ಸಿಎಂ ನಗರ ಪ್ರದಕ್ಷಿಣೆ : ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿಎಂ
ಬೆಂಗಳೂರು,ಆ. 5: ಗಡುವು ನೀಡಿದ್ದ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸದ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಶನಿವಾರ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ.ಜಿ.ರಸ್ತೆಯಲ್ಲಿರುವ ದಕ್ಷಿಣ ಪರೇಡ್ ಚರ್ಚ್ ವೃತ್ತದಲ್ಲಿ ಪಾದಚಾರಿ ಮಾರ್ಗದ ಮೇಲ್ದರ್ಜೆ ಕಾಮಗಾರಿ, ಚರ್ಚ್‌ಸ್ಟ್ರೀಟ್‌ನಲ್ಲಿ ಟೆಂಡರ್‌ಶ್ಯೂರ್ ರಸ್ತೆ ಕಾಮಗಾರಿ ಸೇರಿದಂತೆ ನಗರೋತ್ಥಾನ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರೀಶಿಲಿಸಿದರು.
ಕಳೆದ ವರ್ಷ ನಗರ ಪ್ರದಕ್ಷಿಣೆ ಕೈಗೊಂಡಿದ್ದಾಗ ನಗರೋತ್ಥಾನ ಯೋಜನೆಯಡಿ ಆಗಸ್ಟ್ ತಿಂಗಳಾಂತ್ಯದೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಕಾಮಗಾರಿಗಳನ್ನು ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ವಿಳಂಬವಾಗಿರುವ ಟೆಂಡರ್ ಶ್ಯೂರ್ ಕಾಮಗಾರಿ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನವೆಂಬರ್ ತಿಂಗಳೊಳಗೆ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚರ್ಚ್ ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಉಭಯಕುಶಲೋಪರಿ ವಿಚಾರಿಸಿದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂಗೆ ಭೇಟಿ ನೀಡಿ ಅಲ್ಲಿ ಕಾವೇರಿ ರಾಜಗಂಧದ ನೂತನ ಅಗರಬತ್ತಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ ಅಲ್ಲಿನ ಕರಕುಶಲ ಕೃತಿಗಳನ್ನು ವಿಕ್ಷೀಸಿದರು.
ಅಲ್ಲಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡುಗೋಡಿಯ ಕೋತಲಪ್ಪ ಗಾರ್ಡನ್‌ನಲ್ಲಿರುವ ರಾಜುಕಾಲುವೆ ಕಾಮಗಾರಿ ವಿಕ್ಷೀಸಿದರು. ನಂತರ ಮೇಸ್ತ್ರಿ ಪಾಳ್ಯದಲ್ಲಿರುವ ಕೆರೆಯ ಅಭಿವೃದ್ಧಿ ಮತ್ತು ಕೆರೆಗೆ ಹೊಂದಿಕೊಂಡಂತಿರುವ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನ್ನು ವಿಕ್ಷೀಸಿದರು. ಸದರಿ ಕಾಮಗಾರಿಗಳನ್ನು ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸುವಂತೆ ಮುಖ್ಯ ಎಂಜಿನಿಯರ್‌ಗಳಿಗೆ ಸೂಚಿಸಿದರು.
ರಾಜೇಂದ್ರ ನಗರ ಸ್ಲಂನಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಾಣ ಮಾಡುತ್ತಿರುವ 625 ಒಂಟಿ ಮನೆಗಳ ಪೈಕಿ ಸಾಂಕೇತಿಕವಾಗಿ ಒಂದು ಮನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೊಳಗೇರಿ ನಿವಾಸಿಗಳಿಗೆ ವಸತಿ ಕಲ್ಪಿಸಲು ಸರಕಾರದ ವತಿಯಿಂದ ಐದು ಲಕ್ಷ ರೂಗಳಲ್ಲಿ 4.50 ಲಕ್ಷ ರೂ. ಅನುದಾನ ನೀಡಲಾಗುವುದು. ಉಳಿದ 50 ಸಾವಿರ ಹಣವನ್ನು ಫಲಾನುಭವಿಗಳು ಭರಿಸಬೇಕು ಎಂದು ಹೇಳಿದರು. ನಂತರ ದಾಲ್ಮಿಯಾ ಜಂಕ್ಷನ್ ಬಳಿ ಮೇಲ್ಸೆತುವೆ ಹಾಗೂ ಎಸ್‌ಡಬ್ಲುಡಿ ಕಾಮಗಾರಿಯನ್ನು ವೀಕ್ಷಿಸಿದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿಯ ಎಸ್‌ಡಬ್ಲುಡಿ ಕಾಮಗಾರಿ ಹಾಗೂ ಕನಕಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಪರಿಶೀಲಿಸಿ ಆದಷ್ಟೂ ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.
ನಗರ ಪ್ರದಕ್ಷಿಣೆ ವೇಳೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎನ್.ಎ.ಹಾರಿಸ್, ಆರ್.ವಿ.ದೇವರಾಜ್, ಮೇಯರ್ ಪದ್ಮಾವತಿ, ಉಪಮೇಯರ್ ಆನಂದ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.
ಸಹಾಯಕ ಎಂಜಿನಿಯರ್ ಅಮಾನತಿಗೆ ಆದೇಶ
ಎಚ್‌ಎಸ್‌ಆರ್ ಬಡಾವಣೆಯ ನಾಲ್ಕನೇ ಸೆಕ್ಟರ್‌ನಲ್ಲಿರುವ ಸ್ವಾಭಿಮಾನಿ ಉದ್ಯಾನವನದ ಸುತ್ತಮುತ್ತ ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ಅವರನ್ನು ಅಮಾನತುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ನಗರ ಪ್ರದಕ್ಷಿಣೆಯ ಅಂಗವಾಗಿ ಸ್ವಾಭಿಮಾನಿ ಉದ್ಯಾನದ ಪ್ರಗತಿಯ ಪರಿಶೀಲನೆಯ ವೇಳೆ ಸ್ಥಳೀಯ ನಿವಾಸಿಗಳು ನಿಯಮ ಉಲ್ಲಂಘಿಸಿ ವಸತಿ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಬಳಿ ದೂರಿದರು.
ಈ ವೇಳೆ ಅಲ್ಲಿಯೇ ಇದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ಅವರನ್ನು ಕಂಡು ಕೆಂಡಾಮಂಡಲರಾದರು. ವೆಂಕಟೇಶ್‌ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಲು ಬಿಬಿಎಂಪಿ ಆಯುಕ್ತರಿಗೆ ಸ್ಥಳದಲ್ಲೇ ಆದೇಶ ನೀಡಿದರು.