ಕೆರ್ವಾಶೆ ಶಾಲೆಯಲ್ಲಿ ಪ್ರೇತಗಳ ಕಾಟ

Update: 2017-08-05 16:28 GMT

ಭಾಗ 7

ನಿರೂಪಣೆ: ಸತ್ಯಾ ಕೆ.

ಕೆರ್ವಾಶೆ. 1989ರ ಸಮಯವದು. ನಮ್ಮ ತಂಡಕ್ಕೊಂದು ಕುತೂಹಲಕಾರಿ ಸಂಗತಿ ತಿಳಿದು ಬಂತು. ಮಂಗ ಳೂರು ಸಮೀಪದ ಪುಟ್ಟ ಗ್ರಾಮ. ಆ ಶಾಲೆಯಲ್ಲಿ ಮಕ್ಕಳ ಮೈಮೇಲೆ ಆವಾಹನೆಯಾಗುವ ಸಂಗತಿ ಯದು. ಅಂದಿನ ಪತ್ರಿಕೆಯೊಂದರಲ್ಲಿ ಈ ಸುದ್ದಿ ಭಾರೀ ಪ್ರಚಾರವನ್ನು ಪಡೆದಿತ್ತು. ಶಾಲಾ ಮಕ್ಕಳು ಆಗಾಗ್ಗೆ ತಲೆ ತಿರುಗಿ ಬೀಳುವುದು. ಅದರಲ್ಲೂ ಈ ಆವಾಹನೆಯಾಗುವುದು ಹೆಣ್ಣು ಮಕ್ಕಳ ಮೇಲೆ. ಅದರಲ್ಲೂ ಆ ಹೆಣ್ಣು ಮಕ್ಕಳೆಲ್ಲಾ 10ರಿಂದ 13ರ ಹರೆಯ ದವರು. ನೋಡಲು ಸುಂದರವಾಗಿರುವವರು ಮತ್ತು ದೈಹಿಕವಾಗಿಯೂ ಆರೋಗ್ಯವಂತರಾಗಿದ್ದ ಹೆಣ್ಣು ಮಕ್ಕಳು. ಅದೂ ಹಗಲು ಹೊತ್ತಿನಲ್ಲಿ ಮೈ ಮೇಲೆ ಆವಾಹನೆಯಾಗುತ್ತಿದ್ದ ಸುದ್ದಿ ನಮ್ಮ ತಂಡವನ್ನು ಆ ಪ್ರಾಥ ಮಿಕ ಶಾಲೆಯತ್ತ ಕರೆದೊಯ್ದಿತ್ತು. ನಮ್ಮ ತಂಡ ಶಾಲೆಗೆ ಪ್ರವೇಶಿಸಿದಾಗ ಒಬ್ಬ ಹೆಣ್ಣು ಮಗಳು ತರಗತಿ ಕೊಠಡಿಯೊಂದರಲ್ಲಿ ಬಿದ್ದು ಹೊರಳಾಡುತ್ತಿದ್ದಳು. ಮಾತ್ರವಲ್ಲದೆ ಆಕೆ ವಿಚಿತ್ರ ವಾಗಿ ಶಬ್ದ ಮಾಡುತ್ತಾ, ಗುರುಗುಟ್ಟುತ್ತಿದ್ದಳು. ಆಕೆಯ ಸುತ್ತಮುತ್ತ ಆಕೆಯ ಸಹಪಾಠಿಗಳು, ಶಿಕ್ಷಕರು ಹಾಗೂ ಸ್ಥಳೀಯ ಕೆಲವರು ಕುತೂಹಲ ದಿಂದ ಬಾಲಕಿಯ ನಡವಳಿಕೆಗಳನ್ನು ವೀಕ್ಷಿಸುತ್ತಿದ್ದರು. ಕೆಲ ಶಾಲಾ ಬಾಲಕರು ನಗುತ್ತಾ ಗೇಲಿ ಮಾಡುತ್ತಿದ್ದರೆ ಮತ್ತೆ ಕೆಲವರು ವಿದ್ಯಾರ್ಥಿನಿ ಯರು ಬಾಲಕಿಗೆ ಗಾಳಿ ಹಾಕುವುದು, ಮತ್ತೆ ಕೆಲ ನೀರು ಕೊಡು ವುದು ಮೊದಲಾದ ಕೃತ್ಯಗಳಲ್ಲಿ ಮಗ್ನರಾಗಿದ್ದರು. ನಮ್ಮ ತಂಡ ಬಾಲಕಿಯ ಕಿರುಚಾಟ, ನರಳಾಟವನ್ನು ಆಡಿಯೋ ರೆಕಾರ್ಡ್ ಮಾಡಲು ಮುಂದಾ ದೆವು. ಆ ಕಾಲದಲ್ಲಿ ಆಡಿಯೋ ರೆಕಾರ್ಡ್ ಎಂದರೆ ಅದು ಬಹುವಾಗಿ ಅಚ್ಚರಿಯ ವಿಷಯವಾಗಿತ್ತು. ನಾವು ಆಡಿಯೋ ರೆಕಾರ್ಡ್ ಮಾಡುತ್ತಿದ್ದಂತೆ ಮತ್ತೆ ನಾಲ್ಕೈದು ಬಾಲಕಿಯರು ತಲೆತಿರುಗಿ ಬಿದ್ದು, ಅದೇ ತರದಲ್ಲಿವರ್ತಿಸತೊಡಗಿದರು.

