ದಿಲ್ಲಿ ದರ್ಬಾರ್

Update: 2017-08-05 18:32 GMT

ಶರದ್ ಯಾದವ್ ಚಿತ್ತ ಎತ್ತ?
ಬಿಹಾರ ರಾಜಕೀಯ ವಿವಾದದ ದೂಳೆಬ್ಬಿಸಿದೆ. ಆದರೆ ಜೆಡಿಯು ಸಂಸದ ಹಾಗೂ ಅಸಂತೃಪ್ತ ನಾಯಕ ಶರದ್ ಯಾದವ್ ಭವಿಷ್ಯಕ್ಕೆ ಇನ್ನೂ ಬೇಡಿಕೆ ಇದೆ. ಆರ್‌ಜೆಡಿ ನಾಯಕರಾದ ರಘುವಂಶ ಪ್ರಸಾದ್ ಸಿಂಗ್ ಹಾಗೂ ಮನೋಜ್ ಝಾ ಅವರು ಶರದ್‌ರನ್ನು ಭೇಟಿ ಮಾಡಿ ವಿರೋಧ ಪಕ್ಷಗಳ ಒಗ್ಗಟ್ಟು ಮತ್ತು ಚಳವಳಿ ಕಟ್ಟುವ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಬಿಜೆಪಿ ಜತೆ ಕೈಜೋಡಿಸಿದ ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರ ನಡೆ ವಿರುದ್ಧ ಯಾದವ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶರದ್ ನಡೆ ಇದೀಗ ಕುತೂಹಲ ಹುಟ್ಟಿಸಿದೆ. ನಿತೀಶ್ ಕುಮಾರ್ ಜತೆ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಬಿಜೆಪಿ ವಿರೋಧಿ ರಂಗದ ನೇತೃತ್ವ ವಹಿಸುವಂತೆ ಲಾಲು ಪ್ರಸಾದ್ ಯಾದವ್, ಶರದ್ ಯಾದವ್ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಆದರೆ ಬಿಹಾರದಲ್ಲಿ ಶರದ್ ಇನ್ನೂ ತೂಕದ ವ್ಯಕ್ತಿತ್ವವಲ್ಲ. ಅವರು ಬಿಹಾರದಿಂದ ಚುನಾಯಿತರಾಗಿದ್ದರೂ ಬಿಹಾರ ಮೂಲದವರೂ ಅಲ್ಲ. ಇಷ್ಟಾಗಿಯೂ ಯಾವ ರೀತಿಯಲ್ಲಾದರೂ ನಿತೀಶ್ ಅವರಿಗೆ ಹಾನಿ ಮಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು.


ಡೆರಿಕ್ ಹಾಸ್ಯ
ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಇತ್ತೀಚೆಗೆ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಗೌರವಾರ್ಥ ಪಕ್ಷದ ಸಭಾನಾಯಕರ ಜತೆಗೂಡಿ ಭೋಜನಕೂಟ ಏರ್ಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಲ್ಲದೆ ಎಲ್ಲ ಸಚಿವರು, ವಿರೋಧ ಪಕ್ಷಗಳ ನಾಯಕರು ಭೋಜನಕೂಟದಲ್ಲಿ ಹಾಜರಿದ್ದರು. ಈ ಭೋಜನಕೂಟ ಶುದ್ಧ ಸಸ್ಯಾಹಾರ ಉತ್ಸವವಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಟಿಎಂಸಿ ನಾಯಕರಾಗಿರುವ ಡೆರಿಕ್ ಒಬ್ರಿಯಾನ್ ಅವರಿಗೆ ಇದು ಪಥ್ಯವಾದಂತೆ ಕಾಣಲಿಲ್ಲ. ಕೋಲ್ಕತಾ ಮೂಲದ ಒಬ್ರಿಯಾನ್ ಅವರಿಗೆ ಮಾಂಸಾಹಾರವಿಲ್ಲದೆ ಊಟ ಪರಿಪೂರ್ಣವಾಗುವುದಿಲ್ಲ. ಇದನ್ನು ಆತಿಥ್ಯ ವಹಿಸಿದ್ದ ಸುಮಿತ್ರಾ ಮಹಾಜನ್ ಅವರಿಗೂ ನೇರವಾಗಿ ಹೇಳಿಬಿಟ್ಟರು. ಟ್ವಿಟ್ಟರ್‌ನಲ್ಲಿ ಈ ಸಸ್ಯಾಹಾರಿ ಉತ್ಸವದ ಬಗ್ಗೆ ಪ್ರಸ್ತಾವಿಸಿದ ಅವರು ‘‘ಮನೆಗೆ ಹೋಗಿ ಫಿಶ್ ಕರಿ ಸೇವಿಸುತ್ತೇನೆ’’ ಎಂದು ಹೇಳಿದರು. ಆದರೆ ಇದು ಮಹಾಜನ್‌ಗೆ ರುಚಿಸಲಿಲ್ಲ. ಹಾಗಾದರೆ ಮಾಂಸಾಹಾರಿಯನ್ನು ತಡೆಯುವವರ್ಯಾರು?


