ಆ.8ರಂದು ಬೆಂಗಳೂರಿನಿಂದ ತೆರಳಲಿರುವ ಹಜ್ ಯಾತ್ರಾರ್ಥಿಗಳು
ಬೆಂಗಳೂರು, ಆ.5: ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆ ಕೈಗೊಳ್ಳುತ್ತಿರುವ ಯಾತ್ರಿಗಳ ತಂಡವು ಆ.8ರಂದು ಮಧ್ಯರಾತ್ರಿ 3.50ಕ್ಕೆ ಪ್ರಯಾಣ ಆರಂಭಿಸಲಿದೆ ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ತಿಳಿಸಿದ್ದಾರೆ.
ಶನಿವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್‌ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.7ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿರುವ ಯಾತ್ರಿಗಳ ಮೊದಲ ತಂಡಕ್ಕೆ ಬೀಳ್ಕೊಡಲಿದ್ದಾರೆ. ಹಜ್ ಸಚಿವ ರೋಷನ್‌ಬೇಗ್ ಸ್ವಾಗತ ಭಾಷಣ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬೆಂಗಳೂರು ವಿಮಾನ ನಿಲ್ದಾಣದಿಂದ ಆ.8 ರಿಂದ 21ರವರೆಗೆ ಸುಮಾರು 340 ರಿಂದ 344 ಯಾತ್ರಿಗಳ ತಂಡವು 14 ವಿಮಾನಗಳ ಮೂಲಕ ಪ್ರಯಾಣ ಬೆಳೆಸಲಿದೆ. ಈಗಾಗಲೆ ಮಂಗಳೂರು ಹಾಗೂ ಗೋವಾ ವಿಮಾನ ನಿಲ್ದಾಣಗಳ ಹಜ್‌ಯಾತ್ರಿಗಳ ವಿಮಾನಗಳು ಸೌದಿ ಅರೇಬಿಯಾ ತಲುಪಿವೆ ಎಂದು ಅವರು ಹೇಳಿದರು.
ರಾಜ್ಯದಿಂದ ಈ ಬಾರಿ 5990 ಯಾತ್ರಿಗಳು ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕಾರಣಗಳಿಂದಾಗಿ ಅಷ್ಟು ಮಂದಿ ಹೋಗಲು ಸಾಧ್ಯವಾಗಿಲ್ಲ. ಈ ನಡುವೆ ನಿರೀಕ್ಷಣಾ ಪಟ್ಟಿಯಲ್ಲಿದ್ದ 650 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಯಾತ್ರಿಗಳಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಫರಾಝ್‌ಖಾನ್ ತಿಳಿಸಿದರು.
ಕೇಂದ್ರ ವಿಮಾನಯಾನ ಸಚಿವಾಲಯದ ನೀತಿಯನ್ವಯ ಈ ಬಾರಿ ಎಮಿಗ್ರೇಷನ್ ಪ್ರಕ್ರಿಯೆ ಹಜ್‌ಭವನದ ಬದಲು ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಹಜ್ ಟರ್ಮಿನಲ್‌ನಲ್ಲಿ ನಡೆಯಲಿದೆ. ರಾಜ್ಯ ಹಜ್ ಸಮಿತಿಯ ಅಧಿಕಾರಿಗಳು, ಸದಸ್ಯರು, ಸ್ವಯಂಸೇವಕರ ತಂಡವು ಯಾತ್ರಿಗಳಿಗೆ ಎಮಿಗ್ರೇಷನ್ ಸಂದರ್ಭದಲ್ಲಿ ಅಗತ್ಯ ಮಾರ್ಗದರ್ಶನ ನೀಡಲಿದೆ ಎಂದು ಅವರು ಹೇಳಿದರು.
ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಆಂಧ್ರಪ್ರದೇಶದ ಅನಂತಪುರ ಹಾಗೂ ಚಿತ್ತೂರು ಜಿಲ್ಲೆಯ ಯಾತ್ರಿಗಳು ಸೇರಿದಂತೆ ನಮ್ಮ ರಾಜ್ಯದ ಬಾಗಲಕೋಟೆ, ಬಿಜಾಪುರ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಗದಗ, ಕೋಲಾರ, ದಾವಣಗೆರೆ, ರಾಮನಗರ, ಹಾವೇರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಯಾತ್ರಿಗಳು ತೆರಳಲಿದ್ದಾರೆ ಎಂದು ಸರ್ಫರಾಝ್‌ಖಾನ್ ತಿಳಿಸಿದರು.
ಯಾತ್ರಿಗಳು ಹಜ್‌ಭವನದಲ್ಲಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡ ಕೂಡಲೆ ಅವರಿಗೆ ಸೌದಿ ಅರೇಬಿಯಾದ ಸಿಮ್‌ಕಾರ್ಡ್ ನೀಡಲಾಗುವುದು. ಅದಕ್ಕಾಗಿ ಯಾತ್ರಿಗಳು ತಮ್ಮ ವೀಸಾ ಹಾಗೂ ಪಾಸ್‌ಪೋರ್ಟ್‌ನ ಝೆರಾಕ್ಸ್ ಪ್ರತಿಯನ್ನು ನೀಡಬೇಕು. ಅಲ್ಲದೆ, ವ್ಯಾಕ್ಸಿನೇಷನ್ ಕಾರ್ಡ್‌ನ್ನು ತಮ್ಮ ಜೊತೆಯಲ್ಲೆ ಇರಿಸಿಕೊಂಡಿರಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಜ್ ತರಬೇತಿ ಶಿಬಿರದ ಸಂಚಾಲಕ ಎಜಾಝ್‌ಅಹ್ಮದ್, ಸ್ವಯಂ ಸೇವಕರ ತಂಡದ ಮುಖ್ಯಸ್ಥ ರೂಮಾನ್‌ಬೇಗ್, ಮುಖಂಡರಾದ ಆಝಮ್ ಶಾಹಿದ್, ಸನಾವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.