ಅವರ ನರಳಾಟ, ಶಬ್ದ, ಅವರ ವಯಸ್ಸು, ಅವರ ಆಂಗಿಕ ವರ್ತನೆ ನನಗೆ ಒಂದು ಅನುಮಾನವನ್ನು ಹುಟ್ಟಿ ಹಾಕಿತ್ತು. ನಾವು ಶಾಲೆಯ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರನ್ನು ಮಾತನಾಡಿಸಿದೆವು. ಆ ಸಂದರ್ಭ ಕೆಲವೊಂದು ವಿಷಯಗಳು ನನ್ನ ಅನುಮಾನಕ್ಕೆ ಸ್ಪಷ್ಟತೆಯನ್ನು ನೀಡಿತು.

ಆ ಶಾಲೆಯಲ್ಲಿ ಹೆಣ್ಣು ಮಕ್ಕಳ ಈ ಸಾಮೂಹಿಕ ವಾಗಿ ಮಕ್ಕಳ ಮೈಮೇಲೆ ಬರುವ ಪ್ರಕರಣ ಸುಮಾರು ಒಂದು ವರ್ಷದ ಮೊದಲು ಅಂದರೆ 1988ರಲ್ಲಿ ಆರಂಭಗೊಂಡಿತ್ತಂತೆ. ಹುಡುಗಿಯೊಬ್ಬಳು ಮರದ ಮೇಲೆ ಚಂದ್ರನಾಕಾರದ ಆಕೃತಿಯೊಂದನ್ನು ನೋಡಿದ್ದಳಂತೆ. ಆಕೆ ಭಯ ಗೊಂಡು ಈ ಬಗ್ಗೆ ತನ್ನ ಸ್ನೇಹಿತೆಯರಲ್ಲಿ ಹೇಳಿಕೊಂಡಿದ್ದಳು. ಅವರೂ ಅದನ್ನು ನೋಡಲು ಮುಂದಾದರು. ಇದಾದ ಬಳಿಕ ಸಾಮೂಹಿಕವಾಗಿ ಆ ಹೆಣ್ಣು ಮಕ್ಕಳು ಉನ್ಮಾದಗೊಳ್ಳುವ, ತಲೆತಿರುಗಿ ಬಿದ್ದು, ವಿಚಿತ್ರವಾಗಿ ವರ್ತಿಸುವ ಸಂಗತಿ ಆರಂಭಗೊಂಡಿತ್ತು.