ನಾಯ್ಡು ಮಾತಿನ ಮಾರ್ಗ
ವೆಂಕಯ್ಯ ನಾಯ್ಡು ಅವರ ಮಾತಿನ ವೈಖರಿ ಅವರನ್ನು ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ಮಾಡಿದೆ ಎಂದು ನೀವು ಯೋಚಿಸಿದರೆ ತಪ್ಪು; ನಾಯ್ಡು ಅವರ ಸುದೀರ್ಘ ರಾಜಕೀಯದುದ್ದಕ್ಕೂ ಅವರ ಪ್ರತಿಭೆಯನ್ನು ಪೂರ್ಣವಾಗಿ ಬಿಂಬಿಸಿದ್ದು ಅವರ ಸೃಜನಶೀಲತೆ ಹಾಗೂ ಪ್ರಾಸಬದ್ಧ ಅಭಿವ್ಯಕ್ತಿ; ಪಕ್ಷದ ಅಭ್ಯರ್ಥಿಯಾಗಿ ಮಾಡಿದ ಏಕೈಕ ಭಾಷಣದಲ್ಲೂ ಇದು ಪ್ರದರ್ಶನಗೊಂಡಿತು. ಸಂಸದರು ಕಲಾಪಕ್ಕೆ ಅಡ್ಡಿಮಾಡುವ ಬದಲು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು. ‘‘ನೀವು ಒಂದು ವಿಚಾರ ಒಪ್ಪುವುದಿಲ್ಲ ಎಂದಾದರೆ ಮಾತನಾಡಿ; ಸಭಾತ್ಯಾಗ ಮಾಡಿ. ಆದರೆ ಅಡ್ಡಿ ಒಡ್ಡಬೇಡಿ’’ ಎಂದು ಅವರು ಹೇಳುತ್ತಿದ್ದಂತೆ ಎಲ್ಲ ಪ್ರೇಕ್ಷಕರು ಸಹಜವಾಗಿಯೇ ನಗೆಗಡಲಲ್ಲಿ ತೇಲಿದರು. ಆದರೆ ನಾಯ್ಡು ಅಷ್ಟಕ್ಕೆ ನಿಲ್ಲಿಸಲಿಲ್ಲ. ಟೆಲಿವಿಷನ್ ಸುದ್ದಿವಾಹಿನಿಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದನ್ನು ಪ್ರಸ್ತಾವಿಸಿದ ಅವರು, ‘‘ಎಷ್ಟು ಬ್ರೇಕಿಂಗ್ ನ್ಯೂಸ್, ಮೇಕಿಂಗ್ ನ್ಯೂಸ್, ಫೇಕಿಂಗ್ ನ್ಯೂಸ್, ಗುಡ್‌ನ್ಯೂಸ್, ಬ್ಯಾಡ್‌ನ್ಯೂಸ್, ಆಜ್ ತಕ್, ಕಾಲ್ ತಕ್, ಕಬ್ ತಕ್ ಎಂದು ಲೆಕ್ಕ ಇಟ್ಟುಕೊಳ್ಳುವುದು ಕಷ್ಟ. ಹಿಂದಿನ ಕಾಲವೇ ಒಳ್ಳೆಯದು; ಆಗ ದೂರದರ್ಶನ ಮಾತ್ರ ಇತ್ತು. ದೂರ್ ಸೇ ದರ್ಶನ್ ಕರೋ ಪ್ರಣಾಮ್ ಕರೋ ಔರ್ ಖುಷ್ ರಹೋ.’’


