ಕನ್ನಡದ ವಿಚಿತ್ರ ಲಿಪಿಯ ಸಮಸ್ಯೆಯ ಪರಿಹಾರಕ್ಕಾಗಿ ‘ಆಸ್ಕಿ’ಯಿಂದ ‘ಯುನಿಕೋಡ್’ನತ್ತ ಪಯಣ

Update: 2017-08-06 08:11 GMT

ನಿಮಗೆ ಬಂದಿರುವ ಇ-ಮೇಯ್ಲ ಅಟ್ಯಾಚ್‌ಮೆಂಟ್‌ನ್ನು ಓದಿ, ನಿಮ್ಮ ಅಭಿಪ್ರಾಯವನ್ನು ಫೋನ್‌ನಲ್ಲೇ ತಿಳಿಸುವ ತುರ್ತು ಸಂದರ್ಭ ಬಂದಿದೆ ಎಂದಿಟ್ಟುಕೊಳ್ಳಿ. ಮನೆಗೆ ಅಥವಾ ಕಚೇರಿಗೆ ಹೋಗಿ ಕಂಪ್ಯೂಟರ್ ತೆರೆದು ಓದುವ ಬದಲಾಗಿ, ಪ್ರಯಾಣದಲ್ಲಿರುವಾಗಲೇ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಇ-ಮೇಯ್ಲಾ ಅಟ್ಯಾಚ್‌ಮೆಂಟ್ ಫೈಲ್‌ನ್ನು ತೆರೆದರೆ ಅಲ್ಲಿ ಓದಲಾಗದ ವಿಚಿತ್ರಲಿಪಿಯ ದರ್ಶನವಾಗುತ್ತದೆ. ಇದೇನಿದು ಎಂದು ಗಲಿಬಿಲಿಗೊಳ್ಳುವ ನೀವು, ಅದನ್ನು ಕಳುಹಿಸಿದ ಸ್ನೇಹಿತನಿಗೆ ಫೋನ್ ಮಾಡಿ ಕೇಳುತ್ತೀರಿ. ಅತ್ತಕಡೆಯಿಂದ ಬರುವ ಉತ್ತರ ಹೀಗಿರುತ್ತದೆ: ‘‘ಓ... ನಾನು ಕಂಪ್ಯೂಟರ್‌ನಲ್ಲಿರೋ ‘ನುಡಿ’ ತಂತ್ರಾಂಶ ಬಳಸಿ ಕನ್ನಡದಲ್ಲಿ ಟೈಪ್‌ಮಾಡಿ ಕಳುಹಿಸಿದ್ದೇನೆ. ಪ್ರಿಂಟ್ ಮಾಡೋಕೆ ಡಿ.ಟಿ.ಪಿ.ಯವರಿಗೆ ಕೊಟ್ಟು ಡಿಸೈನ್ ಮಾಡಿಸಬೇಕು. ಅದಕ್ಕೇ ‘ನುಡಿ ಬಳಸಿ ‘ಎಂ.ಎಸ್.ವರ್ಡ್‌ನಲ್ಲಿ ಟೈಪ್ ಮಾಡಿದ್ದೀನಿ. ನೀನು ಕಂಪ್ಯೂಟರ್‌ನಲ್ಲೇ ಅದನ್ನು ಓದಬೇಕು. ಸ್ಮಾರ್ಟ್ ಫೋನ್‌ನಲ್ಲಿ ಓದಲಾಗೋಲ್ಲ’’. ಇದೇನಿದು ಕನ್ನಡದ ಸಮಸ್ಯೆ ಎಂದು ನೀವು ತಲೆಕೆಡಿಸಿಕೊಳ್ಳುತ್ತೀರಿ.

ಸ್ಮಾರ್ಟ್‌ಫೋನ್‌ಗೊಂದು ಕನ್ನಡ, ಕಂಪ್ಯೂಟರಿಗೊಂದು ಕನ್ನಡ ಇದೆ ಯೇನು? ಎಂಬ ಜಿಜ್ಞಾಸೆಯೂ ಆರಂಭಗೊಳ್ಳಬಹುದು.