ಸ್ವಾಭಾವಿಕವಾಗಿ ಈ ಮಕ್ಕಳ ಪೋಷಕರು ತಮ್ಮ ಮಕ್ಕಳ ಈ ವಿಚಿತ್ರ ವರ್ತನೆಯಿಂದ ಕಂಗಾಲಾಗಿದ್ದರು. ಅವರು ನೇರವಾಗಿ ಕಂಡಿದ್ದು, ಭೂತ, ಪ್ರೇತಗಳನ್ನು ಉಚ್ಚಾಟಿಸುವ ಮಂತ್ರವಾದಿಯನ್ನು. ಆತನ ಪ್ರಕಾರ ಆ ಹೆಣ್ಣು ಮಕ್ಕಳಿಗೆ 12 ರೀತಿಯ ಆತ್ಮಗಳು ಆವರಿಸಿಕೊಂಡಿದ್ದವೆಂಬ ಸಬೂಬ ನ್ನು ನೀಡಿ ಆತ ಪೋಷಕರನ್ನು ಮತ್ತಷ್ಟು ಗಾಬರಿಗೊಳಿಸಿದ. ಪೋಷಕರು ಮಂತ್ರವಾದಿ ಹೇಳಿದ್ದನ್ನೆಲ್ಲಾ ಮಾಡಿದರು. ಮಕ್ಕಳ ಮೇಲಿನ ಪ್ರೇತವನ್ನು ಉಚ್ಚಾಟಿಸಲು ಸುದರ್ಶನ ಹೋಮವನ್ನೂ ನಡೆಸಲಾಯಿತು!

ಈ ಸುದರ್ಶನ ಹೋಮದ ಮೂಲಕ ಆ ಎಲ್ಲಾ ಪ್ರೇತಗಳನ್ನು ತಾನು ಮೂರ್ತಿಯನ್ನಾಗಿಸಿ ಅದನ್ನು ಮಡಕೆಯಲ್ಲಿ ಹಾಕಿ ಅದನ್ನು ತೆಗೆದುಕೊಂಡು ಹೋಗುವುದಾಗಿಯೂ ಮಂತ್ರವಾದಿ ನಂಬಿಸಿದ್ದ. ಇದಕ್ಕಾಗಿ ಪೋಷಕರು ಸಾವಿರಾರು ರೂಪಾಯಿಗಳನ್ನು ವ್ಯಯಿಸಿದರು.

ಇದಾಗಿ ಕೆಲ ಸಮಯ ಆ ಶಾಲೆಯು ಮಕ್ಕಳ ಮೈಮೇಲಿನ ಪ್ರೇತ ಕಾಟದಿಂದ ಮುಕ್ತಗೊಂಡಿತ್ತು. ಆದರೆ, ಮತ್ತೆ ಬೇಸಿಗೆಯಲ್ಲಿ ಪ್ರೇತಗಳ ಕಾಟ ಆರಂಭವಾಗಿತ್ತು.

ಆ ಸಂದರ್ಭ ಸ್ಥಳೀಯ ಧಾರ್ಮಿಕ ಗುರುಗಳೊಬ್ಬರು ಗಣಪತಿ ಹೋಮ ಮಾಡುವ ಸಲಹೆ ನೀಡಿದರು. ಅಷ್ಟು ಮಾತ್ರವಲ್ಲ, ದಯಾ ಳುವಾಗಿದ್ದ ಆತ ಈ ಹೋಮವನ್ನು ಉಚಿತವಾಗಿಯೇ ಮಾಡಿಬಿಟ್ಟರು. ಆದರೆ ಈ ಪರಿಹಾರವೂ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಅಂತೂ ಕೊನೆಗೆ ಶಾಲೆಯ 11 ಮಂದಿ ವಿದ್ಯಾರ್ಥಿನಿಯರು ಈ ಪ್ರೇತಗಳ ಕಾಟಕ್ಕೆ ತುತ್ತಾಗಿದ್ದರು. ಕೆಲ ಪೋಷಕರು ಈ ಸಂಗತಿಯಿಂದ ಆತಂಕಗೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸಿದರು.

ನಮ್ಮ ತನಿಖೆಯು ಇದೊಂದು ಸರಳ ಪ್ರಕರಣವೆಂಬುದನ್ನು ದೃಢಪಡಿಸಿತ್ತು. ಇದೊಂದು ಮಾನಸಿಕ ಕಾಯಿಲೆ ಎಂಬುದನ್ನು ನಮ್ಮ ತಂಡ ಅರಿತುಕೊಂಡಿತ್ತು. ನಮ್ಮ ತಂಡದ ಮಾನಸಿಕ ತಜ್ಞರು ಇದನ್ನು ಬಗೆಹರಿಸುವುದಾಗಿಯೂ ಹೇಳಿದ್ದರು. ಆದರೆ ಸ್ಥಳೀಯರಲ್ಲಿ ವಿಚಾರಿಸಿದಾಗ, ಅದಾಗಲೇ ಮಾನಸಿಕ ತಜ್ಞರೊಬ್ಬರು ಈ ಕಾಯಿಲೆಗೆ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದ್ದಾಗಿ ತಿಳಿಸಿದರು.