ಶರ್ಮಾಗೆ ರಾಷ್ಟ್ರಪತಿ ಸಾಮೀಪ್ಯ?
ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆ) ಮಹೇಶ್ ಶರ್ಮಾ, ರಾಷ್ಟ್ರಪತಿ ಭವನದ ಜತೆಗಿನ ‘ಸಂಪರ್ಕ’ ದಿಂದ ಬೀಗುವಂತಾಗಿದೆ. ರಾಜಾಜಿಮಾರ್ಗ್‌ನ 10ನೆ ನಂಬರ್ ಬಂಗ್ಲೆಯನ್ನು ಇವರಿಗೆ ಹಂಚಿಕೆ ಮಾಡಲಾಗಿತ್ತು. ಹಿಂದೆ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ ಅಧಿಕಾರ ಪೂರೈಸಿದ ಬಳಿಕ ಅವರಿಗೆ ಈ ಬಂಗ್ಲೆ ಹಂಚಿಕೆಯಾಗಿತ್ತು, ಇದೀಗ ರಾಷ್ಟ್ರಪತಿ ಬಂಗ್ಲೆಯನ್ನು ಇತ್ತೀಚೆಗೆ ತೆರವುಗೊಳಿಸಿದ ಪ್ರಣವ್ ಮುಖರ್ಜಿಯವರಿಗೆ ಈ ನಿವಾಸ ಹಂಚಿಕೆಯಾಗಿದ್ದು, ಮಹೇಶ್ ಶರ್ಮಾ, ಅಕ್ಬರ್ ರಸ್ತೆಯ 10ನೆ ನಂಬರ್ ನಿವಾಸಕ್ಕೆ ವರ್ಗಾವಣೆಯಾಗುತ್ತಿದ್ದಾರೆ. ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ರಾಷ್ಟ್ರಪತಿ ಅಭ್ಯರ್ಥಿಯಾದಾಗ ಅಲ್ಪಕಾಲ ರಾಮನಾಥ್ ಕೋವಿಂದ್ ಈ ನಿವಾಸದಲ್ಲಿದ್ದರು. ಕೋವಿಂದ್ ತಮ್ಮ ಪ್ರಚಾರ ಅಭಿಯಾನ ಕೈಗೊಂಡದ್ದು ಇಲ್ಲಿಂದಲೇ. ಕೋವಿಂದ್ ಇದೀಗ ರಾಷ್ಟ್ರಪತಿ ಭವನ ಪ್ರವೇಶಿಸಿದ್ದಾರೆ. ಕೋವಿಂದ್ ಅವರ ಮಾಜಿ ನಿವಾಸ ಶರ್ಮಾಗೆ ಲಭಿಸಿದ್ದು, ಭವಿಷ್ಯದಲ್ಲಿ ದೊಡ್ಡ ನಿರೀಕ್ಷೆಗೆ ಇದು ಕಾರಣವಾಗಬಹುದೇ? ಯಾರಿಗೂ ಗೊತ್ತಿಲ್ಲ.


ಕುಗ್ಗುತ್ತಿದ್ದಾರೆ ರಾಹುಲ್!
ಬಿಹಾರದಲ್ಲಿ ಮಹಾಮೈತ್ರಿ ಮುರಿದು ಬಿದ್ದಿದ್ದು, ಈಗಾಗಲೇ ಘಾಸಿಗೊಂಡಿರುವ ಕಾಂಗ್ರೆಸ್‌ಗೆ ಮತ್ತು ಯುವರಾಜ ರಾಹುಲ್‌ಗಾಂಧಿಯವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆರ್‌ಜೆಡಿ ಮತ್ತು ಸಂಯುಕ್ತ ಜನತಾದಳ ನಡುವಿನ ವಿಚ್ಛೇದನದಲ್ಲಿ ಬಡವಾಗಿರುವುದು ಕಾಂಗ್ರೆಸ್ ಪಕ್ಷ. ಇದಕ್ಕೆ ಪಕ್ಷದ ನಾಯಕತ್ವವೇ ಹೊಣೆ. ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಶೋಕ್ ಚೌಧರಿ ಮೂರು ದಿನಗಳ ಕಾಲ ರಾಜಧಾನಿಯಲ್ಲಿ ಠಿಕಾಣಿ ಹೂಡಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯವರ ಜತೆ ಮಾತುಕತೆ ನಡೆಸಿದ್ದಾರೆ.

ಪ್ರಮುಖ ಎಚ್ಚರಿಕೆ ಸಂದೇಶ ರವಾನಿಸುವ ವೇಳೆಗೆ ಕಾಲ ಮಿಂಚಿಹೋಗಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜತೆ ಮಾತುಕತೆ ನಡೆಸಿ, ವಿಭಜನೆ ತಪ್ಪಿಸುವ ಉದ್ದೇಶ ಹೊಂದಿದ್ದರು. ಸಾರ್ವಜನಿಕ ಜೀವನದಲ್ಲಿ ಸ್ವಚ್ಛ ಹಿನ್ನೆಲೆ ಹೊಂದಿರಬೇಕು ಎಂಬ ಕುಮಾರ್ ಅವರ ನಿಲುವನ್ನು ಬೆಂಬಲಿಸಿ ರಾಹುಲ್ ತಲೆಯಾಡಿಸಿದ್ದರೆ, ಸೋನಿಯಾ ಮಾತ್ರ, ಉಪಮುಖ್ಯಮಂತ್ರಿ ಹುದ್ದೆಗೆ ತೇಜಸ್ವಿ ರಾಜೀನಾಮೆ ನೀಡಲು ಸಲಹೆ ನೀಡುವಂತೆ ಲಾಲುಗೆ ಸಲಹೆ ಮಾಡಲಿಲ್ಲ. ಆದರೆ ತಾಯಿ- ಮಗನ ಈ ತಂತ್ರಗಾರಿಕೆ ಅವರಿಗೇ ತಿರುಗುಬಾಣವಾಯಿತು. ಇದು ರಾಹುಲ್ ಗಾಂಧಿ ಬಗೆಗಿನ ವಿಶ್ವಾಸ ಅವರ ಪಕ್ಷದವರಲ್ಲೇ ಮತ್ತಷ್ಟು ಕ್ಷೀಣಿಸಲು ಕಾರಣವಾಯಿತು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಯೋಚನೆ ಇರುವ ಯಾವ ಪಕ್ಷದ ಬಗ್ಗೆಯೂ ಮಾತನಾಡಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News