ನು ಹೇಗೆ ಸಾಧಿಸುತ್ತಾರೆ ಎಂಬುದು.

ಎಲ್ಲರನ್ನೂ ಒಳಗೊಳ್ಳುವ ಮನೋಧರ್ಮ

ಸಮಾನ ಆಸಕ್ತಿಗಳನ್ನು ಮತ್ತು ಉದ್ದೇಶಗಳನ್ನು ಗುರುತಿಸುವುದು ಹಾಗೂ ಅದನ್ನು ಕಾರ್ಯಗತ ಗೊಳಿಸಲು ಸಾಂಘಿಕವಾಗಿ ಪ್ರಯತ್ನಗಳನ್ನು ಮಾಡುವುದು. ಇರುವ ಭಿನ್ನತೆ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ವ್ಯಕ್ತಿಗಳನ್ನು ಒಳಗೊಳ್ಳುತ್ತಾ ಸಮಾಜಕ್ಕೆ ಅಗತ್ಯವಿರುವ ಕೆಲಸಗಳಲ್ಲಿ ಒಂದಾಗುವಂತಹ ಪ್ರಜೆಗಳ ಕೊರತೆಯ ಕಾರಣವೇ ಮಕ್ಕಳಾಗಿದ್ದಾಗ ಸಾಂಘಿಕವಾಗಿ ದುಡಿಯದಿರುವುದು. ಇತರ ಮಕ್ಕಳೊಂದಿಗೆ ಸೇರದಿರುವುದು. ಸಮಾನ ಮನಸ್ಕರೊಡನೆ ಮಾತ್ರವೇ ಸೇರುವಂತಹ ಎಷ್ಟೋ ಮಂದಿಗೆ ಇತರ ಬಗೆಯ ಚಿಂತನಾ ಲಹರಿಗಳನ್ನು ಹಂಚಿಕೊಳ್ಳಲೂ ಅವಕಾಶ ಸಿಗದಂತಾಗಿಬಿಡುತ್ತದೆ. ಆದ್ದರಿಂದ ಮಕ್ಕಳಲ್ಲಿರು ವಾಗಲೇ ಇತರ ಶಾಲೆಗಳಲ್ಲಿ ಓದುತ್ತಿರುವವರು, ಬೇರೆಬೇರೆ ವಿಧದ ಆಸಕ್ತಿ ಉಳ್ಳವರು, ವೈವಿಧ್ಯಮಯ ಜೀವನ ಶೈಲಿಯ ಹಿನ್ನೆಲೆಯಿಂದ ಬಂದಿರುವವರು; ಹೀಗೆ ಒಂದಾಗುವಂತಹ ಯೋಜನೆಗಳನ್ನು ರೂಪಿಸಬೇಕು ಮತ್ತು ಹಿರಿಯರು ಮೊದಲು ಮನಸ್ಸು ಮಾಡಬೇಕು.

ಇಂತಹ ಸಂಘಗಳಿಂದಾಗಿ ಪೋಷಕರು ಪರಸ್ಪರ ಪ್ರೇರಣೆಗಳನ್ನು ಪಡೆದು ಕೊಳ್ಳಲು ನೆರವಾಗುತ್ತದೆ ಹಾಗೂ ಶಿಶುಕೇಂದ್ರಿತ ಸಮಸ್ಯೆಗಳನ್ನು ದೂರೀಕರಿಸಿ ಕೊಳ್ಳಲೂ ಸಾಧ್ಯವಾಗುತ್ತದೆ.

ಪರಸ್ಪರ ಪ್ರೇರಕರು

ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳು ವೈವಿಧ್ಯಮಯವಾಗಿ ಕ್ರಿಯಾಶೀಲರಾಗಿರಲು ಸಾಧ್ಯವಾಗುತ್ತದೆ. ಮಕ್ಕಳ ಚಟುವಟಿಕೆಗಳೂ ಕೂಡ ಅವರಲ್ಲಿ ಪರಸ್ಪರ ಪ್ರೇರಣೆಗೂ ಹಾಗೂ ಸಮಸ್ಯೆ ನಿವಾರಣೆಗೂ ವೇದಿಕೆಯಾಗುತ್ತದೆ.