ನಮ್ಮ ಆಡಿಯೋ ತನಿಖೆ ಹಾಗೂ ವಿಚಾರಣಾ ತನಿಖೆಯ ಸಂದರ್ಭ ನಾವು ಕಂಡುಕೊಂಡ ವಿಚಾರವೆಂದರೆ ಆ ಶಾಲೆಗೆ ಒಂದು ವರ್ಷದ ಹಿಂದೆ ಅಂದರೆ, ಈ ಪ್ರೇತಗಳ ಕಾಟ ಆರಂಭವಾಗುವ ಕೆಲ ಸಮಯದ ಹಿಂದೆ ನೂತನವಾಗಿ ದೈಹಿಕ ಶಿಕ್ಷಕರೊಬ್ಬರು ನೇಮಕಗೊಂಡಿದ್ದರು. ಅವರು ಹೆಣ್ಣು ಮಕ್ಕಳ ಜತೆ ಸಲುಗೆ ವಹಿಸುತ್ತಿದ್ದರು ಎಂಬ ಸಂಗತಿಯೂ ನಮಗೆ ತಿಳಿದು ಬಂತು. ಅವರು ಶಾಲೆಗೆ ನೇಮಕವಾದ ಬಳಿಕವೇ ಈ ಸಮಸ್ಯೆ ಆರಂಭವಾಗಿರುವುದಾಗಿತ್ತು. ಹಾಗಾಗಿ ಮುಗ್ಧ ಸುಂದರ ಬಾಲಕಿಯರ ಮಾನಸಿಕ ತೊಳಲಾಟ ಏನೆಂಬುದು ನಾವು ಬಹುತೇಕವಾಗಿ ಅರ್ಥಮಾಡಿಕೊಂಡಿದ್ದೆವು.

ನಮ್ಮ ವಿಚಾರಣೆಯ ಸಂದರ್ಭ ಹೆಣ್ಣು ಮಕ್ಕಳು ಯಾರೂ ಯಾವುದೇ ವಿಷಯವನ್ನು ಬಿಚ್ಚಿಡಲು ಮುಂದೆ ಬರಲಿಲ್ಲ. ಗಂಡು ಮಕ್ಕಳು ಕೇವಲ ನಗುವಿನ ಮೂಲಕವೇ ನಮಗೆ ಅವರ ಅಂತರಂಗವನ್ನು ತೆರೆದಿಟ್ಟಿದ್ದರು. ಇದು ಹದಿಹರೆಯದ ಮಕ್ಕಳ ಮಾನಸಿಕ ತೊಳಲಾಟದ ಸೂಕ್ಷ್ಮ ವಿಚಾರವಾದ್ದರಿಂದ ಸಮಸ್ಯೆ ಏನೆಂಬುದು ನಮಗೆ ಸ್ಪಷ್ಟವಾಗಿತ್ತು.

ಈ ವಿಚಾರವನ್ನು ನಾನು ಸ್ಥಳೀಯರಿಗೆ ಭರವಸೆ ನೀಡಿದ್ದ ಮಾನಸಿಕ ತಜ್ಞರ ಗಮನಕ್ಕೂ ತಂದಿದ್ದೆ. ಅವರೂ ಆ ವಿಚಾರವನ್ನೇ ನನ್ನ ಬಳಿ ಹೇಳಿ ಕೊಂಡರು. ಬಳಿಕ ಕೆಲ ಸಮಯದ ನಂತರ ಶಾಲೆಯ ಹೊಸ ದೈಹಿಕ ಶಿಕ್ಷಕ ರನ್ನು ಶಾಲೆಯಿಂದ ತೆಗೆದುಹಾಕಲಾಯಿತು. ಅದಾದ ಬಳಿಕ ಶಾಲೆಯಲ್ಲಿನ ಹೆಣ್ಣು ಮಕ್ಕಳ ಮೇಲಿನ ಪ್ರೇತದ ಕಾಟವೂ ನಿಂತು ಹೋಯಿತು.