ಇದು ಕನ್ನಡದ ಸಮಸ್ಯೆ ಅಲ್ಲ. ಇದು ಕನ್ನಡ ಲಿಪಿಯನ್ನು ವಿದ್ಯುನ್ಮಾನ ಉಪಕರಣಗಳಲ್ಲಿ ಅಳವಡಿಸುವ ಎನ್‌ಕೋಡಿಂಗ್ ಸಮಸ್ಯೆ. ASCII-

ಆಸ್ಕಿ, (ಅಮೆರಿಕನ್ ಸ್ಟ್ಯಾಂಡರ್ಡ್ ಕೋಡ್ ಫಾರ್ ಇನ್‌ಫರ್ಮೇಷನ್‌ಇಂಟರ್‌ಚೇಂಚ್) ಎಂಬ ಹಳೆಯ ಎನ್‌ಕೋಡಿಂಗ್ ಶಿಷ್ಟತೆ (ಸ್ಟ್ಯಾಂಡ ರ್ಡ್) ಮತ್ತು ಯುನಿಕೋಡ್ ಎಂಬ ಹೊಸ ಎನ್‌ಕೋಡಿಂಗ್ ಶಿಷ್ಟತೆ - ಎರಡೂ ವ್ಯವಸ್ಥೆಗಳನ್ನು ಕಂಪ್ಯೂಟರ್ ಪ್ರತ್ಯೇಕವಾಗಿ ಗುರುತಿಸುತ್ತದೆ. ಆದರೆ, ಸ್ಮಾರ್ಟ್ ಫೋನುಗಳು ಕೇವಲ ಯುನಿಕೋಡ್ ವ್ಯವಸ್ಥೆಯನ್ನು ಮಾತ್ರವೇ ಗುರುತಿಸುತ್ತವೆಯೇ ಹೊರತು ಹಳೆಯ ‘ಆಸ್ಕಿ’ ಅದಕ್ಕೆ ಅರ್ಥವಾಗುವುದಿಲ್ಲ. ‘ಯುನಿಕೋಡ್’ ಎಂಬುದು ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ವಿಶ್ವದ ಬಹುತೇಕ ಎಲ್ಲಾ ಭಾಷೆಗಳಿಗಾಗಿ ಇರುವ ಹೊಸ ಎನ್‌ಕೋಡಿಂಗ್ ಶಿಷ್ಟತೆ (ಸ್ಟ್ಯಾಂಡರ್ಡ್). ಕನ್ನಡದ ಯುನಿಕೋಡ್ ಎನ್‌ಕೋಡಿಂಗ್‌ನ್ನೂ ಸಹ ಕಂಪ್ಯೂಟರುಗಳು ತಕ್ಷಣಕ್ಕೆ ತಾವಾಗಿಯೇ ಗುರುತಿಸುತ್ತವೆ. ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಕನ್ನಡವು ಕನ್ನಡ ಲಿಪಿಯಾಗಿಯೇ ಮೂಡುತ್ತದೆ. ಆದರೆ, ಫಾಂಟ್ ಹೆಸರನ್ನು ಆಯ್ಕೆ ಮಾಡಿಕೊಂಡರೆ ಮಾತ್ರವೇ ಆಸ್ಕಿ-ಪಠ್ಯವು ಕನ್ನಡದಲ್ಲಿ ಕಾಣುತ್ತದೆ. ಇಲ್ಲವಾದರೆ ಮತ್ತದೇ ವಿಚಿತ್ರಲಿಪಿಯಾಗಿ ಕಾಣುತ್ತದೆ. ಕನ್ನಡಕ್ಕೆ ಪ್ರತ್ಯೇಕ ಸ್ಥಾನಮಾನವಿರದಿದ್ದ ಸಂದರ್ಭದಲ್ಲಿ, ಬೇರೆ ಯೂರೋಪಿಯನ್ ಭಾಷೆಗಳ ಅಕ್ಷರಗಳ ಮೇಲೆ ಕನ್ನಡದ ಅಕ್ಷರಗಳನ್ನು ಇರಿಸಿ ಬಳಸುವ ಕಾರ್ಯತಂತ್ರವೇ ಇದಕ್ಕೆ ಕಾರಣ. ಕನ್ನಡದ ಬಹುತೇಕ ಹಳೆಯ ಲಿಪಿತಂತ್ರಾಂಶಗಳು ಇಂತಹ ಕಾರ್ಯತಂತ್ರವನ್ನು ಹೊಂದಿರುವಂಥ ತಂತ್ರಾಂಶಗಳೇ. ‘ನುಡಿ’ ಅಥವಾ ‘ಬರಹ’ ಇತ್ಯಾದಿಗಳನ್ನು ಬಳಸಿ ಆಸ್ಕಿ ಫಾಂಟ್‌ಗಳಲ್ಲಿ ಟೈಪ್ ಮಾಡಲಾದ ಕನ್ನಡವಾಗಿದ್ದರೆ ಅದು ಸ್ಮಾರ್ಟ್ ಫೋನ್‌ಗಳಲ್ಲಿ ವಿಚಿತ್ರಲಿಪಿಯಾಗಿ (ಜಂಕ್ ಕ್ಯಾರೆಕ್ಟರ್‌ಗಳಾಗಿ) ಕಾಣುವುದು ಸಹಜ. ನಮಗೆ ಬೇಕಾದ ಹಲವಾರು ಫಾಂಟ್‌ಗಳನ್ನು ಕಂಪ್ಯೂಟರ್‌ನಲ್ಲಿ ನಾವೇ ಇನ್‌ಸ್ಟಾಲ್ ಮಾಡಿಕೊ ಳ್ಳುವ ರೀತಿ ಸ್ಮಾರ್ಟ್‌ಫೋನ್‌ಗೆ ಫಾಂಟ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅವಕಾಶವಿಲ್ಲ. ಕಂಪ್ಯೂಟರ್ ಬಳಸಿ ಟೈಪ್ ಮಾಡಲಾದ ಕನ್ನಡದ ಆಸ್ಕಿ- ಪಠ್ಯವನ್ನು ಬೇರೊಬ್ಬರಿಗೆ ಕಳುಹಿಸಬೇಕಾದಾಗ, ಅದನ್ನು ಪಿಡಿಎಫ್ (ಪೋರ್ಟಬಲ್ ಡಾಕ್ಯುಮೆಂಟ್ ಫಾರ್‌ಮ್ಯಾಟ್) ನಮೂನೆಗೆ ಪರಿವ ರ್ತಿಸಿ ಕಳುಹಿಸುವುದು ಒಳ್ಳೆಯದು. ಫೈಲ್‌ನ್ನು ಪಿಡಿಎಫ್‌ಗೆ ಪರಿವರ್ತಿಸಿ ದಾಗ ಪಠ್ಯದೊಂದಿಗೆ ಫಾಂಟ್‌ಗಳೂ ಸಹ ಜೋಡಣೆಗೊಳ್ಳುವ (ಎಂಬೆಡ್) ಕಾರಣ ಕನ್ನಡಲಿಪಿಯಲ್ಲಿಯೇ ಪಠ್ಯವನ್ನು ಎಲ್ಲಿಯಾದರೂ ಓದಬಹುದು.

