×
Ad

ಕರ್ತವ್ಯ ನಿರತ ಎಎಸ್ಸೈ ಹೃದಯಾಘಾತದಿಂದ ಮೃತ್ಯು

Update: 2017-08-06 20:08 IST

ಬೆಂಗಳೂರು, ಆ.6: ಕರ್ತವ್ಯನಿರತ ಎಎಸ್ಸೈಯೊಬ್ಬರು ಹೃದಯಾಘಾತದಿಂದ ಮತೃಪಟ್ಟಿರುವ ದುರ್ಘಟನೆ ಇಲ್ಲಿನ ಇಂದಿರಾನಗರದಲ್ಲಿ ನಡೆದಿದೆ. ವಿಜಯನಗರ ಠಾಣೆಯ ಎಎಸ್ಸೈ ಚಂದ್ರಶೇಖರ್ (57) ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಪ್ರಕರಣವೊಂದರ ತನಿಖೆಗಾಗಿ ನಗರದ ಹೊಸಹಳ್ಳಿಯಿಂದ ಮೆಟ್ರೋದಲ್ಲಿ ಪ್ರಯಾಣ ಮಾಡಿ ಇಂದಿರಾನಗರ ಮೆಟ್ರೋ ಸ್ಟೇಷನ್‌ನಲ್ಲಿ ಇಳಿದು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತರ ಸ್ವಗ್ರಾಮ ಚನ್ನಪಟ್ಟಣ ಸಮೀಪದ ವಿರೂಪಾಕ್ಷಿಪುರದಲ್ಲಿ ರವಿವಾರ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಮಾಗಡಿ ರಸ್ತೆ ಪೊಲೀಸ್ ವಸತಿ ಸಮುಚ್ಛಯದಲ್ಲಿ ಕುಟುಂಬ ವಾಸವಿದ್ದು, ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಾಜಿನಗರ ಠಾಣೆಯಲ್ಲಿ ಮುಖ್ಯಪೇದೆಯಾಗಿದ್ದ ಚಂದ್ರಶೇಖರ್ 6 ತಿಂಗಳ ಹಿಂದೆ ಎಎಸ್ಸೈ ಬಡ್ತಿ ಪಡೆದು ವಿಜಯನಗರ ಠಾಣೆಗೆ ವರ್ಗಾವಣೆಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News