ವಿವಿಧ ಶಾಲೆಗಳ, ವಿವಿಧ ಮನೆಗಳ ಮಕ್ಕಳು ಒಂದೆಡೆ ಸೇರಿ ರಂಗಭೂಮಿ ಶಿಬಿರಗಳನ್ನೋ, ಅಥವಾ ಇನ್ನಾವುದೋ ಕಾರ್ಯಾಗಾರಗಳನ್ನು ಮಾಡುವುದೋ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿರುತ್ತದೆ. ಆದರೆ, ಅಲ್ಲಿ ಸಮಾಜದ ಎಲ್ಲಾ ವರ್ಗದ ಜನ ಅಥವಾ ಜೀವನ ಶೈಲಿಗಳನ್ನು ನೋಡಲಾಗುವುದಿಲ್ಲ. ಅಲ್ಲಿನ ಸಾಮಾಜಿಕ ಚಟುವಟಿಕೆಗಳು ಸೀಮಿತವಾಗಿಯೇ ಇರುತ್ತದೆ. ಅಲ್ಲಿ ಆರ್ಥಿಕವಾಗಿ ಮತ್ತು ಜೀವನಶೈಲಿಯ ವಿಚಾರವಾಗಿ ಬಹಳಷ್ಟು ಸಾಮ್ಯತೆಗಳು ಇರುವವರೇ ಆಗಿರುತ್ತಾರೆ. ಮಕ್ಕಳ ಜೀವನಾನುಭವವೇನೂ ಹೆಚ್ಚಿಗೆ ತೆರೆದುಕೊಳ್ಳುವುದಿಲ್ಲ. ಆದರೆ ವಿವಿಧ ವಿಷಯಗಳನ್ನು ಕಲಿಯಲು ಅಥವಾ ಆಸಕ್ತಿಗಳನ್ನು ರೂಢಿಸಿಕೊಳ್ಳಲು ಮಾತ್ರ ಸಾಧ್ಯವಾಗುವುದು.

ಒಂದು ಬಗೆಯ ಶಾಲೆಗೆ ಕಳುಹಿಸುವ, ಒಂದು ಬಗೆಯ ಅಪಾರ್ಟ್ ಮೆಂಟ್‌ಗಳಲ್ಲಿ ಅಥವಾ ಬಡಾವಣೆಗಳಲ್ಲಿ ವಾಸಿಸುವ ಜನರಲ್ಲಿ ಹೆಚ್ಚೇನೂ ಭಿನ್ನತೆಗಳಿರುವುದಿಲ್ಲ. ಆದರೆ ಒಂದು ಪ್ರದೇಶದಲ್ಲಿ ಹಲವು ಬಗೆಯ ಜನರಿದ್ದು ಆ ಮಕ್ಕಳೆಲ್ಲರ ಶಿಕ್ಷಣ ಮತ್ತು ಪೋಷಣೆಗೆ ಎಲ್ಲಾ ಹಿರಿಯರೂ ಸಾಂಘಿಕವಾಗಿ ಆಲೋಚಿಸುವ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವಂತಹ ಅಗತ್ಯ ಖಂಡಿತ ಇದೆ.

ಅನೌಪಚಾರಿಕ ಮತ್ತು ಪರೋಕ್ಷ ಸಮಾಲೋಚನೆಗಳು

ಮಗುವನ್ನು ಶಾಲೆಗೆ ಬಿಡುವಾಗ ಓರ್ವ ವ್ಯಕ್ತಿ ಬಂದು ನನ್ನೊಡನೆ ಪರಿಚಯ ಮಾಡಿಕೊಂಡು ಮಾತಾಡಿದರು. ಅವರ ಪ್ರಕಾರ ಶಾಲೆಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ಮತ್ತು ಮಕ್ಕಳನ್ನು ನಡೆಸಿಕೊಳ್ಳುವ ಬಗ್ಗೆ ಅವರಿಗೆ ತಕರಾರಿದ್ದು ಅದರ ಬಗ್ಗೆ ನೇರವಾಗಿ ದೂರಿ ಮಾತಾಡಿದ್ದಕ್ಕೆ ಅವರ ಮಗುವನ್ನು ಟಾರ್ಗೆಟ್ ಮಾಡಲಾಗಿದೆ ಎಂದರು. ಶಿಕ್ಷಕರು ಮತ್ತು ಮುಖ್ಯೋಪಧ್ಯಾಯರು ಉದ್ದೇಶಪೂರ್ವಕವಾಗಿ ಮಗುವನ್ನು ಅನಾದರಿಸುವುದು, ಮಾನ್ಯತೆ ಕೊಡದಿರುವುದು, ಆಸಕ್ತಿವಹಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನಾನು ಮಕ್ಕಳ ಮೂಲಗಳಿಂದಲೇ ವಿಚಾರಿಸಿದಾಗ ಅದು ನಿಜವೆಂದೂ ತಿಳಿದುಬಂದಿತು. ಶಿಕ್ಷಕರು ನೇರವಾಗಿ ಅವರ ಅಪ್ಪ ಒಂದು ಥರಾ, ಆ ಮಗುವನ್ನು ಹೆಚ್ಚು ಮಾತಾಡಿಸಬೇಡಿ ಎಂದು ಎಲ್ಲಾ ಮಕ್ಕಳ ಎದುರೇ ಹೇಳಿದರಂತೆ.