ಡಿ.ಟಿ.ಪಿ. ತಂತ್ರಾಂಶಗಳಾದ ಕೋರಲ್ ಡ್ರಾ, ಇನ್‌ಡಿಸೈನ್ ಇತ್ಯಾದಿ ಗಳಲ್ಲಿ ಯುನಿಕೋಡ್ ಬೆಂಬಲವು ಇನ್ನೂ ಸಮರ್ಪಕವಾಗಿ ದೊರೆಯ ದಿರುವ ಕಾರಣ, ಮುದ್ರಣದ ಕೆಲಸಗಳಿಗಾಗಿ ಆಸ್ಕಿ-ಶಿಷ್ಟತೆಯು ಇಂದಿಗೂ ಅನಿವಾರ್ಯವಾಗಿದೆ. ಆದ್ದರಿಂದ ಆಸ್ಕಿ-ಫಾಂಟುಗಳು ಇಂದಿಗೂ ಬಳಕೆಯಲ್ಲಿವೆ. ಡಿ.ಟಿ.ಪಿ.ಗೆಂದೇ ಟೈಪ್ ಮಾಡಲಾದ ಕನ್ನಡದ ಪಠ್ಯವನ್ನು ಬೇರೆ ಬೇರೆ ಇಲೆಕ್ಟ್ರಾನಿಕ್ ಉಪಕರಣಗಳ ಮೂಲಕ ವಿನಿಮಯ ಮಾಡಿಕೊಂಡಾಗಲೇ ಇಂತಹ ವಿಚಿತ್ರ ಲಿಪಿಯ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ, ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳ ನಡುವೆ ಒಂದೇ ಕನ್ನಡ ಪಠ್ಯವನ್ನು ಬಳಸಿಕೊಳ್ಳಲು ಯುನಿಕೋಡ್ ಶಿಷ್ಟತೆಯಿರುವ ಫಾಂಟುಗಳನ್ನು ಬಳಸುವುದು ಸೂಕ್ತ ಮತ್ತು ಅನಿವಾರ್ಯ. ಹಾಗಾದರೆ, ಈಗಾಗಲೇ ಟೈಪ್ ಮಾಡಲಾಗಿರುವ ಪಠ್ಯವನ್ನು ಯುನಿಕೋಡ್ ಫಾಂಟ್ ಬಳಸಿ ಮತ್ತೆ ಟೈಪ್ ಮಾಡಬೇಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ. ಅದರ ಅಗತ್ಯವಿಲ್ಲ. ಪರಿವರ್ತಕ ತಂತ್ರಾಂಶಗಳನ್ನು (ಕನ್‌ವರ್ಟರ್ಸ್‌) ಬಳಸಿ ಅದೇ ಪಠ್ಯವನ್ನು ಪರಿವರ್ತಿಸಬಹುದು. ಅಂತರ್ಜಾಲದಲ್ಲಿ ಪರಿವರ್ತಕ ತಂತ್ರಾಂಶಗಳು ಲಭ್ಯ. ಕನ್ನಡದ ಆಸ್ಕಿ-ಪಠ್ಯವನ್ನು ಯುನಿಕೋಡ್‌ಗೆ ಪರಿವರ್ತಿಸುವ ಆನ್‌ಲೈನ್ ಸೌಲಭ್ಯವೂ ಇದೆ.