ಕೆಲವೊಂದು ಸಂದರ್ಭಗಳಲ್ಲಿ ಮುಗ್ಧ ಮನಸ್ಸಿನ ಮೇಲೆ ಸಣ್ಣ ಪುಟ್ಟ ವಿಚಾರಗಳು ಅಗಾಧವಾದ ಪರಿಣಾಮವನ್ನು ಬೀರಬಲ್ಲವು. ಮುಗ್ಧ ಮನಸ್ಸು ಅದನ್ನು ಹೇಳಿಕೊಳ್ಳಲಾಗದೆ, ಸಹಿಸಲಾಗದೆ ಈ ರೀತಿಯ ವಿಚಿತ್ರ ವರ್ತನೆಗೆ ಗುರಿಯಾಗುವುದು ಕೂಡಾ ಒಂದು ರೀತಿಯ ಮಾನಸಿಕ ಕಾಯಿಲೆ. ಈ ಕಾಯಿಲೆಗೆ ಆಪ್ತ ಸಮಾಲೋಚನೆಯ ಮೂಲಕ ಔಷಧಿಯನ್ನು ಒದಗಿಸಬಹುದು. ಇಲ್ಲವಾದಲ್ಲಿ, ಮುಗ್ಧ ಮಕ್ಕಳ ಮೇಲೆ ಗಂಭೀರವಾದ ಪರಿಣಾಮವನ್ನೂ ಬೀರಬಲ್ಲವು. ಇದೇನೋ, ತಂತ್ರಜ್ಞಾನ ಅಷ್ಟಾಗಿ ವ್ಯಾಪಕವಾಗಿ ಬೆಳೆದಿರದ ಸಮಯದಲ್ಲಿ, ಮೂಢನಂಬಿಕೆಯನ್ನೇ ಬಂಡವಾಳವಾಗಿಸಿ, ಕೆಲವರು ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಕಾಲದಲ್ಲಿ ನಡೆದಿರುವ ಸಂಗತಿಯೆಂದು ನಾವು ಭಾವಿಸುವಂತಿಲ್ಲ. ವಿಜ್ಞಾನ ಯುಗದಲ್ಲೂ ಈ ರೀತಿಯ ಮಾನಸಿಕ ತೊಳಲಾಟದಿಂದ ಬಳಲುವ ಮುಗ್ಧ ಮನಸ್ಸುಗಳಿವೆ. ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು. ತಮ್ಮ ಮಕ್ಕಳ ಪ್ರತಿಯೊಂದು ವಿಷಯಗಳ ಬಗ್ಗೆಯೂ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು. ಬೆಳೆಯುತ್ತಿರುವಂತೆ ಅವರ ದೇಹದಲ್ಲಾಗುವ ಬದಲಾವಣೆಗಳು, ಅವರ ಮನಸ್ಸಿನ ಮೇಲೂ ವಿಭಿನ್ನ ರೀತಿಯ ತಲ್ಲಣ, ಆತಂಕ, ಭಯ, ಕುತೂಹಲಗಳಿಗೆ ಎಡೆ ಮಾಡಿಕೊಡುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ತಮ್ಮ ಮೇಲೆ ಹಲ್ಲೆ, ದೌರ್ಜನ್ಯ, ಅಸಹಜ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಅದನ್ನು ಹೇಳಿಕೊಳ್ಳಲಾಗದೆ ಆ ಮುಗ್ಧ ಮನಸ್ಸುಗಳು ಕಮರಿ ಹೋಗುತ್ತವೆ. ನಮ್ಮ ಸುತ್ತ ಇಂತಹ ಪ್ರಕ್ರಿಯೆಗಳು ತಮ್ಮವರೆಂದೇ ತಿಳಿದ ಪೋಷಕರು, ಬಂಧು ಬಳಗದವರು ಅಥವಾ ಗುರು ದೇವೋಭವ ಎಂದು ಪೂಜಿಸುವವರಿಂದಲೂ ನಡೆಯುತ್ತಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಈ ಬಗ್ಗೆ ಎಚ್ಚರ ಅತೀ ಅಗತ್ಯ.

ಮುಂದುವರಿಯುವುದು

Writer - ನರೇಂದ್ರ ನಾಯಕ್

contributor

Editor - ನರೇಂದ್ರ ನಾಯಕ್

contributor

Similar News