ಸೂಕ್ಷ್ಮವಾಗಿ ಗಮನಿಸಲು ಆ ಪೋಷಕರಿಗೂ ಸಮಾಲೋಚನೆ ಮಾಡುವ ಅಗತ್ಯವಿದೆ ಎಂದು ತಿಳಿಯಿತು. ಎಷ್ಟೋ ಬಾರಿ ನೇರವಾಗಿ ಸಮಾಲೋಚನೆಗಳನ್ನು ಮಾಡಲಾಗದಿದ್ದರೂ ಪರಸ್ಪರ ಬೆರೆಯುವುದು, ಮಾತಾಡಿಕೊಳ್ಳುವುದು, ಸಂಭಾಷಿಸುವುದು ಇತ್ಯಾದಿಗಳಿಂದಲೇ ಸಮಾಲೋಚನೆಯಾಗುವುದು.

ನಾನೊಂದು ಸಂಗೀತ ಶಾಲೆಯಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದೆ. ಸಂಗೀತ ಕಲಿಯಲು ಬರುತ್ತಿದ್ದ ತಾಯಿ ಹೈಸ್ಕೂಲು ಓದುತ್ತಿರುವ ತನ್ನ ಮಗಳ ಬಗ್ಗೆ ಯಾವಾಗಲೂ ದೂರುತ್ತಿದ್ದರು. ಆಕೆಯನ್ನೂ ಆಕೆಯ ಸೋದರನನ್ನೂ ಕೆಲವು ಸಲ ಕರೆದುಕೊಂಡು ಬರಲು ಸೂಚಿಸಿದೆ. ಆ ತಾಯಿಯ ಮಕ್ಕಳು ಬಂದಾಗ ತಿಳಿದಿದ್ದೇನೆಂದರೆ ಸಮಸ್ಯೆ ಇದ್ದದ್ದು ತಾಯಿಯಲ್ಲಿಯೇ. ಮಕ್ಕಳು ಸಹಜವಾದ ಹುಡುಗಾಟಿಕೆ ಮತ್ತು ಚೇಷ್ಟೆಗಳಿಂದ ಕೂಡಿದ್ದರು. ಮಕ್ಕಳನ್ನು ನಾನು ಪ್ರಶ್ನಿಸುತ್ತಿದ್ದ ಮತ್ತು ವರ್ತಿಸುತ್ತಿದ್ದ ರೀತಿಯನ್ನು ಮತ್ತು ಮಕ್ಕಳು ಅದಕ್ಕೆ ಸ್ಪಂದಿಸುತ್ತಿದ್ದ ರೀತಿಯನ್ನು ಕಂಡ ತಾಯಿಗೆ ತನ್ನ ವರ್ತನೆಯ ಬಗ್ಗೆ ತಿಳುವಳಿಕೆ ಮೂಡಿತು. ಮುಂದಿನ ದಿನಗಳಲ್ಲಿ ಅವರ ನಡುವಿನ ಸಂಘರ್ಷ ಕಡಿಮೆಯಾದುದಲ್ಲದೇ ಮಕ್ಕಳೂ ತಾಯಿಯಲ್ಲಿ ಸಕಾರಾತ್ಮಕ ಅಂಶಗಳನ್ನು ಗುರುತಿಸಲು ತೊಡಗಿದ್ದರು. ಇದೊಂದು ರೀತಿಯಲ್ಲಿ ಪರೋಕ್ಷವಾದಂತಹ ಸಮಾಲೋಚನೆ. ಇಂತಹ ಎಷ್ಟೋ ವಿಷಯಗಳು ಮಕ್ಕಳಿಗೂ ಮತ್ತು ಪೋಷಕರಿಗೂ ಸಹಾಯಕವಾಗುತ್ತದೆ.

ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಅವರು ಸತತವಾಗಿ ಕಾಣುವ ಹಿರಿಯರ ವರ್ತನೆಗಳೇ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಯಾವ ಪೋಷಕರೂ ಮತ್ತು ಶಿಕ್ಷಕರೂ ಮರೆಯಬಾರದು.

ಎಲ್ಲಾ ಮಕ್ಕಳೂ ಸೇರಿರುವಂತಹ ನಮ್ಮ ಮುಂದಿನ ಪೀಳಿಗೆ ಒಟ್ಟಾಗಿ ಸಮಾಜದಲ್ಲಿ ಬಾಳುವವರು ಮತ್ತು ಸಮಾಜವನ್ನು ಮುನ್ನಡೆಸುವವರು ಎಂಬ ದೂರದೃಷ್ಟಿಯಿಂದ ಮತ್ತು ಮುಂದಾಲೋಚನೆಯಿಂದ ಕೆಲಸ ಮಾಡಬೇಕಾದ ಅಗತ್ಯ ಇದೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News