ಯುನಿಕೋಡ್ ಕನ್ನಡ ಪಠ್ಯವನ್ನು ಅಂತರ್ಜಾಲದಲ್ಲಿ ಹುಡುಕುವುದು ಸುಲಭ. ‘‘ಆಸ್ಕಿ-ಎನ್‌ಕೋಡಿಂಗ್’’ ಇರುವ ಕನ್ನಡ ಪಠ್ಯವನ್ನು ಸರ್ಚ್ ಇಂಜಿನ್‌ಗಳು ಸಮರ್ಥವಾಗಿ ಹುಡುಕಿಕೊಡುವುದಿಲ್ಲ. ಆದ್ದರಿಂದ, ಜಾಲತಾಣಗಳಲ್ಲಿ ಇರಿಸಲಾಗುವ ಕನ್ನಡದ ಮಾಹಿತಿಗಳು ಯುನಿಕೋಡ್‌ನಲ್ಲಿರುವುದು ಅತ್ಯವಶ್ಯಕ. ಕನ್ನಡದ ಭಾಷಾ ಬಳಕೆಯ ಎಲ್ಲಾ ತಾಂತ್ರಿಕ ಮತ್ತು ತಂತ್ರಜ್ಞಾನೀಯ ಸಮಸ್ಯೆಗಳಿಂದ ಹೊರಬರಲು ‘‘ಹಳೆಯ ಆಸ್ಕಿ-ಫಾಂಟುಗಳನ್ನು ಬಿಟ್ಟು ಹೊಸ ಯುನಿಕೋಡ್ ಫಾಂಟುಗಳೆಡೆಗೆ’’ ಹೊರಳಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

Writer - ಸತ್ಯನಾರಾಯಣ ಕೆ.

contributor

Editor - ಸತ್ಯನಾರಾಯಣ ಕೆ.

contributor

Similar News